ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಫೇಲ್ ಪ್ರಕರಣ: ಭಾರತದ ಮಧ್ಯವರ್ತಿಗೆ ₹65 ಕೋಟಿ ಲಂಚ, ಮೀಡಿಯಾಪಾರ್ಟ್ ಆರೋಪ

ದಾಖಲೆ ಲಭ್ಯವಿದ್ದರೂ ತನಿಖೆ ಆರಂಭಿಸದ ಸಿಬಿಐ: ಮೀಡಿಯಾಪಾರ್ಟ್ ಆರೋಪ
Last Updated 8 ನವೆಂಬರ್ 2021, 19:13 IST
ಅಕ್ಷರ ಗಾತ್ರ

ನವದೆಹಲಿ:‘ರಫೇಲ್ ಯುದ್ಧವಿಮಾನಗಳ ಖರೀದಿ ಒಪ್ಪಂದ ಕುದುರಿಸಲು ಫ್ರಾನ್ಸ್‌ನ ಡಾಸೋ ಏವಿಯೇಷನ್ ಕಂಪನಿಯು ಭಾರತದ ಮಧ್ಯವರ್ತಿಗೆ ₹65 ಕೋಟಿ ಲಂಚ ನೀಡಿತ್ತು. ಆಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಖರೀದಿ ಹಗರಣದಲ್ಲಿ ಭಾಗಿಯಾಗಿದ್ದ ಈ ಮಧ್ಯವರ್ತಿಯು, ಈ ಒಪ್ಪಂದದಲ್ಲಿ ಲಂಚ ಪಡೆದಿರುವ ಬಗ್ಗೆ ದಾಖಲೆಗಳು ಇದ್ದರೂ ಭಾರತದ ಸಿಬಿಐ ಮತ್ತು ಜಾರಿ ನಿರ್ದೇಶನಾಲಯವು ತನಿಖೆ ಆರಂಭಿಸಲಿಲ್ಲ’ ಎಂದು ಫ್ರಾನ್ಸ್‌ನ ಮೀಡಿಯಾಪಾರ್ಟ್‌ ಪೋರ್ಟಲ್ ವರದಿ ಮಾಡಿದೆ.

ಆಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್‌ ಖರೀದಿ ಹಗರಣದಲ್ಲಿ ಮಧ್ಯವರ್ತಿಯಾಗಿದ್ದ ಸುಶೇನ್ ಗುಪ್ತಾಗೆ, ರಫೇಲ್‌ ಖರೀದಿ ಒಪ್ಪಂದದಲ್ಲೂ ಲಂಚ ನೀಡಲಾಗಿದೆ ಎಂದು ಮೀಡಿಯಾಪಾರ್ಟ್ ವರದಿ ಹೇಳಿದೆ.

‘ಬೇರೆ ದೇಶಗಳಲ್ಲಿ ಇರುವ ಕಂಪನಿಗಳು, ನಕಲಿ ಒಪ್ಪಂದಗಳು ಮತ್ತು ನಕಲಿ ಇನ್‌ವಾಯ್ಸ್‌ಗಳನ್ನು ಬಳಸಿಕೊಂಡು ಈ ಲಂಚ ಪಾವತಿ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮಾರಿಷಸ್ ಸರ್ಕಾರವು ಸಿಬಿಐ ಮತ್ತು ಜಾರಿ ನಿರ್ದೇಶನಾಲಯಕ್ಕೆ ನೀಡಿತ್ತು. 2018ರ ಅಕ್ಟೋಬರ್ 11ರಿಂದ ಈ ದಾಖಲೆಗಳುಲಭ್ಯವಿದ್ದರೂ ಭಾರತದ ತನಿಖಾ ಸಂಸ್ಥೆಗಳು ತನಿಖೆ ಮಾಡಲಿಲ್ಲ’ ಎಂದು ಮೀಡಿಯಾಪಾರ್ಟ್ ವಿವರಿಸಿದೆ.

‘ಈ ದಾಖಲೆಗಳು ಲಭ್ಯವಾಗುವುದಕ್ಕೆ ಒಂದು ವಾರದ ಮೊದಲಷ್ಟೇ ಒಪ್ಪಂದಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಡೆದಿರುವ ಬಗ್ಗೆ ದೂರು ದಾಖಲಾಗಿತ್ತು. ದೂರು ದಾಖಲಾದ ಏಳು ದಿನಗಳ ನಂತರ ಈ ದಾಖಲೆಗಳು ಈ ಎರಡೂ ಸಂಸ್ಥೆಗಳ ಕೈಸೇರಿದ್ದವು. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ಅಧಿಕಾರದಲ್ಲಿ ಇದ್ದಾಗ 2007 ಮತ್ತು 2012ರಲ್ಲಿ ಸುಶೇನ್‌ ಗುಪ್ತಾಗೆ ಲಂಚ ನೀಡಲಾಗಿದೆ ಎಂಬುದನ್ನು ಈ ದಾಖಲೆಗಳು ಹೇಳುತ್ತವೆ’ ಎಂದು ಮೀಡಿಯಾಪಾರ್ಟ್ ವರದಿ ಮಾಡಿದೆ.

‘2015ರಲ್ಲಿ ರಫೇಲ್ ಖರೀದಿ ಮಾತುಕತೆಯು ಅಂತಿಮ ಹಂತದಲ್ಲಿ ಇದ್ದಾಗ, ಒಪ್ಪಂದಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳು ಸುಶೇನ್ ಗುಪ್ತಾ ಬಳಿ ಇದ್ದವು. ರಕ್ಷಣಾ ಸಚಿವಾಲಯದಿಂದಲೇ ಅವರು ಈ ದಾಖಲೆಗಳನ್ನು ಪಡೆದುಕೊಂಡಿದ್ದರು. ಖರೀದಿಗೆ ಸಂಬಂಧಿಸಿದಂತೆ ರಕ್ಷಣಾ ಸಚಿವಾಲಯದ ನಿಲುವು ಏನು ಎಂಬುದು ಮತ್ತು ವಿಮಾನಗಳ ಬೆಲೆಯನ್ನು ಹೇಗೆ ಲೆಕ್ಕ ಹಾಕಲಾಗುತ್ತಿದೆ ಎಂಬುದರ ಮಾಹಿತಿ ಇದ್ದ ಮಹತ್ವದ ದಾಖಲೆಗಳು ಅವರಿಗೆ ಲಭ್ಯವಾಗಿದ್ದವು’ ಎಂದು ಮೀಡಿಯಾಪಾರ್ಟ್ ಹೇಳಿದೆ.

‘ರಫೇಲ್ ಒಪ್ಪಂದದಲ್ಲಿ ಸುಶೇನ್‌ ಲಂಚ ಪಡೆದಿರುವುದು, ಆಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಹಗರಣದ ತನಿಖೆ ವೇಳೆ ಪತ್ತೆಯಾಗಿದೆ. ಸುಶೇನ್ ಗುಪ್ತಾ ಅವರ ಇಂಟರ್‌ಸ್ಟೆಲ್ಲರ್ ಟೆಕ್ನಾಲಜೀಸ್‌ ಸಂಸ್ಥೆಯು ಪಡೆದಿರುವ ಗುತ್ತಿಗೆ ದಾಖಲೆಗಳು, ಬ್ಯಾಂಕ್‌ ಸ್ಟೇಟ್‌ಮೆಂಟ್‌ಗಳು ಮತ್ತು ಶುಲ್ಕ ಪಾವತಿ ದಾಖಲೆಗಳನ್ನು ಮಾರಿಷಸ್‌ ಸರ್ಕಾರವು ಸಿಬಿಐಗೆ ನೀಡಿದೆ. ಇದಕ್ಕೆ ಸಂಬಂಧಿಸಿದ 12,000 ಪುಟಗಳಷ್ಟು ದಾಖಲೆ ಪತ್ರಗಳನ್ನು ಸಿಬಿಐ ಕಲೆ ಹಾಕಿದೆ. ಆ ದಾಖಲೆ ಪತ್ರಗಳು ನಮಗೆ ಲಭ್ಯವಾಗಿವೆ’ ಎಂದು ಮೀಡಿಯಾಪಾರ್ಟ್ ಹೇಳಿದೆ. ಈ ದಾಖಲೆ ಪತ್ರಗಳನ್ನು ‘ಪ್ರಜಾವಾಣಿ’ ಪರಿಶೀಲಿಸಲು ಸಾಧ್ಯವಾಗಿಲ್ಲ.

‘ಸುಶೇನ್ ಗುಪ್ತಾ ಅವರು ಮಾರಿಷಸ್‌ನಲ್ಲಿ ಇಂಟರ್‌ಸ್ಟೆಲರ್‌ ಟೆಕ್ನಾಲಜೀಸ್ ಎಂಬ ಐಟಿ ಕಂಪನಿ ನಡೆಸುತ್ತಿದ್ದಾರೆ. ಡಾಸೋ ಜತೆಗೆ ಈ ಕಂಪನಿಯು ಗುತ್ತಿಗೆ ಮಾಡಿಕೊಂಡಿದೆ. ಈ ಗುತ್ತಿಗೆಗಳಿಗೆ ಸಾಮಾನ್ಯಕ್ಕಿಂತ ಅತಿಹೆಚ್ಚು ಶುಲ್ಕ ವಿಧಿಸಲಾಗಿದೆ. ಈ ಕಂಪನಿಗೆ ಶುಲ್ಕ ನೀಡುವ ಸಲುವಾಗಿ ನಕಲಿ ಇನ್‌ವಾಯ್ಸ್‌ಗಳನ್ನು ಬಳಸಿಕೊಳ್ಳಲಾಗಿದೆ. ಈಇನ್‌ವಾಯ್ಸ್‌ಗಳಲ್ಲಿಡಾಸೋ ಕಂಪನಿಯ ಹೆಸರನ್ನು ಡಸೋ ಎಂದು ತಪ್ಪಾಗಿ ನಮೂದಿಸಲಾಗಿದೆ’ ಎಂದು ಮೀಡಿಯಾಪಾರ್ಟ್‌ ವಿವರಿಸಿದೆ.

ರಫೇಲ್ ಯುದ್ಧವಿಮಾನ ಖರೀದಿಯಲ್ಲಿ ಕೇಂದ್ರ ಸರ್ಕಾರವು ಅಕ್ರಮ ಎಸಗಿದೆ ಎಂದು ವಿರೋಧ ಪಕ್ಷವಾದ ಕಾಂಗ್ರೆಸ್‌ ಆರೋಪಿಸುತ್ತಲೇ ಇದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಮಾಡಿಕೊಳ್ಳಲಾಗಿದ್ದ ಒಪ್ಪಂದವನ್ನು ರದ್ದುಪಡಿಸಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಹೊಸ ಒಪ್ಪಂದ ಮಾಡಿಕೊಂಡಿತ್ತು.

ರಫೇಲ್‌ ಒಪ್ಪಂದಕ್ಕೆ ಸಂಬಂಧಿಸಿದಂತೆ ಸುಶೇನ್ ಗುಪ್ತಾ, ಡಾಸೋ ಏವಿಯೇಷನ್‌ಗೆ ಸಂದೇಶ ಕಳುಹಿಸಿದ್ದರು. ಇದಕ್ಕೆ ಸಂಬಂಧಿಸಿದ ದಾಖಲೆ ಸಹ ಸಿಬಿಐ ಬಳಿ ಇತ್ತು ಎಂದು ಮೀಡಿಯಾಪಾರ್ಟ್ ಹೇಳಿದೆ.

‘ನಾವು ಈಗಾಗಲೇ ಅಪಾಯವನ್ನು ಮೈಮೇಲೆ ಎಳೆದುಕೊಂಡಿದ್ದೇವೆ. ಹಣ ನೀಡಿರುವ ಕಾರಣ, ಏಜೆಂಟ್ ಈಗ ನಮ್ಮ ಪರವಾಗಿದ್ದಾನೆ. ಆದರೆ ಇದೆಲ್ಲವೂ ಕಾನೂನುಬದ್ಧ ಮತ್ತು ಸಮರ್ಥನೀಯ ಎಂಬಂತೆ ಮಾಡುವುದು ನಿಮ್ಮ ಹೊಣೆ. ಹಣ ಇಲ್ಲದಿದ್ದರೆ, ಯಾವ ನಿರ್ಧಾರವೂ ಇಲ್ಲ. ಕಚೇರಿಗಳಲ್ಲಿ ಕುಳಿತಿರುವ ವ್ಯಕ್ತಿಗಳು ಹಣಕ್ಕಾಗಿ ಒತ್ತಾಯಿಸುತ್ತಿದ್ದಾರೆ. ನಾವು ಹಣ ನೀಡದಿದ್ದರೆ, ಅವರು ನಮ್ಮನ್ನು ಜೈಲಿಗೆ ಕಳುಹಿಸುತ್ತಾರೆ ಎಂದು ಸುಶೇನ್ ಗುಪ್ತಾ ಡಾಸೋ ಏವಿಯೇಷನ್‌ಗೆ ಸಂದೇಶ ಕಳುಹಿಸಿದ್ದರು’ ಎಂದು ಮೀಡಿಯಾಪಾರ್ಟ್ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT