ಸೋಮವಾರ, ಜೂನ್ 14, 2021
26 °C

ಹಿನ್ನೋಟ-2020: ಜಗತ್ತಿಗೆ ಮುಸುಕಿದ ಕೋವಿಡ್‌ ಕಾರ್ಮೋಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಣ್ಣಿಗೆ ಕಾಣದ ಕೊರೊನಾ ವೈರಸ್‌ 2020ನೇ ವರ್ಷದಲ್ಲಿ ಜಗತ್ತನ್ನು ಕಾಡಿತು. ಕೆಲವೇ ತಿಂಗಳುಗಳಲ್ಲಿ ಜಗತ್ತಿನ ಚಿತ್ರಣವನ್ನು ಬದಲಿಸಿತು. ಕಂಡು ಕೇಳರಿಯದ ‘ಲಾಕ್‌ಡೌನ್‌’ ಎಂಬ ವ್ಯವಸ್ಥೆಯನ್ನು ರಾಷ್ಟ್ರಗಳು ಜಾರಿಮಾಡಿದವು. ಅರ್ಥವ್ಯವಸ್ಥೆ, ಜನಜೀವನ, ಸಂಚಾರ ವ್ಯವಸ್ಥೆ ಎಲ್ಲವೂ ಏರುಪೇರಾದವು. ಈ ಪರಿಸ್ಥಿತಿಯ ಬಾಲ ಹಿಡಿದುಕೊಂಡೇ ಜಗತ್ತು 2021ನ್ನು ಪ್ರವೇಶಿಸುತ್ತಿದೆ.

ಇತರ ರಾಷ್ಟ್ರಗಳಂತೆ 2020ರಲ್ಲಿ ಭಾರತವನ್ನು ಸಹ ಕೋವಿಡ್‌ ತೀವ್ರವಾಗಿ ಕಾಡಿತು. 2020ರ ಜನವರಿ 30ರಂದು ಕೇರಳದಲ್ಲಿ ಮೊದಲ ಕೋವಿಡ್‌ ಪ್ರಕರಣ ಪತ್ತೆಯಾಗಿತ್ತು. ಮಾರ್ಚ್‌ ಅಂತ್ಯದ ವೇಳೆಗೆ ದೇಶದಲ್ಲಿ ಸಾವಿರಕ್ಕೂ ಹೆಚ್ಚು ಕೋವಿಡ್ ಸಕ್ರಿಯ ಪ್ರಕರಣಗಳು ಇದ್ದವು. ಮಾರ್ಚ್‌ 22ರಂದು ಜನತಾ ಕರ್ಫ್ಯೂ, ಮಾರ್ಚ್ 24ರಿಂದ ಲಾಕ್‌ಡೌನ್ ಜಾರಿಯಾಯಿತು. ಕೋಟ್ಯಂತರ ಜನರು ಉದ್ಯೋಗ ಕಳೆದುಕೊಂಡರು. ನಗರದಿಂದ ಹಳ್ಳಿಗಳಿಗೆ ಮರುವಲಸೆ ಆರಂಭವಾಯಿತು. ಸಾರಿಗೆ ವ್ಯವಸ್ಥೆ ಇಲ್ಲದೆ, ಕೋಟ್ಯಂತರ ವಲಸೆ ಕಾರ್ಮಿಕರು ಕಾಲ್ನಡಿಗೆಯಲ್ಲಿ ತಮ್ಮ ಹಳ್ಳಿಗಳತ್ತ ಹೊರಟರು. ನೂರಾರು ಮಂದಿ ಈ ಪಯಣದಲ್ಲಿ ಪ್ರಾಣ ಕಳೆದುಕೊಂಡರು. ಹೀಗೆ ಪ್ರಾಣ ಕಳೆದುಕೊಂಡ ಕಾರ್ಮಿಕರ ಬಗ್ಗೆ ಯಾವುದೇ ದಾಖಲೆ ನಿರ್ವಹಣೆ ಮಾಡಿಲ್ಲ ಎಂದು ಕೇಂದ್ರ ಕಾರ್ಮಿಕ ಸಚಿವಾಲಯವು ಆರ್‌ಟಿಐ ಅರ್ಜಿಯೊಂದಕ್ಕೆ ಉತ್ತರ ನೀಡಿತು.

ಲಾಕ್‌ಡೌನ್ ತೆರವಾದ ನಂತರ ದೇಶದಾದ್ಯಂತ ಸಂಘಟಿತ ವಲಯದಲ್ಲಿ 2 ಕೋಟಿಗೂ ಹೆಚ್ಚು ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ವರದಿಗಳು ಹೇಳಿದವು. ಅಸಂಘಟಿತ ವಲಯದಲ್ಲಿ ಆದ ಉದ್ಯೋಗ ನಷ್ಟದ ಬಗ್ಗೆ ಯಾವುದೇ ದಾಖಲೆ ಇಲ್ಲ.

ದೇಶದಾದ್ಯಂತ ಈವರೆಗೆ 1.02 ಕೋಟಿ ಜನರು ಕೋವಿಡ್‌ಗೆ ತುತ್ತಾಗಿದ್ದಾರೆ. ಇವರಲ್ಲಿ 98 ಲಕ್ಷಕ್ಕೂ ಹೆಚ್ಚು ಜನರು ಗುಣಮುಖರಾಗಿದ್ದಾರೆ. 1.48 ಲಕ್ಷದಷ್ಟು ಜನರು ಮೃತಪಟ್ಟಿದ್ದಾರೆ. ಕೋವಿಡ್ ತಡೆಗಟ್ಟಲು ದೇಶದಲ್ಲಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಇನ್ನಷ್ಟೇ ಆರಂಭವಾಗಬೇಕಿದೆ.


ದೆಹಲಿ ಕೋಮುಗಲಭೆಯಲ್ಲಿ ಮನೆ ಕಳೆದುಕೊಂಡ ಕುಟುಂಬ

ಸಿಎಎ ವಿರುದ್ಧ ಹೋರಾಟ
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ 2019ರ ಡಿಸೆಂಬರ್‌ನಲ್ಲಿ ಆರಂಭವಾದ ಪ್ರತಿಭಟನೆಯು 2020ರ ಆರಂಭದಲ್ಲಿ ತೀವ್ರತೆ ಪಡೆಯಿತು. ಕೋವಿಡ್ ಲಾಕ್‌ಡೌನ್ ಹೇರಿಕೆ ಆಗುವವರೆಗೂ ದೇಶದಾದ್ಯಂತ ಪ್ರತಿಭಟನೆ ನಡೆಯುತ್ತಿತ್ತು.

ದೆಹಲಿಯ ಶಹೀನಾಬಾಗ್‌ನಲ್ಲಿ ನಡೆದ ಪ್ರತಿಭಟನೆ, ವಿಶ್ವದ ಗಮನ ಸೆಳೆದಿತ್ತು. ಮುಸ್ಲಿಂ ಮಹಿಳೆಯರೇ ಸಂಘಟಿಸಿದ್ದ ಈ
ಪ್ರತಿಭಟನೆಯಲ್ಲಿ ಮಕ್ಕಳು, ವಯಸ್ಕರು ಮತ್ತು ವೃದ್ಧರು ಪಾಲ್ಗೊಂಡಿದ್ದರು. ಪಾಳಿಯ ಸ್ವರೂಪದಲ್ಲಿ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗಿಯಾದರು.

ಸಿಎಎ ವಿರುದ್ಧ ಪೂರ್ವ ದೆಹಲಿಯಲ್ಲಿ ಆರಂಭವಾದ ಪ್ರತಿಭಟನೆಯು ಹಿಂದೂ-ಮುಸ್ಲಿಮರ ನಡುವೆ ಕೋಮು ಗಲಭೆಗೆ ಕಾರಣವಾಯಿತು. ಒಂದು ವಾರದವರೆಗೂ ನಡೆದ ಗಲಭೆಯಲ್ಲಿ 53 ಮಂದಿ ಮೃತರಾದರು. ನೂರಾರು ಜನರು ಗಾಯಗೊಂಡರು.

ಸಿಎಎ ವಿರುದ್ಧದ ಪ್ರತಿಭಟನೆ ವೇಳೆಯೇ, ದೇಶದ ಗಮನ ಸೆಳೆದ ಮತ್ತೊಂದು ಪ್ರತಿಭಟನೆ ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳದ್ದು. ವಿದ್ಯಾರ್ಥಿನಿಲಯದ ಶುಲ್ಕ ಏರಿಕೆ ವಿರುದ್ಧ ಆರಂಭವಾದ ಪ್ರತಿಭಟನೆಯು ಕ್ಯಾಂಪಸ್‌ನಲ್ಲಿ ಮಾರಕಾಸ್ತ್ರಗಳ ಮೂಲಕ ದಾಳಿ ನಡೆಸುವ ಮಟ್ಟ ತಲುಪಿತ್ತು. ವಿದ್ಯಾರ್ಥಿ ಸಂಘಟನೆಗಳ ಪದಾಧಿಕಾರಿಗಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿತ್ತು.

ರೈತರ ಪ್ರತಿಭಟನೆ
ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ನೂತನ ಕೃಷಿ ಸುಧಾರಣಾ ಕಾಯ್ದೆಗಳ ವಿರುದ್ಧ ಪಂಜಾಬ್ ಮತ್ತು ಹರಿಯಾಣ ರೈತರು ಆರಂಭಿಸಿದ ದೆಹಲಿ ಚಲೊ ಪ್ರತಿಭಟನಾ ಮೆರವಣಿಗೆಯು ಈಗ ತೀವ್ರ ಸ್ವರೂಪ ಪಡೆದಿದೆ. ಕಾಯ್ದೆಗಳಿಗೆ ತಿದ್ದುಪಡಿ ತರುವುದಾಗಿ ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ, ಕಾಯ್ದೆಗಳನ್ನು ರದ್ದುಪಡಿಸಲೇಬೇಕು ಎಂಬ ತಮ್ಮ ಪಟ್ಟನ್ನು ರೈತರು ಸಡಿಲಿಸಿಲ್ಲ. ಪ್ರತಿಭಟನೆ ಆರಂಭವಾಗಿ 30ಕ್ಕೂ ಹೆಚ್ಚು ದಿನಗಳು ಕಳೆದಿವೆ.


ಜ್ಯೋತಿರಾದಿತ್ಯ ಸಿಂಧಿಯಾ, ತೇಜಸ್ವಿ ಯಾದವ್, ಅರವಿಂದ ಕೇಜ್ರಿವಾಲ್

ರಾಜಕಾರಣದ ಏರಿಳಿತ
ದೇಶದ ರಾಜಕಾರಣದ ಸಾಕಷ್ಟು ಏಳು-ಬೀಳುಗಳಿಗೂ 2020 ಸಾಕ್ಷಿಯಾಗಿದೆ. ತೀವ್ರ ಕುತೂಹಲ ಕೆರಳಿಸಿದ್ದ ದೆಹಲಿ ವಿಧಾನಸಭಾ ಚುನಾವಣೆಯ 70 ಸ್ಥಾನಗಳಲ್ಲಿ 62ರಲ್ಲಿ ಗೆಲ್ಲುವ ಮೂಲಕ ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿ ತನ್ನ ಸರ್ಕಾರವನ್ನು ಉಳಿಸಿಕೊಂಡಿತು. ಎಂಟು ಸ್ಥಾನಗಳನ್ನು ಪಡೆಯುವ ಮೂಲಕ ಬಿಜೆಪಿ ತನ್ನ ಸಾಧನೆಯನ್ನು ಉತ್ತಮಪಡಿಸಿಕೊಂಡರೆ, ಕಾಂಗ್ರೆಸ್‌ನದ್ದು
ಈ ಚುನಾವಣೆಯಲ್ಲಿ ಶೂನ್ಯಸಾಧನೆ.

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಸರ್ಕಾರವನ್ನು ಉರುಳಿಸುವ ಕೆಲಸವನ್ನು ಬಿಜೆಪಿ ಮಾಡಿತು. ಕಾಂಗ್ರೆಸ್‌ನ 22 ಶಾಸಕರು ಬಿಜೆಪಿ ಸೇರಿದರು. ಕಾಂಗ್ರೆಸ್‌ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರು ಬಿಜೆಪಿ ಸೇರುವ ಮೂಲಕ, ಕಾಂಗ್ರೆಸ್‌ಗೆ ದೊಡ್ಡ ಹೊಡೆತ ನೀಡಿದರು. ಮುಖ್ಯಮಂತ್ರಿ ಸ್ಥಾನದಿಂದ ಕಮಲನಾಥ್ ಅವರು ಕೆಳಗಿಳಿಯುವುದರ ಜತೆಗೆ ಕಾಂಗ್ರೆಸ್ ಸರ್ಕಾರವೂ ಪತನವಾಯಿತು. ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚಿಸಿತು. ಕಾಂಗ್ರೆಸ್‌ ತೊರೆದಿದ್ದ 19 ಜನರನ್ನು ಉಪಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಬರುವಲ್ಲಿ ಯಶಸ್ವಿಯಾದ ಬಿಜೆಪಿ, ಸರ್ಕಾರವನ್ನು ಭದ್ರಪಡಿಸಿಕೊಂಡಿತು.

ರಾಜಸ್ಥಾನದಲ್ಲಿನ ಕಾಂಗ್ರೆಸ್‌ ಸರ್ಕಾರವನ್ನು ಉರುಳಿಸುವ ಪ್ರಯತ್ನಗಳು ನಡೆದವು. ಆದರೆ ಪಕ್ಷದ ನಾಯಕರ ನಡುವಣ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿ, ಸರ್ಕಾರ ಉಳಿಸುವಲ್ಲಿ ಕಾಂಗ್ರೆಸ್ ವರಿಷ್ಠರು ಯಶಸ್ವಿಯಾದರು.

2020ರಲ್ಲಿ ಹೆಚ್ಚು ಗಮನ ಸೆಳೆದದ್ದು ಬಿಹಾರ ವಿಧಾನಸಭಾ ಚುನಾವಣೆ. ಜೆಡಿಯು- ಬಿಜೆಪಿಯ ಎನ್‌ಡಿಎ ಮೈತ್ರಿಕೂಟವು ಸುಲಭವಾಗಿ ಚುನಾವಣೆ ಗೆದ್ದುಬಿಡುತ್ತದೆ ಎಂಬಂತೆ ಇದ್ದ ಚಿತ್ರಣವನ್ನು ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಬದಲಿಸಿಬಿಟ್ಟರು. ಏಕಪಕ್ಷೀಯವಾಗಿದ್ದ ಚುನಾವಣೆಯಲ್ಲಿ ಎನ್‌ಡಿಎಗೆ ಅವರು ಪ್ರಬಲ ಪೈಪೋಟಿ ನೀಡಿದರು. ಆದರೂ ಆರ್‌ಜೆಡಿ-ಕಾಂಗ್ರೆಸ್‌ ಮಹಾಮೈತ್ರಿಯು ಸೋಲಬೇಕಾಯಿತು.


ಕೋಯಿಕ್ಕೋಡ್‌ನಲ್ಲಿ ಕಂದಕಕ್ಕೆ ಜಾರಿ ತುಂಡಾಗಿದ್ದ ಏರ್‌ ಇಂಡಿಯಾ ವಿಮಾನ

ದುರಂತಗಳ ಸರಮಾಲೆ
2020ರಲ್ಲಿ ದೇಶದಲ್ಲಿ ಸಂಭವಿಸಿದ ಹಲವು ದುರಂತಗಳಲ್ಲಿ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಸ್ಸಾಂನ ಇಂಡಿಯನ್ ಆಯಿಲ್ ಘಟಕದಲ್ಲಿ, ಸಂಗ್ರಹಾಗಾರಕ್ಕೆ ಬಿದ್ದ ಬೆಂಕಿಯನ್ನು ಆರಿಸಲು ಹಲವು ವಾರಗಳೇ ಬೇಕಾಯಿತು. ಈ ಕಾರ್ಯಾಚರಣೆಯಲ್ಲಿ ಹಲವರು ಪ್ರಾಣ ಕಳೆದುಕೊಂಡರು. ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿನ ಎಲ್‌ಜಿ ಪಾಲಿಮರ್ಸ್ ಕಾರ್ಖಾನೆಯಿಂದ ವಿಷಾನಿಲ ಸೋರಿಕೆಯಾಗಿ ಒಂದು ಮಗುವೂ ಸೇರಿದಂತೆ, 8 ಜನರು ಮೃತಪಟ್ಟರು. 250ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದರು.

ಕೋವಿಡ್‌ ಲಾಕ್‌ಡೌನ್‌ನಿಂದ ವಿದೇಶಗಳಲ್ಲಿ ಸಿಲುಕಿದ್ದ ಭಾರತೀಯರನ್ನು ಮರಳಿ ದೇಶಕ್ಕೆ ಕರೆತರುವ ಕಾರ್ಯಾಚರಣೆಯಲ್ಲಿದ್ದ ಏರ್‌ ಇಂಡಿಯಾ ವಿಮಾನವು ಪತನವಾಗಿದ್ದು, ಈ ವರ್ಷದ ದೊಡ್ಡ ದುರಂತಗಳಲ್ಲಿ ಒಂದು. ಆಗಸ್ಟ್ 7ರಂದು ಕೇರಳದ ಕೋಯಿಕ್ಕೋಡ್‌ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವ ವೇಳೆ, ವಿಮಾನವು ರನ್‌ವೇಯಿಂದ ಜಾರಿ ಕಂದಕಕ್ಕೆಬಿದ್ದು ಮೂರು ತುಂಡಾಗಿತ್ತು. ಘಟನೆಯಲ್ಲಿ 19 ಮಂದಿ ಮೃತಪಟ್ಟಿದ್ದರು.

ಆಗಸ್ಟ್‌ನಲ್ಲಿ ಕೇರಳದ ಇಡುಕ್ಕಿಯಲ್ಲಿ ಸುರಿದ ಭಾರಿ ಮಳೆಗೆ 29 ಮಂದಿ ಬಲಿಯಾದರು. ಹಲವೆಡೆ ಭೂಕುಸಿತ ಉಂಟಾಯಿತು. ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಪಶ್ಚಿಮ ಬಂಗಾಳವು ಹಲವು ಚಂಡಮಾರುತಗಳನ್ನು ಎದುರಿಸಿದವು. ಆಸ್ತಿ-ಪಾಸ್ತಿಗೆ ಹಾನಿಯಾದರೂ, ಮುನ್ನೆಚ್ಚರಿಕೆಯ ಕಾರಣ ಸಾವುಗಳ ಸಂಖ್ಯೆ ಕಡಿಮೆ ಇತ್ತು. ಆದರೆ ಈಚೆಗೆ ತೆಲಂಗಾಣದ ಹೈದರಾಬಾದ್‌ನಲ್ಲಿ ಸುರಿದ ಮಳೆಯು ಭಾರಿ ಹಾನಿ ಉಂಟುಮಾಡಿತು.

ಬೆಳೆ ತಿನ್ನುವ ಮಿಡತೆಗಳ ಹಾವಳಿ 2020ರಲ್ಲಿ ತೀವ್ರವಾಗಿತ್ತು. ಹವಾಮಾನ ವೈಪರೀತ್ಯದ ಕಾರಣ ತಲೆದೋರುವ ಈ ಸಮಸ್ಯೆಯು ಇಷ್ಟು ತೀವ್ರವಾದದ್ದು 23 ವರ್ಷಗಳಲ್ಲಿ ಇದೇ ಮೊದಲು. ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಲಕ್ಷಾಂತರ ಎಕರೆಯಷ್ಟು ಬೆಳೆ ನಾಶವಾಯಿತು. 


ಅಯೋಧ್ಯೆಯಲ್ಲಿ ರಾಮಂದಿರಕ್ಕೆ ಪ್ರಧಾನಿಯಿಂದ ಶಿಲಾನ್ಯಾಸ

ರಾಮ ಮಂದಿರಕ್ಕೆ ಶ್ರೀಕಾರ
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿದ್ದು 2020ನೇ ವರ್ಷದ ಪ್ರಮುಖ ವಿದ್ಯಮಾನಗಳಲ್ಲಿ ಒಂದು. ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 5ರಂದು ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿದರು. ಕೋವಿಡ್ ಕಾರಣ, ಜನರು ಅಯೋಧ್ಯೆಗೆ ಹೋಗದೆ, ಕುಳಿತಲ್ಲಿಂದಲೇ ‘ಜೈಶ್ರೀರಾಮ್’ ಎಂದು ಜಯಕಾರ ಮೊಳಗಿಸಿದರು.

ಈ ಮಧ್ಯೆ ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಹೊರಬಿದ್ದಿತು. ಬಿಜೆಪಿಯ ಎಲ್‌.ಕೆ. ಅಡ್ವಾಣಿ, ಮುರಳಿಮನೋಹರ ಜೋಶಿ, ಉಮಾಭಾರತಿ, ಕಲ್ಯಾಣ್ ಸಿಂಗ್ ಸೇರಿದಂತೆ 32 ಆರೋಪಿಗಳನ್ನು ಲಖನೌನ ಸಿಬಿಐ ವಿಶೇಷ ನ್ಯಾಯಾಲಯವು ಸೆ.30ರಂದು ಖುಲಾಸೆ ಮಾಡಿತು.

ಮಸೀದಿಯನ್ನು ಧ್ವಂಸ ಮಾಡಲು ಆರೋಪಿಗಳು ಸಂಚು ರೂಪಿಸಿದ್ದರು ಎಂಬುದನ್ನು ಸಾಬೀತು ಮಾಡುವ ಸಾಕ್ಷ್ಯಗಳು ಇಲ್ಲ ಎಂದು ಕೋರ್ಟ್ ಹೇಳಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು