ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದೇ ಮೊದಲು: ಭಾರತದಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆಯೇ ಹೆಚ್ಚು

Last Updated 25 ನವೆಂಬರ್ 2021, 15:45 IST
ಅಕ್ಷರ ಗಾತ್ರ

ನವದೆಹಲಿ: ಇದೇ ಮೊದಲ ಬಾರಿಗೆ ದೇಶದ ಲಿಂಗಾನುಪಾತದಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ ಎಂದು ಸರ್ಕಾರದ ಸಮೀಕ್ಷೆಯ ಅಂಕಿ ಅಂಶಗಳಿಂದ ತಿಳಿದು ಬಂದಿದೆ.

ಜನಸಂಖ್ಯೆಯಲ್ಲಿ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಮಕ್ಕಳ ಜನನ ಪ್ರಮಾಣವು ಇಳಿಕೆಯಾಗಿದೆ ಎಂದು ಅದು ಹೇಳಿದೆ.

ಭಾರತದಲ್ಲಿ ಸಾಂಪ್ರದಾಯಿಕ ದುಬಾರಿ ಮದುವೆ ಖರ್ಚುಗಳಿಂದಾಗಿ ಪೋಷಕರು ಐತಿಹಾಸಿಕವಾಗಿ ಹೆಣ್ಣುಮಕ್ಕಳಿಗಿಂತ ಗಂಡುಮಕ್ಕಳ ಬಗ್ಗೆಯೇ ಒಲವು ಹೊಂದಿದ್ದಾರೆ.

ಹೆಣ್ಣು ಶಿಶುವಿನ ಗರ್ಭಪಾತವನ್ನು ನಿಷೇಧಿಸಲಾಗಿದ್ದರೂ ಸಹ ಈಗಲೂ ಹಲವೆಡೆ ಇದು ಮುಂದುವರಿದಿದೆ.

ಆದರೆ, ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆಗೊಳಿಸಿರುವ ಎರಡು ವರ್ಷಗಳ ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆಯ ಪ್ರಕಾರ, 1,000 ಪುರುಷರಿಗೆ 1,020 ಮಹಿಳೆಯರು ದೇಶದಲ್ಲಿದ್ದಾರೆ.

1876ರಿಂದ ಹಿಡಿದು ಇಂದಿನವರೆಗ ನಡೆದಿರುವ ಸಮೀಕ್ಷೆಗಳಲ್ಲಿ ಇದೇ ಮೊದಲ ಬಾರಿಗೆ ಪುರುಷರಿಗಿಂತ ಮಹಿಳೆಯರ ಸಂಖ್ಯೆ ಹೆಚ್ಚಿದೆ ಎಂದು ಸರ್ಕಾರದ ಅಂಕಿ ಅಂಶ ಹೇಳುತ್ತಿದೆ.

‘ಲಿಂಗಾನುಪಾತದಲ್ಲಿ ಸುಧಾರಣೆ ಕಂಡಿರುವುದು ಧನಾತ್ಮಕ ಬೆಳವಣಿಗೆಯಾಗಿದ್ದು, ಸರ್ಕಾರದ ಕ್ರಮಗಳು ಸರಿಯಾದ ಮಾರ್ಗದಲ್ಲಿ ಸಾಗುತ್ತಿವೆ. ಆದರೆ, ಲಿಂಗ ಸಮಾನತೆ ದೃಷ್ಟಿಯಿಂದ ಇನ್ನಷ್ಟು ಸುಧಾರಣೆ ಆಗಬೇಕಿದೆ’ ಎಂದು ಪಾಪ್ಯುಲೇಶನ್ ಫೌಂಡೇಶನ್ ಆಫ್ ಇಂಡಿಯಾ(ಪಿಎಫ್ಐ)ದ ಆರೋಗ್ಯ ವಿಜ್ಞಾನಿ ಸಂಘಮಿತ್ರ ಸಿಂಗ್ ಹೇಳಿದ್ದಾರೆ.

ಮಹಿಳೆಯರ ದೀರ್ಘಾವಧಿಯ ಜೀವಿತಾವಧಿಯಿಂದ ಈ ಫಲಿತಾಂಶ ಕಂಡುಬಂದಿದೆ. ಆದರೆ, ದೇಶದಲ್ಲಿ ಈಗಲೂ ಹೆಣ್ಣುಮಕ್ಕಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಗಂಡು ಮಕ್ಕಳೇ ಜನಿಸುತ್ತಿದ್ದಾರೆ. ಪ್ರತಿ 929 ಹೆಣ್ಣುಮಕ್ಕಳಿಗೆ 1,000 ಗಂಡು ಮಕ್ಕಳು ಜನಿಸುತ್ತಿದ್ದಾರೆ. ಇದು ದೇಶದಲ್ಲಿ ಗಂಡು ಮಗುವಿನ ಆದ್ಯತೆ ನೀಡುತ್ತಿರುವುದನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.

ಭಾರತದಲ್ಲಿ ಸದ್ಯ 130 ಕೋಟಿ ಜನಸಂಖ್ಯೆ ಇದ್ದು, ಈ ದಶಕದ ಅಂತ್ಯದ ವೇಳೆಗೆ ಭಾರತವು ಜನಸಂಖ್ಯೆಯಲ್ಲಿ ಚೀನಾವನ್ನು ಮೀರಿಸಬಹುದು ಎಂದು ವಿಶ್ವಸಂಸ್ಥೆ ಅಂದಾಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT