ಶನಿವಾರ, ಫೆಬ್ರವರಿ 4, 2023
28 °C
ಡಿಸೆಂಬರ್1ರಂದು ಅಧಿಕಾರ ಸ್ವೀಕಾರ

ಜಿ–20 ಅಧ್ಯಕ್ಷ ಸ್ಥಾನ, ಜಾಗತಿಕ ಒಳಿತಿಗೆ ಬಳಕೆ: ಮೋದಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಪ್ರಬಲ ಜಿ–20 ಗುಂಪಿನ ಅಧ್ಯಕ್ಷ ಸ್ಥಾನವನ್ನು ಭಾರತ ವಹಿಸಿಕೊಳ್ಳುತ್ತಿದೆ. ದೇಶವು ಈ ಅವಧಿಯಲ್ಲಿ ಶಾಂತಿ ಸ್ಥಾಪನೆ, ಏಕತೆ, ಪರಿಸರ ಸಂರಕ್ಷಣೆ ಹಾಗೂ ಸುಸ್ಥಿರ ಅಭಿವೃದ್ಧಿ ಸೇರಿದಂತೆ ಜಗತ್ತಿನ ಒಳಿತಿಗಾಗಿ ಈ ಅವಕಾಶ ಬಳಸಿಕೊಳ್ಳಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದರು.

ಭಾರತ, ಜಿ–20 ಗುಂಪಿನ ಅಧ್ಯಕ್ಷ ಸ್ಥಾನವನ್ನು ಅಧಿಕೃತವಾಗಿ ಡಿಸೆಂಬರ್‌ 1ರಂದು ವಹಿಸಿಕೊಳ್ಳಲಿದೆ.

ಮಾಸಿಕ ‘ಮನ್‌ ಕಿ ಬಾತ್‌’ನಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ‘ತನ್ನ ಅಧ್ಯಕ್ಷೀಯ ಅವಧಿಗಾಗಿ ಭಾರತವು ಒಂದು ಭೂಮಿ, ಒಂದು ಕುಟುಂಬ ಹಾಗೂ ಒಂದು ಭವಿಷ್ಯ ಎಂಬ ಧ್ಯೇಯವಾಕ್ಯವನ್ನು ಘೋಷಿಸಿದೆ. ಇದು ‘ವಸುಧೈವ ಕುಟುಂಬಕಂ’ ಎಂಬ ತತ್ವಕ್ಕೆ ದೇಶವು ಹೊಂದಿರುವ ಬದ್ಧತೆಯನ್ನು ತೋರುತ್ತದೆ’ ಎಂದರು.

‘ಜಿ–20 ಗುಂಪಿನ ವ್ಯಾಪ್ತಿ ಅಗಾಧ. ಜಗತ್ತಿನ ಜನಸಂಖ್ಯೆಯ ಮೂರನೇ ಎರಡರಷ್ಟು ಪ್ರಮಾಣವನ್ನು ಈ ಗುಂಪು ಒಳಗೊಂಡಿದೆ. ವಿಶ್ವ ವ್ಯಾಪಾರದಲ್ಲಿ ಈ ಗುಂಪಿನ ಸದಸ್ಯ ರಾಷ್ಟ್ರಗಳ ಪಾಲು ಶೇ 75ರಷ್ಟಿದ್ದರೆ, ಜಾಗತಿಕ ಜಿಡಿಪಿಯಲ್ಲಿ ಶೇ 85ರಷ್ಟು ಪಾಲು ಹೊಂದಿದೆ. ಹೀಗಾಗಿ, ಇಂಥ ಬೃಹತ್‌ ಸಂಘಟನೆಯ ಅಧ್ಯಕ್ಷ ಸ್ಥಾನವನ್ನು ಡಿ.1ರಿಂದ ಭಾರತ ವಹಿಸಿಕೊಳ್ಳುತ್ತದೆ’ ಎಂದು ಅವರು ವಿವರಿಸಿದರು.

‘ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ ಸಂದರ್ಭದಲ್ಲಿಯೇ ಭಾರತಕ್ಕೆ ಇಂಥ ಅದ್ಭುತ ಅವಕಾಶ ಲಭಿಸಿದೆ. ಇದು ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಉತ್ತಮ ಅವಕಾಶ ಒದಗಿಸಿದೆ’ ಎಂದು ಹೇಳಿದರು.

ಸಾಧನೆ–ಸಾಧಕರ ಪ್ರಸ್ತಾಪ: ತೆಲಂಗಾಣದ ನೇಕಾರ ಹರಿಪ್ರಸಾದ್ ಎಂಬುವವರು ಸ್ವತಃ ನೇಯ್ದಿದ್ದ ‘ಜಿ–20’ ಲಾಂಛನವನ್ನು ತಮಗೆ ನೀಡಿದ್ದನ್ನು ಮೋದಿ ಪ್ರಸ್ತಾಪಿಸಿ, ಅವರಿಗೆ ಧನ್ಯವಾದ ತಿಳಿಸಿದರು.

‘ವಿಕ್ರಮ್–ಎಸ್‌’ ರಾಕೆಟ್‌ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿರುವ ಬಾಹ್ಯಾಕಾಶ ಕ್ಷೇತ್ರದ ಸ್ಟಾರ್ಟ್‌ಅಪ್‌ನ ಸಾಧನೆಯನ್ನು ಹೊಗಳಿದ ಅವರು, ಈ ಸಾಧನೆ ಪ್ರತಿಯೊಬ್ಬ ಭಾರತೀಯನ ಪಾಲಿಗೆ ಹೆಮ್ಮೆಯ ವಿಷಯ’ ಎಂದರು.

ಹಿಮಾಚಲಪ್ರದೇಶದ ಕಿನ್ನೌರ್‌ನಲ್ಲಿ ಡ್ರೋನ್‌ಗಳನ್ನು ಬಳಸಿ ಸೇಬು ಹಣ್ಣುಗಳನ್ನು ಸಾಗಾಟ ಮಾಡುತ್ತಿರುವುದು, ನಾಗಾ ಸಮುದಾಯದವರು ತಮ್ಮ ಕಲೆ, ಸಂಸ್ಕೃತಿ ಹಾಗೂ ಸಂಗೀತವನ್ನು ಕಾಪಾಡಿಕೊಂಡಿರುವುದನ್ನು ಪ್ರಸ್ತಾಪಿಸಿದರು.

ಚೀನಾದೊಂದಿಗೆ ವ್ಯವಹರಿಸುವುದು ಸವಾಲಿನ ಕೆಲಸ: ಸರನ್

‘ಜಿ–20 ಗುಂಪಿನ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುತ್ತಿರುವ ಭಾರತಕ್ಕೆ, ಈ ಅವಧಿಯಲ್ಲಿ ನೆರೆಯ ಚೀನಾದೊಂದಿಗೆ ವ್ಯವಹರಿಸುವುದು ಸವಾಲಿನ ಕೆಲಸವಾಗಲಿದೆ’ ಎಂದು ಮಾಜಿ ಡೆಪ್ಯುಟಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಪಂಕಜ್‌ ಸರನ್‌ ಭಾನುವಾರ ಹೇಳಿದ್ದಾರೆ.

ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ದೇಶವು ಜಾಗತಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ ಎಂಬುದನ್ನು ಚೀನಾ ಮಾನ್ಯ ಮಾಡಬೇಕು. ಅಲ್ಲದೇ, ಆ ಸ್ಥಾನಕ್ಕೆ ತಕ್ಕಂತೆ ಚೀನಾ ತನ್ನೊಂದಿಗೆ ವ್ಯವಹರಿಸಬೇಕು ಎಂಬುದಾಗಿ ಭಾರತ ನಿರೀಕ್ಷಿಸುತ್ತದೆ’ ಎಂದು ಹೇಳಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು