ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ: ಇಬ್ಬರು ಮನೆಗೆಲಸದ ಮಹಿಳೆಯರನ್ನು ಕೊಂದು ₹95 ಲಕ್ಷ ಲೂಟಿ ಕೇಸ್– ಐವರ ಸೆರೆ

Last Updated 18 ನವೆಂಬರ್ 2021, 4:14 IST
ಅಕ್ಷರ ಗಾತ್ರ

ನವದೆಹಲಿ: ಈಶಾನ್ಯ ದೆಹಲಿಯ ಜಗ್ಪುರ ಬಡಾವಣೆಯಲ್ಲಿ ಇಬ್ಬರು ಮನೆಗೆಲಸದ ಮಹಿಳೆಯರನ್ನು ಕೊಂದು ₹ 95 ಲಕ್ಷ ದೋಚಿದ್ದ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಮೂಲದ ಮೀನಾ ರಾಯ್(35), ಸುಜೈಲಾ(40) ಹತ್ಯೆಗೀಡಾದಮನೆಗೆಲಸದ ಮಹಿಳೆಯರು. ಜೂನ್‌ನಲ್ಲಿ ಕೆಲಸ ಆರಂಭಿಸಿದಾಗಿನಿಂದ ಸ್ಟಾಫ್ ಕ್ವಾಟ್ರಸ್‌ನಲ್ಲಿ ವಾಸಿಸುತ್ತಿದ್ದರು.

ಈ ಪ್ರಕರಣದ ಪ್ರಮುಖ ಸಂಚುಕೋರ ಸಚಿತ್ ಸಕ್ಸೇನಾ ಉತ್ತರ ಪ್ರದೇಶ ಮೂಲದವನಾಗಿದ್ದು, ಈ ಹಿಂದಿನ ಮನೆಗೆಲಸದ ಮಹಿಳೆಯ ಸೋದರಳಿಯ ಎಂದು ಗುರುತಿಸಲಾಗಿದೆ.

ಪೊಲೀಸರ ಪ್ರಕಾರ, ಆರೋಪಿಯು ತನ್ನ ಸಹಚರರಾದ ಪ್ರಶಾಂತ್ ಬಸಿಸ್ತಾ, ಅನಿಕೇತ್ ಝಾ, ರಮೇಶ್ ಮತ್ತು ಧನಂಜಯ್ ಗುಲಿಯಾ ಅವರೊಂದಿಗೆ ಮನೆಯಲ್ಲಿ ದೊಡ್ಡ ಮೊತ್ತದ ನಗದು ಇರುವ ಆಂತರಿಕ ಮಾಹಿತಿಯ ಆಧಾರದ ಮೇಲೆ ದರೋಡೆ ಮಾಡಲು ಸಂಚು ರೂಪಿಸಿದ್ದನು. ಸೋಮವಾರ ಮಧ್ಯರಾತ್ರಿಯಲ್ಲಿ ಯೋಜನೆ ಮಾಡಿ ಕೃತ್ಯ ಎಸಗಿದ್ದಾನೆ.

ದರೋಡೆ ಸಮಯದಲ್ಲಿ ಯಾರಾದರೂ ಪ್ರತಿರೋಧ ಒಡ್ಡಿದರೆ ಅವರನ್ನು ಹತ್ಯೆ ಮಾಡಲು ಆರೋಪಿಗಳು ಸಿದ್ಧರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಯೋಜನೆ ರೂಪಿಸಿದ್ದು, ಕ್ಲೋರೋಫಾರ್ಮ್, ಟೇಪ್, ಕಟ್ಟರ್, ಪಂಚ್, ಹಗ್ಗ, ಮಾಸ್ಕ್‌ಗಳು ಮತ್ತು ಇತರ ವಸ್ತುಗಳನ್ನು ವ್ಯವಸ್ಥೆ ಮಾಡಿಕೊಂಡಿದ್ದಾಗಿ ಆರೋಪಿಗಳು ವಿಚಾರಣೆಯ ಸಮಯದಲ್ಲಿ ಬಹಿರಂಗಪಡಿಸಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತೆ (ಆಗ್ನೇಯ) ಇಶಾ ಪಾಂಡೆ ತಿಳಿಸಿದ್ದಾರೆ.

ತಮ್ಮ ಗುರುತನ್ನು ಮರೆಮಾಚಲು, ಅವರು ಸಾಮಾನ್ಯ ಫೋನ್ ಕರೆಗಳಿಗೆ ಬದಲಾಗಿ ವಿಒಐಪಿ(ಇಂಟರ್ನೆಟ್ ಆಧಾರಿತ ಕರೆ) ಅನ್ನು ಬಳಸಿದ್ದರು. ಘಟನಾ ಸ್ಥಳಕ್ಕೆ ತಮ್ಮ ಮೊಬೈಲ್ ಫೋನ್‌ಗಳನ್ನು ತೆಗೆದುಕೊಂಡು ಹೋಗಿರಲಿಲ್ಲ. ಯೋಜನೆಯ ಪ್ರಕಾರ, ಅವರು ತಮ್ಮ ಹೆಸರುಗಳನ್ನು ಸಂಖ್ಯೆ 1, 2, 3, 4 ಮತ್ತು 5 ಎಂದು ಮಾಡಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಮಧ್ಯರಾತ್ರಿ 1.30ರ ಸುಮಾರಿಗೆ ಮುಖ್ಯ ಬಾಗಿಲನ್ನು ಒಡೆದು ಮನೆಯೊಳಗೆ ನುಗ್ಗಿ ದರೋಡೆ ಮಾಡಿದ್ದರು.

‘ದರೋಡೆ ಮಾಡಲು ಅವರು ಕೊಠಡಿಗೆ ತೆರಳಿದಾಗ ಮನೆಗೆಲಸದ ಮಹಿಳೆ ಮೀನಾ ರಾಯ್ ಎಚ್ಚರಗೊಂಡಿದ್ದಾರೆ. ಅವರ ಮೂಗಿಗೆ ಕ್ಲೋರೊಫಾರ್ಮ್ ಹಾಕಿ ಹಗ್ಗದಿಂದ ಕೈಕಾಲುಗಳನ್ನು ಕಟ್ಟಿ ಹಾಕಿದ್ದಾರೆ. ಮತ್ತೊಂದು ಕೊಠಡಿಯಲ್ಲಿದ್ದ ಮತ್ತೊಬ್ಬ ಮನೆಗೆಲಸದ ಮಹಿಳೆಯನ್ನೂ ದಿಂಬುಗಳಿಂದ ಕೊಂದಿದ್ದರು’ಎಂದು ಇಶಾ ಹೇಳಿದ್ದಾರೆ.

ಈ ಐದೂ ಆರೋಪಿಗಳು ಸಮೀಪದ ಮನೆಗಳಲ್ಲಿ ಹಾಕಲಾಗಿದ್ದ ಸಿಸಿಟಿವಿ ದೃಶ್ಯದಲ್ಲಿ ಪತ್ತೆಯಾಗಿದ್ದು, ಅದರ ಜಾಡುಹಿಡಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT