ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತತ 4ನೇ ಅವಧಿಗೆ ನಿತೀಶ್‌ಗೆ ಗದ್ದುಗೆ

Last Updated 15 ನವೆಂಬರ್ 2020, 21:04 IST
ಅಕ್ಷರ ಗಾತ್ರ

ಪಟ್ನಾ: ಬಿಹಾರದ ಎನ್‌ಡಿಎ ಶಾಸಕಾಂಗ ಪಕ್ಷದ ನಾಯಕನಾಗಿ ಜೆಡಿಯು ಅಧ್ಯಕ್ಷ ನಿತೀಶ್‌ ಕುಮಾರ್‌ ಅವರನ್ನು ಭಾನುವಾರ ಆಯ್ಕೆ ಮಾಡಲಾಗಿದೆ. ಸತತ ನಾಲ್ಕನೇ ಅವಧಿಗೆ ಬಿಹಾರದ ಮುಖ್ಯಮಂತ್ರಿಯಾಗಿ ನಿತೀಶ್‌ ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮುಖ್ಯಮಂತ್ರಿಯಾಗಿ ಅವರ ಏಳನೇ ಪ್ರಮಾಣವಚನ ಇದು. ಅವಿಭಜಿತ ಬಿಹಾರದ ಮುಖ್ಯ
ಮಂತ್ರಿಯಾಗಿ 2000ನೇ ಇಸವಿಯ ಮಾರ್ಚ್‌ನಲ್ಲಿ ಅಧಿಕಾರಕ್ಕೆ ಏರಿದ್ದೂ ಇದರಲ್ಲಿ ಸೇರಿದೆ. ಆಗ ಅವರು ಏಳು ದಿನ ಮುಖ್ಯಮಂತ್ರಿಯಾಗಿದ್ದರು.

‘ಈ ಬಾರಿ ಮುಖ್ಯಮಂತ್ರಿ ಆಗಬೇಕು ಎಂಬ ಇಚ್ಛೆ ಇರಲಿಲ್ಲ. ಬಿಜೆಪಿಯ ಮುಖಂಡರೊಬ್ಬರು ಮುಖ್ಯಮಂತ್ರಿ ಆಗಲಿ ಎಂಬ ಬಯಕೆ ಇತ್ತು. ಆದರೆ, ಬಿಜೆಪಿ ಅವಿರೋಧವಾಗಿ ನನ್ನನ್ನು ಆಯ್ಕೆ ಮಾಡಿದ್ದರಿಂದ ಮತ್ತು ಮುಖ್ಯಮಂತ್ರಿ ಸ್ಥಾನ ವಹಿಸಿಕೊಳ್ಳುವಂತೆ ಒತ್ತಡ ಹೇರಿದ್ದರಿಂದ ಈ ಹುದ್ದೆ ವಹಿಸಿಕೊಳ್ಳುತ್ತಿದ್ದೇನೆ’ ಎಂದು ನಿತೀಶ್ ಹೇಳಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ 74 ಕ್ಷೇತ್ರಗಳಲ್ಲಿ ಗೆದ್ದಿದೆ. ಜೆಡಿಯು ಗೆದ್ದಿರುವ ಕ್ಷೇತ್ರಗಳ ಸಂಖ್ಯೆ 43 ಮಾತ್ರ. ಎನ್‌ಡಿಎ ಅಂಗ ಪಕ್ಷಗಳಾದ ಎಚ್‌ಎಎಂ ಮತ್ತು ವಿಐಪಿ ತಲಾ ನಾಲ್ಕು ಕ್ಷೇತ್ರಗಳಲ್ಲಿ ಗೆದ್ದಿವೆ. ಹೀಗಾಗಿ, 243 ಸದಸ್ಯ ಬಲದ ವಿಧಾನಸಭೆಯಲ್ಲಿ ಎನ್‌ಡಿಎಗೆ 125 ಸದಸ್ಯರ ಬೆಂಬಲ ಇದೆ.

ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಅವರು ಎನ್‌ಡಿಎ ಸಭೆಯಲ್ಲಿ ಪಕ್ಷದ ವೀಕ್ಷಕರಾಗಿ ಭಾಗಿಯಾದರು.

***

ಎರಡು ಡಿಸಿಎಂ ಹುದ್ದೆ?

ಉಪಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ವಿಚಾರ ಇನ್ನೂ ಸ್ಪಷ್ಟ ಆಗಿಲ್ಲ. 2005ರಿಂದಲೂ (2013–17ರ ಅವಧಿ ಬಿಟ್ಟು) ಸುಶೀಲ್ ಕುಮಾರ್‌ ಮೋದಿ ಅವರು ಉಪಮುಖ್ಯಮಂತ್ರಿ ಆಗಿದ್ದರು. ಈ ಬಾರಿ, ಅವರನ್ನೇ ಆ ಹುದ್ದೆಯಲ್ಲಿ ಮುಂದುವರಿಸುವ ಬಗ್ಗೆ ಒಮ್ಮತ ಏರ್ಪಟ್ಟಿಲ್ಲ.

ಕತಿಹಾರ್‌ ಶಾಸಕ ತಾರಕೇಶ್ವರ ಪ್ರಸಾದ್‌ ಅವರನ್ನು ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಗಿದೆ. ರೇಣು ದೇವಿ ಅವರು ಉಪನಾಯಕಿ ಆಗಲಿದ್ದಾರೆ. ಈ ಇಬ್ಬರನ್ನು ಉಪಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.ಈ ಇಬ್ಬರೂ ಅತ್ಯಂತ ಹಿಂದುಳಿದ ವರ್ಗಗಳಿಗೆ ಸೇರಿದವರು. ಇವರು ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆ ಆಗಿದ್ದಾರೆ.

‘ಎನ್‌ಡಿಎ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವಲ್ಲಿ ಮಹಿಳೆಯರು ಮತ್ತು ಅತ್ಯಂತ ಹಿಂದುಳಿದ ವರ್ಗಗಳ ಪಾತ್ರ ಪ್ರಮುಖವಾಗಿದೆ. ಹಾಗಾಗಿ, ಪ್ರಸಾದ್‌ ಮತ್ತು ರೇಣು ದೇವಿ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ದೊರೆಯಬಹುದು’ ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

ಸುಶೀಲ್‌ ಮೋದಿ ಅವರು ಟ್ವೀಟ್‌ ಮಾಡಿ, ಹುದ್ದೆಯಲ್ಲಿ ಮುಂದುವರಿಯುವ ಸಾಧ್ಯತೆ ಇಲ್ಲ ಎಂಬ ಸುಳಿವು ನೀಡಿದ್ದಾರೆ. ‘40 ವರ್ಷಗಳಲ್ಲಿ ಪಕ್ಷವು ನನಗೆ ಬಹಳಷ್ಟನ್ನು ಕೊಟ್ಟಿದೆ. ಎಲ್ಲ ಜವಾಬ್ದಾರಿಗಳನ್ನು ನಾನು ಪೂರ್ಣಗೊಳಿಸಿದ್ದೇನೆ. ಮುಂದೆಯೂ ಯಾವುದೇ ಕೆಲಸ ವಹಿಸಿದರೆ ಅದನ್ನು ಮಾಡುತ್ತೇನೆ. ಏನೇ ಆದರೂ, ಬಿಜೆಪಿ ಕಾರ್ಯಕರ್ತನಾಗಿ ಸೇವೆ ಸಲ್ಲಿಸುವ ನನ್ನ ಅವಕಾಶವನ್ನು ಯಾರೂ ಕಿತ್ತುಕೊಳ್ಳಲಾಗದು’ ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.

****

ಹಲವು ಆಕಾಂಕ್ಷಿಗಳು

-ಉಪ ಮುಖ್ಯಮಂತ್ರಿಯಾಗಿ ಸುಶೀಲ್‌ ಮೋದಿ ಅವರನ್ನು ಮುಂದುವರಿಸುವ ಒಲವು ಬಿಜೆಪಿ ವರಿಷ್ಠರಿಗೆ ಇದೆ

-ಗಯಾದ ಶಾಸಕರಾಗಿ 7ನೇ ಬಾರಿಗೆ ಅಯ್ಕೆ ಆಗಿರುವ ಪ್ರೇಮ್ ಕುಮಾರ್‌ ಅವರು ಉಪಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ

-ಕೇಂದ್ರ ಸಚಿವ ನಿತ್ಯಾನಂದ ರಾಯ್‌, ದಲಿತ ನಾಯಕ ಕಾಮೇಶ್ವರ ಚೌಪಾಲ್‌ ಅವರು ಹೆಸರೂ ಈ ಹುದ್ದೆಗೆ ಕೇಳಿ ಬರುತ್ತಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT