ಕೋಹಿಮಾ: ನಾಗಾಲ್ಯಾಂಡ್‌ನಲ್ಲಿ ಸೋಮವಾರ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈಶಾನ್ಯ ರಾಜ್ಯದಲ್ಲೇ ಮೊಟ್ಟ ಮೊದಲಬಾರಿಗೆ ಮಹಿಳಾ ಶಾಸಕಿಯರಾಗಿ ಇತಿಹಾಸ ನಿರ್ಮಿಸಲು ಹೊರಟಿರುವ ನಾಲ್ವರು ಮಹಿಳಾ ಅಭ್ಯರ್ಥಿಗಳತ್ತ ಎಲ್ಲರ ಗಮನ ಹರಿದಿದೆ.
ದಿಮಾಪುರ್ ಕ್ಷೇತ್ರದಲ್ಲಿ ಎನ್‌ಡಿಪಿಪಿ ಅಭ್ಯರ್ಥಿಯಾಗಿ ಹೆಖಾನಿ ಜಖಾಲು, ಟಿನಿಂಗ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ರೋಸಿ ಥಾಮ್ಸನ್, ಪಶ್ಚಿಮ ಅಂಗಾಮಿ ಕ್ಷೇತ್ರದಲ್ಲಿ ಎನ್‌ಡಿಡಿಪಿಯಿಂದ ಸಾಲ್‌ಹೌಟ್ವೊವೊನ್ವೋ ಹಾಗೂ ಅಟೋಯಿಜು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಹುಲಿ ಸೆಮ ಕಣಕ್ಕಿಳಿದಿದ್ದಾರೆ.
‘ರಾಜ್ಯದಲ್ಲಿನ ಬಹುತೇಕ ಎಲ್ಲಾ ಸಾಮಾಜಿಕ ಸಮಸ್ಯೆಗಳ ನಾಯಕತ್ವವನ್ನೂ ವಹಿಸುವ ಮಹಿಳೆ ಇಲ್ಲಿಯ ತನಕ ಶಾಸಕಿ ಮಾತ್ರ ಆಗಲಿಲ್ಲ‘ ಎಂದು ಸಮಾಜಿಕ ವಿಶ್ಲೇಷಕರೊಬ್ಬರು ಹೇಳಿದರು.
‘ಈಶಾನ್ಯ ರಾಜ್ಯಗಳಲ್ಲಿ ಸಾಮಾಜಿಕ ಕ್ಷೇತ್ರದ ಜವಾಬ್ದಾರಿಗಳನ್ನು ನಿರ್ವಹಿಸುವ ಮಹಿಳೆಯರಿಗೆ ರಾಜಕೀಯ ಸ್ಥಾನಮಾನ ನೀಡದಿರುವುದು ವಿರೋಧಾಭಾಸವಾಗಿದೆ’ ಎಂದು ಲೇಖಕ ಸುಶಾಂತ ತಾಲೂಕ್ದಾರ್ ತಿಳಿಸಿದ್ದಾರೆ.
1997ರಲ್ಲಿ ರಾನೆ ಮೆಸೆ ಶಾಜಿಯಾ ಅವರು ನಾಗಾಲ್ಯಾಂಡ್‌ನ ಮೊದಲ ಮಹಿಳಾ ಸಂಸದೆಯಾಗಿ ಲೋಕಸಭೆಗೆ ಆಯ್ಕೆಯಾಗಿದ್ದರು. ಅವರಿಗೆ ಯುನೈಟೆಡ್ ಡೆಮಾಕ್ರಾಟಿಕ್ ಪಕ್ಷ ಟಿಕೆಟ್ ನೀಡಿತ್ತು. ಅದರ ನಂತರ, ಕಳೆದ ವರ್ಷವಷ್ಟೇ ನಾಗಾಲ್ಯಾಂಡ್‌ನಿಂದ ರಾಜ್ಯಸಭಾ ಸದಸ್ಯರಾಗಿ ಎಸ್.ಫಾಂಗ್ನಾನ್ ಕೊನ್ಯಾಕ್ ಅವರನ್ನು ಬಿಜೆಪಿ ನಾಮನಿರ್ದೇಶನ ಮಾಡಿತ್ತು. ಆದರೆ ಇಲ್ಲಿಯ ತನಕ ಶಾಸಕಿಯರಾಗಿ ಯಾರೊಬ್ಬರೂ ಆಯ್ಕೆಯಾಗಿಲ್ಲ.
ನಾಗಾಲ್ಯಾಂಡ್‌ನ 59 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರುವರಿ 27 ರಂದು ಮತದಾನ ನಡೆಯಲಿದ್ದು, ಮಾರ್ಚ್ 2ರಂದು ಮತ ಎಣಿಕೆ ನಡೆಯಲಿದೆ.
ನಾಗಾಲ್ಯಾಂಡ್‌ನಲ್ಲಿ ಒಟ್ಟು 13,17,632 ಮತದಾರರಿದ್ದಾರೆ. ಈ ಪೈಕಿ 6,61,489 ಪುರುಷರು, 6,56,143 ಮಹಿಳಾ ಮತದಾರರು ಇದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.