ಭಾನುವಾರ, ಜುಲೈ 3, 2022
26 °C

ತಾಯಿಯ ಗರ್ಭ, ಸಮಾಧಿಯಲ್ಲಿ ಮಾತ್ರ ಹೆಣ್ಣು ಸುರಕ್ಷಿತ; ವಿದ್ಯಾರ್ಥಿನಿಯ ಡೆತ್‌ನೋಟ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಚೆನ್ನೈ: 10ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿ ಆಕೆಯ ಸಾವಿಗೆ ಕಾರಣವಾಗಿರುವ ಆರೋಪದ ಮೇಲೆ 21 ವರ್ಷದ ಕಾಲೇಜು ವಿದ್ಯಾರ್ಥಿಯನ್ನು ನಗರದ ಹೊರವಲಯದ ಮಂಗಾಡು ಪೊಲೀಸರು ಬಂಧಿಸಿದ್ದಾರೆ.

ಶನಿವಾರ ಮಾರುಕಟ್ಟೆಯಿಂದ ಮನೆಗೆ ಹಿಂದಿರುಗಿದ ಬಾಲಕಿಯ ತಾಯಿ, ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಗಮನಿಸಿದ್ದಾರೆ.

ತಾಯಿಯ ಗರ್ಭದಲ್ಲಿ ಮತ್ತು ಸಮಾಧಿಯಲ್ಲಿ ಮಾತ್ರ ಹೆಣ್ಣು ಸುರಕ್ಷಿತವಾಗಿರುತ್ತಾಳೆ ಎಂದು ಬಾಲಕಿ ಡೆತ್‌ನೋಟ್‌ನಲ್ಲಿ ಬರೆದಿದ್ದಾಳೆ. ತನ್ನ ಕುಟುಂಬಕ್ಕೂ ಹೇಳಲಾಗದ ನೋವು ಮತ್ತು ಹತಾಶೆಯನ್ನು ಆಕೆ ಪತ್ರದ ಮುಖೇನ ಬಹಿರಂಗಪಡಿಸಿದ್ದಾಳೆ.

ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದು, ಆತನ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

'ಅಪ್ರಾಪ್ತೆಯೊಂದಿಗೆ ದೈಹಿಕ ಸಂಪರ್ಕ ಹೊಂದಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಕಳೆದ ಎರಡು ವಾರದಿಂದ ಆಕೆಗೆ ಕಿರುಕುಳ ಮತ್ತು ತೊಂದರೆ ನೀಡಲಾಗಿತ್ತು. ಇಬ್ಬರ ನಡುವೆ ಕೆಟ್ಟ ಸಂದೇಶಗಳು ಮತ್ತು ಫೋಟೊಗಳು ವಿನಿಮಯವಾಗಿರುವುದನ್ನು ಗಮನಿಸಿದ್ದೇವೆ. ಇದಕ್ಕೂ ಮುನ್ನ 8 ತಿಂಗಳ ಕಾಲ ಅವರಿಬ್ಬರ ನಡುವೆ ಉತ್ತಮ ಸ್ನೇಹವಿತ್ತು' ಎಂದು ತನಿಖೆ ನಡೆಸಿದ ಪೊಲೀಸ್ ಅಧಿಕಾರಿ ಎನ್‌ಡಿಟಿವಿಗೆ ಮಾಹಿತಿ ನೀಡಿದ್ದಾರೆ.

ತಾಯಿ ಹೊರಗಡೆ ಹೋಗಿದ್ದ ವೇಳೆ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ವೇಳೆ ಬಾಲಕಿಯು ತನ್ನ ರೂಮಿನ ಒಳಗಿಂದ ಬಾಗಿಲನ್ನು ಬಂದ್ ಮಾಡಿದ್ದಳು. ಹಾಗಾಗಿ ಬಾಗಿಲನ್ನು ಒಡೆದು ಒಳ ಪ್ರವೇಶಿಸಲಾಗಿದೆ.

ರೂಂನಲ್ಲಿ ಸಿಕ್ಕ ಡೆತ್‌ ನೋಟ್‌ನಲ್ಲಿ, 'ಶಾಲೆಯು ಸುರಕ್ಷಿತವಲ್ಲ ಮತ್ತು ಶಿಕ್ಷಕರನ್ನು ನಂಬುವಂತಿಲ್ಲ. ನನಗಾಗುತ್ತಿದ್ದ ಮಾನಸಿಕ ಹಿಂಸೆಯಿಂದಾಗಿ ತಾನು ಸರಿಯಾಗಿ ಓದಲು ಅಥವಾ ನಿದ್ದೆ ಮಾಡಲು ಆಗುತ್ತಿರಲಿಲ್ಲ. ಪ್ರತಿಯೊಬ್ಬ ತಂದೆ-ತಾಯಂದಿರು ತಮ್ಮ ಮಕ್ಕಳಿಗೆ ಮತ್ತು ಮಗನಿಗೆ ಹೆಣ್ಣು ಮಕ್ಕಳನ್ನು ಹೇಗೆ ಗೌರವಿಸಬೇಕೆಂದು ಕಲಿಸಬೇಕು' ಎಂದು ಬರೆದಿದ್ದಾಳೆ.

ಮೂರು ವರ್ಷಗಳ ಹಿಂದೆ ಬಾಲಕಿ ಎಂಟನೇ ತರಗತಿಯಲ್ಲಿದ್ದಾಗ ಅದೇ ಶಾಲೆಯಲ್ಲಿ ಆರೋಪಿ 11ನೇ ತರಗತಿಯ ವಿದ್ಯಾರ್ಥಿಯಾಗಿದ್ದ. ಬಳಿಕ ಆಕೆ ಬಾಲಕಿಯರ ಶಾಲೆಗೆ ಸೇರಿದ್ದಳು. ಅದಾದ ಎರಡು ವರ್ಷಗಳ ಬಳಿಕ ಇಬ್ಬರೂ ಇನ್‌ಸ್ಟಾಗ್ರಾಂ ಮೂಲಕ ಸ್ನೇಹಿತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆಕೆಯ ಡೆತ್‌ನೋಟ್ ಪ್ರಕಾರ, ಬಾಲಕಿಗೆ ಬೇರೆ ಯಾರಾದರು ಕಿರುಕುಳ ನೀಡುತ್ತಿದ್ದರೇ ಎನ್ನುವುದನ್ನು ತಿಳಿಯಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

''ಲೈಂಗಿಕ ಕಿರುಕುಳವನ್ನು ನಿಲ್ಲಿಸಿ' ಮತ್ತು 'ನನಗೆ ನ್ಯಾಯ ಸಿಗುವ ಮೂಲಕ ಅದು ಕೊನೆಯಾಗಲಿ''. ಕಿರುಕುಳ ನೀಡುವವರು 'ಸಂಬಂಧಿಕರು, ಶಿಕ್ಷಕರು ಸೇರಿದಂತೆ ಪ್ರತಿಯೊಬ್ಬರು ಆಗಿರುತ್ತಾರೆ‘ ಎಂದು ಡೆತ್‌ನೋಟ್‌ನಲ್ಲಿ ಬಾಲಕಿ ನೋವು ತೋಡಿಕೊಂಡಿದ್ದಾಳೆ.
ಕಳೆದ ಕೆಲವು ವಾರಗಳಿಂದೀಚೆಗೆ ನಾಲ್ವರು ಲೈಂಗಿಕ ಕಿರುಕುಳದ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪೈಕಿ ಎರಡು ಪ್ರಕರಣಗಳಲ್ಲಿ ಶಿಕ್ಷಕರೇ ಆರೋಪಿಗಳಾಗಿದ್ದರು.

ಹೀಗಾಗಿ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಇತ್ತೀಚೆಗಷ್ಟೇ ವಿಡಿಯೊ ಸಂದೇಶದ ಮೂಲಕ, 'ಪ್ರತಿಯೊಂದು ಜೀವಹಾನಿಯೂ ನನ್ನನ್ನು ಘಾಸಿಗೊಳಿಸುತ್ತದೆ ಮತ್ತು ಯಾರೊಬ್ಬರೂ ಇಂತಹ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಬದಲಿಗೆ ಧೈರ್ಯವಾಗಿ ಆರೋಪಿಗಳನ್ನು ಹೆಸರಿಸಿ ಮತ್ತು ಅವರನ್ನು ಕಾನೂನಿನ ಅಡಿ ತನ್ನಿ' ಎಂದು ಹೇಳಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು