ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ನೆರವು: ಕಾಶ್ಮಿರದಲ್ಲಿ 370ನೇ ವಿಧಿ ಸ್ಥಾಪನೆ ಹೇಳಿಕೆ ನೀಡಿಲ್ಲ –ಎನ್‌ಸಿ

Last Updated 13 ಅಕ್ಟೋಬರ್ 2020, 4:04 IST
ಅಕ್ಷರ ಗಾತ್ರ

ಶ್ರೀನಗರ: ಚೀನಾ ಸರ್ಕಾರದ ನೆರವಿನೊಂದಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ 370ನೇ ವಿಧಿಯನ್ನು ಸ್ಥಾಪಿಸಲಾಗುವುದು ಎಂದು ನ್ಯಾಷನಲ್‌ ಕಾನ್ಫರೆನ್ಸ್ (ಎನ್‌ಸಿ)‌ ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಎಲ್ಲಿಯೂ ಹೇಳಿಲ್ಲ ಎಂದು ಎನ್‌ಸಿ ಸ್ಪಷ್ಟಪಡಿಸಿದೆ.

ಕಳೆದ ವರ್ಷ ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನದ 370ನೇ ವಿಧಿಯನ್ನು ರದ್ದುಮಾಡಿತ್ತು.

ಖಾಸಗಿ ಸುದ್ದಿವಾಹಿನಿಯ ಸಂದರ್ಶನವೊಂದರಲ್ಲಿ ಫಾರೂಕ್‌ ಅಬ್ದುಲ್ಲಾ ಅವರು ಚೀನಾ ಸರ್ಕಾರದ ಸಹಕಾರದಲ್ಲಿ ಕಣಿವೆ ರಾಜ್ಯದಲ್ಲಿ ಪುನಾ 370ನೇ ವಿಧಿಯನ್ನು ಸ್ಥಾಪಿಸುವ ಬಗ್ಗೆ ಮಾತನಾಡಿದ್ದಾರೆ ಎಂದು ಬಿಜೆಪಿ ಆರೋಪ ಮಾಡಿದೆ.

ನಮ್ಮ ನಾಯಕರ ಹೇಳಿಕೆಯನ್ನು ತಿರುಚಲಾಗಿದ್ದು ಬಿಜೆಪಿ ಆರೋಪ ಮಾಡಿರುವಂತೆ ಮತ್ತ 370ನೇ ವಿಧಿಯನ್ನು ಸ್ಥಾಪಿಸಲಾಗುವುದು ಎಂದು ಅವರು ಎಲ್ಲಿಯೂ ಹೇಳಿಲ್ಲ ಎಂದು ನ್ಯಾಷನಲ್‌ ಕಾನ್ಫರೆನ್ಸ್ ಪಕ್ಷ ಸ್ಪಷ್ಟಪಡಿಸಿದೆ.

ವಿಶೇಷ ಸ್ಥಾನಮಾನವನ್ನು ತೆರವು ಮಾಡಿರುವುದರಿಂದ ಕಣಿವೆ ಜನರಿಗೆ ಕೋಪ ಇದೆ. ಹಾಗೇ ಕೇಂದ್ರ ಸರ್ಕಾರದ ಈ ಕ್ರಮದ ಬಗ್ಗೆ ಚೀನಾಗೂ ಅಸಮಾಧಾನವಿದೆ ಎಂದು ಫಾರೂಕ್‌ ಅಬ್ದುಲ್ಲಾ ಸಂದರ್ಶನದಲ್ಲಿ ಹೇಳಿದ್ದರು. ಇದನ್ನು ತಿರುಚಿ ಬಿಜೆಪಿ ಆರೋಪ ಮಾಡಿದೆ ಎಂದು ನ್ಯಾಷನಲ್‌ ಕಾನ್ಫರೆನ್ಸ್ ಹೇಳಿದೆ.

ಚೀನಾ ವಿಚಾರವಾಗಿ ಅಬ್ದುಲ್ಲಾ ಯಾವುದೇ ವಿಚಾರವನ್ನು ಹೇಳಿಲ್ಲ, ವಿಶೇಷ ಸ್ಥಾನಮಾನವನ್ನು ತೆರವು ವಿಷಯದಲ್ಲಿ ಚೀನಾ ಅಧ್ಯಕ್ಷರನ್ನು ಎಳೆದುತರುವುದು ಸರಿಯಲ್ಲ ಎಂದು ಪಕ್ಷದ ವಕ್ತಾರರೊಬ್ಬರು ಹೇಳಿದ್ದಾರೆ. ಚೀನಾದ ಅಧ್ಯಕ್ಷರನ್ನು ಗುಜರಾತಿಗೆ ಕರೆಸಿಕೊಂಡು ಮಾತನಾಡಿ, ತಮಿಳುನಾಡಿನಲ್ಲಿ ಊಟ ಮಾಡಿಸಿ ಕಳುಹಿಸಿದವರು ಯಾರು ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ವಿಶೇಷ ಸ್ಥಾನಮಾನದ ತೆರವಿನ ವಿರುದ್ಧದ ಹೋರಾಟಕ್ಕಾಗಿ ನ್ಯಾಷನಲ್ ಕಾನ್ಫರೆನ್ಸ್‌, ಪಿಡಿಪಿ ಸೇರಿದಂತೆ ಆರು ಪಕ್ಷಗಳ ಮುಖಂಡರು ಕಳೆದ ಆಗಸ್ಟ್‌ ತಿಂಗಳಲ್ಲಿ ಸಭೆ ನಡೆಸಿ ಚರ್ಚೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT