ಎನ್‌ಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ: ಫಾರೂಕ್ ಅಬ್ದುಲ್ಲಾ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು ನ್ಯಾಷನಲ್ ಕಾನ್ಫರೆನ್ಸ್‌ನ (ಎನ್‌ಸಿ) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಹೊಸ ತಲೆಮಾರಿನವರಿಗೆ ಪಕ್ಷದ ಅತ್ಯುನ್ನತ ಸ್ಥಾನ ನೀಡಲು ಇದು ಸಕಾಲ ಎಂದು ಅವರು ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಕ್ಷದ ಅಧ್ಯಕ್ಷ ಸ್ಥಾನದ ಚುನಾವಣೆವರೆಗೆ ಅಥವಾ ಬೇರೊಬ್ಬರು ಜವಾಬ್ದಾರಿ ವಹಿಸಿಕೊಳ್ಳುವವರೆಗೂ ಅಧ್ಯಕ್ಷನಾಗಿ ಮುಂದುವರಿಯುತ್ತೇನೆ’ ಎಂದು ಸ್ಪಷ್ಟಪಡಿಸಿದರು. ಈ ಮಧ್ಯೆ ಚುನಾವಣೆಯ ವೇಳಾಪಟ್ಟಿ ಪ್ರಕಟವಾಗಿದ್ದು, ಡಿಸೆಂಬರ್ 5ರಂದು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ಇದಕ್ಕೂ ಮುನ್ನ ಪಕ್ಷದ ಮುಖ್ಯ ಕಚೇರಿಯಲ್ಲಿ ಬೆಳಿಗ್ಗೆ ಮಾತನಾಡಿದ ಅವರು, ‘ಪಕ್ಷದ ಅಧ್ಯಕ್ಷನಾಗಿ ಮುಂದುವರಿಯಲು ನನ್ನ ಆರೋಗ್ಯ ಸಹಕರಿಸುತ್ತಿಲ್ಲ, ಹೀಗಾಗಿ ರಾಜೀನಾಮೆ ನೀಡುತ್ತೇನೆ’ ಎಂದು ಪ್ರಕಟಿಸಿದರು.
‘ಅಬ್ದುಲ್ಲಾ ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದರೆ ಅವರ ಮಗ ಒಮರ್ ಅಬ್ದುಲ್ಲಾ ಪಕ್ಷದ ಸಾರಥ್ಯ ವಹಿಸಿಕೊಳ್ಳುವ ಸಾಧ್ಯತೆ ಇದೆ’ ಎಂದು ಪಕ್ಷದ ಹಿರಿಯ ಸದಸ್ಯರೊಬ್ಬರು ತಿಳಿಸಿದ್ದಾರೆ. ಒಮರ್ ಅಬ್ದುಲ್ಲಾ ಸದ್ಯ ಪಕ್ಷದ ಉಪಾಧ್ಯಕ್ಷರಾಗಿದ್ದಾರೆ.
1980ರಲ್ಲಿ ಫಾರೂಕ್ ಅಬ್ದುಲ್ಲಾ ಅವರು ಮೊಟ್ಟ ಮೊದಲ ಬಾರಿಗೆ ಶ್ರೀನಗರ ಕ್ಷೇತ್ರದಿಂದ ಸಂಸತ್ತಿಗೆ ಅವಿರೋಧವಾಗಿ ಆಯ್ಕೆಯಾಗಿದ್ದರು. 1981ರಲ್ಲಿ ಮೊದಲ ಬಾರಿಗೆ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.