ಮಂಗಳವಾರ, ಮೇ 17, 2022
25 °C

ಭೌಗೋಳಿಕ ದತ್ತಾಂಶ ನಿಯಂತ್ರಣ ಮುಕ್ತ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಭೌಗೋಳಿಕ ದತ್ತಾಂಶ ಸಂಗ್ರಹಣೆಗೆ ಸಂಬಂಧಿಸಿದ ನೀತಿಯನ್ನು ಸಡಿಲಗೊಳಿಸಿರುವುದಾಗಿ ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ. ಇದರಿಂದಾಗಿ ಈ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳಿಗೆ ಅವಕಾಶ ಹೆಚ್ಚಿದಂತಾಗುವುದಲ್ಲದೆ, ಖಾಸಗಿ ಕ್ಷೇತ್ರ ಮತ್ತು ಸರ್ಕಾರಕ್ಕೆ ಸಮಾನ ಅವಕಾಶಗಳು ಲಭ್ಯವಾಗಲಿವೆ ಎಂದು ಹೇಳಿದೆ.

‘ಹೊಸ ಮಾರ್ಗಸೂಚಿಯ ಪ್ರಕಾರ ಈ ಕ್ಷೇತ್ರವನ್ನು ನಿಯಂತ್ರಣಮುಕ್ತಗೊಳಿಸಲಾಗಿದೆ. ಇನ್ನು ನಕ್ಷೆಯೂ ಸೇರಿದಂತೆ ಭೌಗೋಳಿಕ ದತ್ತಾಂಶಗಳನ್ನು ಪಡೆಯಲು ಅನುಮೋದನೆ, ಭದ್ರತಾ ಅನುಮತಿ, ಪರವಾನಗಿ ಮುಂತಾದವುಗಳ ಅಗತ್ಯ ಇರುವುದಿಲ್ಲ’ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಕಾರ್ಯದರ್ಶಿ ಆಶುತೋಷ್‌ ಶರ್ಮಾ ತಿಳಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ‘...ನೀತಿಗಳನ್ನು ಉದಾರಗೊಳಿಸಿರುವುದು ಆತ್ಮನಿರ್ಭರ ಭಾರತ ನಿರ್ಮಾಣದ ದಿಕ್ಕಿನಲ್ಲಿ ಅತ್ಯಂತ ಮಹತ್ವದ ಹೆಜ್ಜೆಯಾಗಿದೆ. ನಾವೀನ್ಯತೆಯೊಂದಿಗೆ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಮುಂದಾಗುವ ರೈತರು, ನವೋದ್ಯಮಿಗಳು, ಖಾಸಗಿ ಹಾಗೂ ಸರ್ಕಾರಿ ಕ್ಷೇತ್ರದ ಸಂಶೋಧನಾ ಸಂಸ್ಥೆಗಳಿಗೆ ಈ ಸುಧಾರಣೆಗಳಿಂದ ಲಾಭವಾಗಲಿದೆ ಎಂದಿದ್ದಾರೆ.

‘ಭೌಗೋಳಿಕ ದತ್ತಾಂಶ ಹಾಗೂ ರಿಮೋಟ್‌ ಸೆನ್ಸಿಂಗ್‌ ಡೇಟಾದ ಸಮರ್ಥ ಬಳಕೆಯಿಂದ ದೇಶದ ರೈತರಿಗೂ ಸಹಾಯವಾಗಲಿದೆ. ಇದನ್ನು ನಿಯಂತ್ರಣದಿಂದ ಮುಕ್ತಗೊಳಿಸಿದ್ದರಿಂದ ಹೊಸ ತಂತ್ರಜ್ಞಾನಗಳು ಅಭಿವೃದ್ಧಿ ಆಗಲಿವೆ. ಇದರಿಂದ ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದ ಕ್ಷೇತ್ರಗಳು ಅಭಿವೃದ್ಧಿ ಕಾಣಲಿವೆ’ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

‘ಮ್ಯಾಪ್‌ಗಳ ಲಭ್ಯತೆಯ ಕೊರತೆಯಿಂದಾಗಿ ಹಿನ್ನಡೆ ಅನುಭವಿಸುತ್ತಿರುವ ಅನೇಕ ಕ್ಷೇತ್ರಗಳಿಗೆ, ಈ ಬದಲಾವಣೆಯಿಂದ ಹೆಚ್ಚಿನ ಲಾಭವಾಗಲಿದೆ. ಮ್ಯಾಪ್‌ ತಯಾರಿಸುವ ಅಧಿಕೃತ ಸಂಸ್ಥೆಯಾಗಿರುವ ‘ಸರ್ವೆ ಆಫ್‌ ಇಂಡಿಯಾ’ ಸಹ ತನ್ನ ಕೆಲಸಕ್ಕಾಗಿ ಪರವಾನಗಿ ಪಡೆಯಬೇಕಾದಂಥ ಸ್ಥಿತಿ ಈವರೆಗೆ ಅಸ್ತಿತ್ವದಲ್ಲಿತ್ತು. ಇದರಿಂದಾಗಿ ಎಲ್ಲಾ ಕೆಲಸಕಾರ್ಯಗಳಲ್ಲಿ 3ರಿಂದ 6 ತಿಂಗಳ ವಿಳಂಬವಾಗುತ್ತಿತ್ತು. ಇನ್ನು ಮುಂದೆ ಈ ಸಮಸ್ಯೆ ಇರುವುದಿಲ್ಲ’ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಚಿವ ಹರ್ಷವರ್ಧನ್‌ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.