ಗುರುವಾರ , ಮಾರ್ಚ್ 23, 2023
22 °C
ನಿಂತಿದ್ದ ಟ್ರಕ್‌ಗೆ ಹಿಂದಿನಿಂದ ಬಸ್‌ ಡಿಕ್ಕಿ; 15 ಸಾವು, 40 ಮಂದಿಗೆ ಗಾಯ

ಮಧ್ಯಪ್ರದೇಶ ಅಪಘಾತ: ಹಬ್ಬದ ಕನಸು ದುಃಸ್ವಪ್ನವಾಯಿತು ಎಂದ ಗಾಯಾಳು

ಪಿಟಿಐ Updated:

ಅಕ್ಷರ ಗಾತ್ರ : | |

ರೇವಾ, ಮಧ್ಯಪ್ರದೇಶ: ರೇವಾ ಜಿಲ್ಲೆಯ ಸೋಹಾಗಿ ಘಾಟಿ ಸಮೀಪ ನಿಂತಿದ್ದ ಟ್ರಕ್‌ಗೆ ಖಾಸಗಿ ಬಸ್‌ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ 15 ಮಂದಿ ಮೃತಪಟ್ಟಿದ್ದು, ಇತರ 40 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಗಾಯಾಳುಗಳ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ರೇವಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಅಪಘಾತ ಶುಕ್ರವಾರ ರಾತ್ರಿ ಸಂಭವಿಸಿದೆ. ಮೃತರಲ್ಲಿ ಬಹುತೇಕರು ಕಾರ್ಮಿಕರಾಗಿದ್ದು, ದೀಪಾವಳಿ ಹಬ್ಬಕ್ಕಾಗಿ ತವರಿಗೆ ತೆರಳುತ್ತಿದ್ದರು.

‘ಬಸ್‌ ಹೈದರಾಬಾದ್‌ನಿಂದ ಉತ್ತರಪ್ರದೇಶದ ಗೋರಖ್‌ಪುರಕ್ಕೆ ತೆರಳುತ್ತಿತ್ತು. ಜಿಲ್ಲಾ ಕೇಂದ್ರ ರೇವಾದಿಂದ 60 ಕಿ.ಮೀ. ದೂರದಲ್ಲಿರುವ ಸೋಹಾಗಿ ಘಾಟಿ ಬಳಿ ರಾಷ್ಟ್ರೀಯ ಹೆದ್ದಾರಿ 30ರಲ್ಲಿ ನಿಂತಿದ್ದ ಟ್ರಕ್‌ಗೆ ಬಸ್ ಡಿಕ್ಕಿ ಹೊಡೆದಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನವನೀತ್‌ ಭಾಸಿನ್ ತಿಳಿಸಿದ್ದಾರೆ.

‘12 ಮಂದಿ ಸ್ಥಳದಲ್ಲಿಯೇ ಮೃತಪಟ್ಟರು. ಇಬ್ಬರು ರೇವಾದಲ್ಲಿನ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಅಸುನೀಗಿದರೆ, ಮತ್ತೊಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು’ ಎಂದು ತಿಳಿಸಿದ್ದಾರೆ.

‘ಮುಂದಿದ್ದ ವಾಹನವೊಂದಕ್ಕೆ ಡಿಕ್ಕಿ ಹೊಡೆದ ಕಾರಣ, ಚಾಲಕ ಹಠಾತ್ತನೇ ಬ್ರೇಕ್‌ ಹಾಕಿ ಟ್ರಕ್‌ ನಿಲ್ಲಿಸಿದ್ದಾರೆ. ಈ ವೇಳೆ, ಹಿಂದಿನಿಂದ ವೇಗವಾಗಿ ಬರುತ್ತಿದ್ದ ಬಸ್‌, ಟ್ರಕ್‌ಗೆ ಅಪ್ಪಳಿಸಿದೆ’ ಎಂದು ಭಾಸಿನ್‌ ಹೇಳಿದ್ದಾರೆ.

ಶೋಕ: ಬಸ್‌ ಅಪಘಾತದ ಬಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಅವರು ಶೋಕ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ಅವರು, ಗಾಯಾಳುಗಳು ಶೀಘ್ರವೇ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

ಪರಿಹಾರ: ಪ್ರಧಾನಿ ಮೋದಿ ಅವರು, ಈ ಅಪಘಾತದಲ್ಲಿ ಮೃತರ ಕುಟುಂಬಗಳಿಗೆ ₹ 2 ಲಕ್ಷ, ಗಾಯಾಳುಗಳಿಗೆ ತಲಾ ₹ 50 ಸಾವಿರ ಪರಿಹಾರ ಘೋಷಿಸಿದ್ದಾರೆ ಎಂದು ಪಿಎಂಒ ಟ್ವೀಟ್‌ ಮಾಡಿದೆ.

ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ದೂರವಾಣಿ ಕರೆ ಮಾಡಿ, ಈ ಅಪಘಾತ ಕುರಿತು ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.‌

‘ನನ್ನ ಕನಸು ದುಃಸ್ವಪ್ನವಾಯಿತು...’
‘ಮನೆಯಲ್ಲಿ ಎಲ್ಲರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಲು ಊರಿಗೆ ಹೊರಟಿದ್ದೆ. ಸಂಭ್ರಮದಿಂದ ಹಬ್ಬ ಆಚರಿಸುವ ಕನಸು ಕಾಣುತ್ತಾ ಪ್ರಯಾಣಿಸುತ್ತಿದ್ದೆ. ಗಾಢ ನಿದ್ರೆಯಲ್ಲಿದ್ದ ನಾನು, ಜೋರಾದ ಶಬ್ದ ಕೇಳಿದಾಕ್ಷಣ ಬೆಚ್ಚಿಬಿದ್ದೆ. ಕಣ್ತೆರೆದು ನೋಡಿದಾಗ, ಕೆಲ ಸಹಪ್ರಯಾಣಿಕರು ರಕ್ತದ ಮಡುವಿನಲ್ಲಿ ಬಿದ್ದಿದ್ದರೆ, ಇನ್ನೂ ಕೆಲವರು ನೋವಿನಿಂದ ನರಳುತ್ತಿದ್ದರು. ನಾನೂ ಗಾಯಗೊಂಡಿದ್ದೆ...’

– ರೇವಾ ಜಿಲ್ಲೆಯ ಸೋಹಾಗಿ ಘಾಟಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬದುಕುಳಿದಿರುವ, 30 ವರ್ಷದ ಕಾರ್ಮಿಕ ಸುಭಾಷ್‌ ಚೌಧರಿ ಅವರ ಮಾತುಗಳಿವು.

ಅವರು ಉತ್ತರಪ್ರದೇಶದ ಮಹಾರಾಜ್ ಗಂಜ್‌ಗೆ ತೆರಳುತ್ತಿದ್ದರು. ಅವರ ಕೈ–ಕಾಲುಗಳಿಗೆ ಗಾಯಗಳಾಗಿದ್ದು, ರೇವಾದಲ್ಲಿರುವ ಸಂಜಯ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ನನ್ನ ಸುಂದರ ಕನಸು ದುಃಸ್ವಪ್ನವಾಗಿ ಬದಲಾಯಿತು. ಒಂದು ಕ್ಷಣ ಕಣ್ಣಿಗೆ ಕತ್ತಲು ಕವಿದಂತಾಯಿತು. ನೋವಿನಿಂದ ಒದ್ದಾಡುತ್ತಿದ್ದೆ. ಇತರ ಕೆಲ ಪ್ರಯಾಣಿಕರ ಸ್ಥಿತಿಯೂ ಇದೇ ಆಗಿತ್ತು’ ಎಂದೂ ವಿವರಿಸಿದರು.

‘ಈ ಅಪಘಾತದಿಂದ ನಾನು ಎಷ್ಟೊಂದು ಭಯಭೀತನಾಗಿದ್ದೆ ಎಂದರೆ, ಏನಾಯಿತು ಎಂದು ತಿಳಿಯದೇ ಕಣ್ಮುಚ್ಚಿದ್ದೆ. ಕೆಲ ಹೊತ್ತಿನ ನಂತರ ಕಣ್ಣು ತೆರೆದು ನೋಡಿದಾಗ ನಾನು ಸಂಜಯ ಗಾಂಧಿ ಆಸ್ಪತ್ರೆಯಲ್ಲಿ ದಾಖಲಾಗಿರುವುದು ಗೊತ್ತಾಯಿತು’ ಎಂದು ಮತ್ತೊಬ್ಬ ಗಾಯಾಳು ಮನೀಷ್‌ (21) ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು