ಬುಧವಾರ, ಜನವರಿ 19, 2022
26 °C

ಸೂರ್ಯಾಸ್ತದ ನಂತರ ಮರಣೋತ್ತರ ಪರೀಕ್ಷೆಗೆ ಸರ್ಕಾರದ ಅನುಮತಿ?

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ:  ಸೂಕ್ತ ಮೂಲಸೌಕರ್ಯ ಹೊಂದಿರುವ ಆಸ್ಪತ್ರೆಗಳಲ್ಲಿ ಸೂರ್ಯಾಸ್ತದ ನಂತರ ಮರಣೋತ್ತರ ಪರೀಕ್ಷೆ ನಡೆಸಲು ಕೇಂದ್ರ ಸರ್ಕಾರವು ಅನುಮತಿ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ನರಹತ್ಯೆ, ಆತ್ಮಹತ್ಯೆ, ಅತ್ಯಾಚಾರ, ಕೊಳೆತ ಮೃತದೇಹಗಳು ಮತ್ತು ದುರ್ಬಳಕೆಯಾಗಿರುವ ಶಂಕಿತ ದೇಹಗಳನ್ನು ಹೊರತುಪಡಿಸಿ ಇತರ ಮೃತದೇಹಗಳನ್ನು ಸೂರ್ಯಾಸ್ತದ ಬಳಿಕವೂ ಮರಣೋತ್ತರ ಪರೀಕ್ಷೆಗೆ ಒಳಪಡಿಸುವ ಸಂಭವ ಇದೆ.

ಅಂಗಾಂಗ ದಾನದ ಉದ್ದೇಶಕ್ಕಾಗಿ ಈ ಅನುಮತಿ ನೀಡುವ ಸಾಧ್ಯತೆ ಇದೆ. ಮರಣೋತ್ತರ ಪರೀಕ್ಷೆ ವೇಳೆ ಸಾಕ್ಷ್ಯಾಧಾರಗಳನ್ನು ದುರ್ಬಲಗೊಳಿಸದಂತೆ ಖಚಿತಪಡಿಸಿಕೊಳ್ಳುವ ಸಲುವಾಗಿ ಪರೀಕ್ಷೆ ನಡೆಸುವ ಆಸ್ಪತ್ರೆಯ ಉಸ್ತುವಾರಿಯಿಂದ ಮೌಲ್ಯಮಾಪನ ಮಾಡಲಾಗುತ್ತದೆ ಎನ್ನಲಾಗಿದೆ. 

ಸೂರ್ಯಾಸ್ತದ ನಂತರ ಮರಣೋತ್ತರ ಪರೀಕ್ಷೆ ನಡೆಸುವ ವಿಷಯವನ್ನು ಇತ್ತೀಚೆಗೆ ಕೇಂದ್ರ ಆರೋಗ್ಯ ಸಚಿವಾಲಯದ ಅಡಿಯಲ್ಲಿ ಬರುವ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯದ ತಾಂತ್ರಿಕ ಸಮಿತಿಯು ಪರಿಶೀಲಿಸಿದೆ ಎಂದೂ ಮೂಲಗಳು ಹೇಳಿವೆ. 

ಈ ಕುರಿತು ನಡೆದ ಸಭೆಯಲ್ಲಿ ಈಗಾಗಲೇ ಕೆಲವು ಸಂಸ್ಥೆಗಳಲ್ಲಿ ಸೂರ್ಯಾಸ್ತದ ನಂತರವೂ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ ಎನ್ನುವ ಬಗ್ಗೆ ಚರ್ಚೆ ನಡೆಸಲಾಯಿತು. 

ತಂತ್ರಜ್ಞಾನದಲ್ಲಿನ ತ್ವರಿತ ಪ್ರಗತಿ ಹಾಗೂ ಸುಧಾರಣೆಯ ದೃಷ್ಟಿಯಿಂದ, ವಿಶೇಷವಾಗಿ ಮರಣೋತ್ತರ ಪರೀಕ್ಷೆಗೆ ಅಗತ್ಯವಾದ ಬೆಳಕಿನ ಮತ್ತು ಮೂಲಸೌಕರ್ಯಗಳ ಲಭ್ಯತೆಯನ್ನು ಗಮನಿಸಿ, ಆಸ್ಪತ್ರೆಗಳಲ್ಲಿ ರಾತ್ರಿಯ ಸಮಯದಲ್ಲಿ ಮರಣೋತ್ತರ ಪರೀಕ್ಷೆಯನ್ನು ನಡೆಸುವುದು ಕಾರ್ಯಸಾಧ್ಯವಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ರಾತ್ರಿ ವೇಳೆ ನಡೆಸುವ ಮರಣೋತ್ತರ ಪರೀಕ್ಷೆಯ ಸಂಪೂರ್ಣ ವಿಡಿಯೊ ಚಿತ್ರೀಕರಣವನ್ನು ಮಾಡಲಾಗುವುದು. ಕಾನೂನು ಸಂಬಂಧಿ ಉದ್ದೇಶಕ್ಕಾಗಿ ಈ ವಿಡಿಯೊವನ್ನು ಸಂರಕ್ಷಿಸಿಡಲಾಗುವುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು