ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಾರಿಯಾಗಿರುವ ಉದ್ಯಮಿ ಮೆಹುಲ್‌ ಚೋಕ್ಸಿ ಆಂಟಿಗುವಾದಲ್ಲಿ ನಾಪತ್ತೆ!

Last Updated 25 ಮೇ 2021, 2:28 IST
ಅಕ್ಷರ ಗಾತ್ರ

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ ವಂಚಿಸಿ ಭಾರತದಿಂದ ಪರಾರಿಯಾಗಿರುವ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಇದೀಗ ಆಂಟಿಗುವಾ ಮತ್ತು ಬಾರ್ಬುಡಾದಿಂದಲೂ ನಾಪತ್ತೆಯಾಗಿರುವುದು ತಿಳಿದುಬಂದಿದ್ದು, ಆತನನ್ನು ಪತ್ತೆಹಚ್ಚಲು ಪೊಲೀಸರು ಭಾನುವಾರದಿಂದ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಸ್ಥಳೀಯ ಮಾಧ್ಯಮವಾದ 'ಆಂಟಿಗುವಾನ್ಯೂಸ್‌ರೂಮ್' ಮಂಗಳವಾರ ಪೊಲೀಸ್ ಆಯುಕ್ತ ಅಟ್ಲೀ ರೊಡ್ನಿ ಅವರನ್ನು ಉಲ್ಲೇಖಿಸಿ, 'ಕಾಣೆಯಾಗಿರುವ ಕುರಿತು ವದಂತಿಗಳು ಕೇಳಿಬಂದಿರುವ ಭಾರತೀಯ ಉದ್ಯಮಿ ಮೆಹುಲ್ ಚೋಕ್ಸಿ ಇರುವ ಸ್ಥಳವನ್ನು ಪೊಲೀಸರು ಶೋಧಿಸುತ್ತಿದ್ದಾರೆ ಎಂದು ವರದಿ ಮಾಡಿದೆ.

ಕೆರಿಬಿಯನ್ ದ್ವೀಪ ರಾಷ್ಟ್ರವಾದ ಆಂಟಿಗುವಾ ಮತ್ತು ಬಾರ್ಬುಡಾದ ಪೌರತ್ವವನ್ನು ಪಡೆದಿರುವ ಚೋಕ್ಸಿ ಭಾನುವಾರ ದ್ವೀಪದ ದಕ್ಷಿಣ ಪ್ರದೇಶದಲ್ಲಿ ವಾಹನ ಚಲಾಯಿಸುತ್ತಿರುವುದು ಕಂಡುಬಂದಿತ್ತು. ನಂತರ, ಆತನ ವಾಹನ ಮಾತ್ರ ಪತ್ತೆಯಾಗಿದೆ ಆದರೆ ಚೋಕ್ಸಿಯ ಯಾವುದೇ ಸುಳಿವು ಕಂಡುಬಂದಿಲ್ಲ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಈ ಕುರಿತಂತೆ ಸ್ಥಳೀಯ ಪೊಲೀಸರು ಕೂಡ ಚೋಕ್ಸಿ ಕಾಣೆಯಾಗಿರುವ ಕುರಿತು ದೃಢಪಡಿಸಿದ್ದು, ಚೋಕ್ಸಿಯನ್ನು ಪತ್ತೆಹಚ್ಚಲು ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ ಎಂದು ಪೊಲೀಸ್ ಆಯುಕ್ತ ಅಟ್ಲೀ ರೊಡ್ನಿ ತಿಳಿಸಿದ್ದಾರೆ.

ನೀರವ್ ಮೋದಿ ಮತ್ತು ಅವರ ಮಾವ ಚೋಕ್ಸಿ ಸಾರ್ವಜನಿಕ ವಲಯದ ಮುಂಬೈನ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ (ಪಿಎನ್‌ಬಿ) ಸಾವಿರಾರು ಕೋಟಿ ರೂಪಾಯಿ ಸಾಲ ಮರುಪಾವತಿಸದೆ ವಂಚನೆ ಮಾಡಿದ ಆರೋಪ ಕೇಳಿ ಬಂದ ಬಳಿಕ ದೇಶಬಿಟ್ಟು ಪರಾರಿಯಾಗಿದ್ದಾರೆ.

ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ನೀರವ್ ಮೋದಿ ಸುಮಾರು ₹ 14,500 ಕೋಟಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಸದ್ಯ ನೀರವ್ ಮೋದಿ ಲಂಡನ್ ಜೈಲಿನಲ್ಲಿದ್ದು, ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಯು ಜಾರಿಯಲ್ಲಿದೆ. 2018ರ ಜನವರಿ ಮೊದಲ ವಾರದಲ್ಲಿ ಭಾರತದಿಂದ ಫಲಾಯನ ಮಾಡುವ ಮೊದಲೇ ಚೋಕ್ಸಿ 2017 ರಲ್ಲಿ ಆಂಟಿಗುವಾ ಮತ್ತು ಬಾರ್ಬುಡಾದಿಂದ ಪೌರತ್ವವನ್ನು ಪಡೆದುಕೊಂಡಿದ್ದರು. ಆ ನಂತರದಲ್ಲಿ ಹಗರಣ ಬೆಳಕಿಗೆ ಬಂದಿತು. ಸದ್ಯ ಇಬ್ಬರೂ ಸಿಬಿಐ ತನಿಖೆಯನ್ನು ಎದುರಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT