ಬುಧವಾರ, ಮಾರ್ಚ್ 29, 2023
25 °C
ಒಡಿಶಾದ ಕ್ಯೊಂಜಾರ್ ಜಿಲ್ಲೆಯಲ್ಲಿ ನಡೆದ ಘಟನೆ

ವೈದ್ಯಕೀಯ ಪರೀಕ್ಷೆಗಾಗಿ 12 ಗಂಟೆ ಕಾದ ಅತ್ಯಾಚಾರ ಸಂತ್ರಸ್ತೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕ್ಯೊಂಜಾರ್ (ಒಡಿಶಾ): ‘ಕ್ಯೊಂಜಾರ್ ಜಿಲ್ಲೆಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗಾಗಿ 12 ಗಂಟೆಗಳ ಕಾಲ ಪೊಲೀಸ್ ವ್ಯಾನಿನಲ್ಲಿ ಕೂರಿಸಲಾಗಿತ್ತು’ ಎಂದು ಸಂತ್ರಸ್ತೆಯ ಸಂಬಂಧಿಕರು ದೂರಿದ್ದಾರೆ.

ಜನವರಿ 18ರಂದು ಸಂಬಂಧಿಕರ ಮನೆಗೆ ತೆರಳಿದ್ದ ಸಂತ್ರಸ್ತೆಯು ತಮ್ಮ ಸಂಬಂಧಿಯೊಬ್ಬರ ಜತೆಗೆ ಮನೆಗೆ ಹಿಂತಿರುಗುತ್ತಿದ್ದಾಗ ಆಕೆಯನ್ನು ಬಲವಂತವಾಗಿ ಹೊತ್ತೊಯ್ದಿದ ಮೂವರು ಯುವಕರು ಗೋಹಿರಾಬಾಯಿ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು.

ಈ ಬಗ್ಗೆ ಇಲ್ಲಿನ ಸೊಸೊ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿತ್ತು. ಅಂದು ಬೆಳಿಗ್ಗೆಯೇ ಸಂತ್ರಸ್ತೆಯನ್ನು ಪೊಲೀಸ್ ವ್ಯಾನಿನಲ್ಲಿ ಆನಂದಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಅತ್ಯಾಚಾರ ನಡೆದ ಸ್ಥಳವು ಸಲಾನಿಯಾ ಸಮುದಾಯ ಆರೋಗ್ಯ ಕೇಂದ್ರ (ಸಿಎಚ್‌ಸಿ) ವ್ಯಾಪ್ತಿಯಲ್ಲಿರುವುದರಿಂದ ವೈದ್ಯರು ವೈದ್ಯಕೀಯ ಪರೀಕ್ಷೆ ನಡೆಸಲು ನಿರಾಕರಿಸಿದ್ದರು.

ಬಳಿಕ ಸಂತ್ರಸ್ತೆಯನ್ನು ಸಲಾನಿಯಾದ ಸಿಎಚ್‌ಸಿಗೆ ಕರೆದೊಯ್ದದಾಗ ಅಲ್ಲಿ ಮಹಿಳಾ ವೈದ್ಯೆ ಇರಲಿಲ್ಲ. ಹಾಗಾಗಿ, ಆಕೆಯನ್ನು ಪೊಲೀಸ್ ವ್ಯಾನಿನಲ್ಲಿ ಕೂರಿಸಲಾಗಿತ್ತು. ಅಲ್ಲಿಂದ ಆಕೆಯನ್ನು ಪುನಃ ಆನಂದಪುರ ಆಸ್ಪತ್ರೆಗೆ ಕರೆತಂದು ಗುರುವಾರ ರಾತ್ರಿ 9.30ರ ವೇಳೆಗೆ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಯಿತು.

‘ರಾತ್ರಿ ಹೊತ್ತು ಸಂಪೂರ್ಣವಾಗಿ ವೈದ್ಯಕೀಯ ಪರೀಕ್ಷೆ ನಡೆಸಲಾಗದು. ಹಾಗಾಗಿ, ಮರುದಿನ (ಶುಕ್ರವಾರ) ಬರಲು ನನಗೆ ಹೇಳಲಾಯಿತು’ ಎಂದೂ ಸಂತ್ರಸ್ತೆ ದೂರಿದ್ದಾರೆ. 

‘ಸಲಾನಿಯಾ ಪಿಎಚ್‌ಸಿಯಲ್ಲಿ ಮಹಿಳಾ ವೈದ್ಯರಿಲ್ಲದ ಕಾರಣ, ಪುನಃ ಆಕೆಯನ್ನು ಆನಂದಪುರ ಸರ್ಕಾರಿ ಆಸ್ಪತ್ರೆಗೆ ಪರೀಕ್ಷೆಗಾಗಿ ವಾಪಸ್ ಕರೆತರಲಾಯಿತು. ನಾವೂ ಸಹ ಅನಿವಾರ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಉದ್ದೇಶಪೂರ್ವಕವಾಗಿ ವೈದ್ಯಕೀಯ ಪರೀಕ್ಷೆಯನ್ನು ವಿಳಂಬ ಮಾಡಿಲ್ಲ’ ಎಂದು ಸೊಸೊ ಪೊಲೀಸ್ ಠಾಣೆಯ ಪ್ರಭಾರಿ ಇನ್‌ಸ್ಪೆಕ್ಟರ್ ಪ್ರದೀಪ್ ಕುಮಾರ್ ಸೇಠಿ ಹೇಳಿದ್ದಾರೆ. 

ಈ ಸಂಬಂಧ ಜಿಲ್ಲಾ ವೈದ್ಯಾಧಿಕಾರಿಯನ್ನು ಸಂಪರ್ಕಿಸಿದಾಗ ಅವರು ರಜೆಯಲ್ಲಿರುವುದಾಗಿ ತಿಳಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಲು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ನಿರಾಕರಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು