ಮಂಗಳವಾರ, ಡಿಸೆಂಬರ್ 7, 2021
24 °C

ಜಮ್ಮು ಮತ್ತು ಕಾಶ್ಮೀರ ಅರಣ್ಯದಲ್ಲಿ ಉಗ್ರರು; 15ನೇ ದಿನಕ್ಕೆ ಕಾಲಿಟ್ಟ ಕಾರ್ಯಾಚರಣೆ

ಪಿಟಿಐ Updated:

ಅಕ್ಷರ ಗಾತ್ರ : | |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಡಿ ಜಿಲ್ಲೆಗಳಾದ ಪೂಂಚ್‌ ಮತ್ತು ರಾಜೌರಿಯ ಅರಣ್ಯ ಪ್ರದೇಶದಲ್ಲಿ ಅಡಗಿಕೊಂಡಿರುವ ಉಗ್ರರ ಪತ್ತೆಗೆ ನಡೆಯುತ್ತಿರುವ ಕಾರ್ಯಾಚರಣೆ 15ನೇ ದಿನಕ್ಕೆ ಕಾಲಿಟ್ಟಿದೆ. ಈ ಹಿನ್ನೆಲೆಯಲ್ಲಿ ಭಾರಿ ಗುಂಡಿನ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ʼಭಟ್ಟಿ ದುರೈನ್‌ ಅರಣ್ಯದಲ್ಲಿ ಭದ್ರತಾ ಸಿಬ್ಬಂದಿ ಮತ್ತು ಉಗ್ರರು ಮತ್ತೆ ಮುಖಾಮುಖಿಯಾಗಿ ಗುಂಡಿನ ದಾಳಿ ನಡೆಸಲಾಗಿದೆಯೇ ಎಂಬುದು ಸದ್ಯ ಸ್ಪಷ್ಟವಾಗಿಲ್ಲ. ಉಗ್ರರು ದಟ್ಟಾರಣ್ಯದಲ್ಲಿನ ಗುಹೆಗಳಲ್ಲಿ ತಲೆ ಮರೆಸಿಕೊಂಡಿರುವ ಸಾಧ್ಯತೆ ಇದೆʼ ಎಂದು ಹೇಳಿದ್ದಾರೆ.

ಅಕ್ಟೋಬರ್‌ 11ರಂದು ಕಾರ್ಯಾಚರಣೆ ಆರಂಭವಾದಾಗಿನಿಂದ ಅಧಿಕಾರಿಗಳಿಬ್ಬರು ಸೇರಿದಂತೆ ಭಾರತೀಯ ಸೇನೆಯ 9 ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಪಾಕಿಸ್ತಾನ ಮೂಲದ ಬಂಧಿತ ಉಗ್ರನೊಬ್ಬನೂ ಮೃತಪಟ್ಟಿದ್ದಾನೆ.

ಪೂಂಚ್‌ನ ಸುರನ್‌ಕೋಟ್ ಅರಣ್ಯದಲ್ಲಿ ನಡೆದ ಮೊದಲ ದಿನದ ಕಾರ್ಯಾಚರಣೆ ವೇಳೆ ಐವರು ಮತ್ತು ಮೆಂಧಾರ್‌ನ ಭಟ್ಟಿ ದುರೈನ್‌ನಲ್ಲಿ ಅಕ್ಟೋಬರ್‌ 14ರಂದು ನಡೆದ ಕಾರ್ಯಾಚರಣೆ ವೇಳೆ ನಾಲ್ವರು ಯೋಧರು ಮೃತಪಟ್ಟಿದ್ದಾರೆ.

ಕಾರ್ಯಾಚರಣೆ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಉಗ್ರನನ್ನು ವಿಚಾರಣೆ ಸಲುವಾಗಿ ಜಮ್ಮುವಿನ ಕೋಟ್‌ ಭಲ್ವಾಲ್‌ ಸೆಂಟ್ರಲ್‌ ಜೈಲಿನಿಂದ ಮೆಂಧಾರ್‌ ಪೊಲೀಸ್‌ ರಿಮ್ಯಾಂಡ್‌ಗೆ ಕರೆದೊಯ್ಯುವ‌ ವೇಳೆ ಮೃತಪಟ್ಟಿದ್ದಾನೆ.

ಸುರನ್‌ಕೋಟ್‌ ಮತ್ತು ಮೆಂಧಾರ್‌ ಜೊತೆಗೆ ರಾಜೌರಿ ಜಿಲ್ಲೆಯ ಥಾನಮಂಡಿ ಅರಣ್ಯದಲ್ಲಿಯೂ ಕಾರ್ಯಾಚರಣೆ ಮುಂದುವರಿದಿದೆ. ಉಗ್ರರು ತಪ್ಪಿಸಿಕೊಳ್ಳದಂತೆ ಖಚಿತಪಡಿಸಿಕೊಳ್ಳಲು ಡ್ರೋಣ್‌ ಕಣ್ಗಾವಲು ಇಡಲಾಗಿದೆ.

ಉಗ್ರರಿಗೆ ಆಹಾರ, ಆಶ್ರಯ ಸೇರಿದಂತೆ ವ್ಯವಸ್ಥಿತ ನೆರವು ನೀಡಿದ ಆರೋಪದ ಮೇಲೆ ಇಬ್ಬರು ಮಹಿಳೆಯರು ಸೇರಿ ಒಟ್ಟು ಹನ್ನೆರಡು ಜನರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

ಇದನ್ನೂ ಓದಿ: ರಾಜೌರಿ, ಪೂಂಚ್‌ನ ದಟ್ಟಾರಣ್ಯದಲ್ಲಿ ಅಡಗಿರುವ ಉಗ್ರರ ಬೇಟೆಗೆ ಭಾರೀ ಕಾರ್ಯಾಚರಣೆ ​

ಕಾರ್ಯಾಚರಣೆ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಮೆಂಧಾರ್‌ ಮತ್ತು ಥಾನಮಂಡಿ ನಡುವಿನ ಜಮ್ಮು-ರಾಜೌರಿ ಹೆದ್ದಾರಿಯಲ್ಲಿ ಹತ್ತನೇ ದಿನವೂ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

‌ಜಮ್ಮು ಪ್ರದೇಶದ ರಾಜೌರಿ ಮತ್ತು ಪೂಂಚ್‌, ಈ ವರ್ಷದ ಜೂನ್‌ನಿಂದ ಅತಿ ಹೆಚ್ಚು ನುಸುಳುವಿಕೆ ಪ್ರಕರಣಗಳಿಗೆ ಸಾಕ್ಷಿಯಾಗಿವೆ. ಇದರ ಪರಿಣಾಮವಾಗಿ ನಡೆದ ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ 9 ಉಗ್ರರು ಹತ್ಯೆಯಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು