ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಾಪಕ ಟೀಕೆ ಹಿನ್ನೆಲೆ: ‘ಸೆಂಟ್ರಲ್‌ ವಿಸ್ತಾ’ ನಿರ್ಮಾಣ ವಿಳಂಬ ಸಂಭವ

Last Updated 9 ಮೇ 2021, 14:56 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌ ಪರಿಸ್ಥಿತಿ ನಡುವೆಯೇ ಸೆಂಟ್ರಲ್‌ ವಿಸ್ತಾ ಯೋಜನೆಗೆ ಭಾರಿ ಮೊತ್ತವನ್ನು ವ್ಯಯಿಸಲಾಗುತ್ತಿದೆ ಎಂಬ ವ್ಯಾಪಕ ಟೀಕೆಗಳ ಕಾರಣ ಉದ್ದೇಶಿತ ಯೋಜನೆ ನಿರ್ಮಾಣವನ್ನುಕೇಂದ್ರ ಸರ್ಕಾರ ನಿಧಾನಗತಿಗೊಳಿಸುವ ಸಂಭವವಿದೆ.

–ನೂತನ ಸಂಸತ್‌ ಸಂಕೀರ್ಣ ಮತ್ತು ಸೆಂಟ್ರಲ್‌ ವಿಸ್ತಾ ಅವಿನ್ಯೂ– ಹೊರತುಪಡಿಸಿ ಯೋಜನೆಯ ಉಳಿದ ಕಟ್ಟಡಗಳ ನಿರ್ಮಾಣ ಕಾಮಗಾರಿಗಳನ್ನು ವಿಳಂಬಗೊಳಿಸಲಾಗುವುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಸೆಂಟ್ರಲ್‌ ವಿಸ್ತಾ ಯೋಜನೆಯಡಿ ನೂತನ ಸಂಸತ್‌ ಸಂಕೀರ್ಣ, ಸೆಂಟ್ರಲ್‌ ವಿಸ್ತಾ ಅವಿನ್ಯೂಗೆ ಹೊಸ ರೂಪ (ರಾಜಪಥ), ಪ್ರಧಾನಿ ಮತ್ತು ಉಪರಾಷ್ಟ್ರಪತಿ ಅವರಿಗೆ ಹೊಸ ನಿವಾಸಗಳ ನಿರ್ಮಾಣ, ಪರಸ್ಪರ ಸಂಪರ್ಕವುಳ್ಳ 10 ಹೊಸ ಕಟ್ಟಡಗಳನ್ನು ಒಳಗೊಂಡ ಸಚಿವಾಲಯ ಹಾಗೂ ರಾಜಪಥದ ಇಕ್ಕೆಲಗಳಲ್ಲಿ ಕೆಲ ಸಂಕೀರ್ಣಗಳನ್ನು ನೆಲಸಮಗೊಳಿಸುವುದು ಸೇರಿದೆ.

₹ 862 ಕೋಟಿ ವೆಚ್ಚದ ಸಂಸತ್‌ ಸಂಕೀರ್ಣ ಮತ್ತು ₹ 477 ಕೋಟಿ ವೆಚ್ಚದ ಸೆಂಟ್ರಲ್‌ ವಿಸ್ತಾ ಅವಿನ್ಯೂ ಕಾಮಗಾರಿ ಈಗ ಪ್ರಗತಿಯಲ್ಲಿದೆ. ಮಧ್ಯದಲ್ಲಿ ಅದನ್ನು ಸ್ಥಗಿತಗೊಳಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಯೋಜನೆಯ ಇತರೆ ಕಾಮಗಾರಿಗಳನ್ನು ಕೋವಿಡ್‌ ಪರಿಸ್ಥಿತಿ ತಹಬದಿಗೆ ಬಂದ ಮೇಲೆ ಕೈಗೊಳ್ಳಲಾಗುವುದು ಎಂದು ನಗರ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಪ್ರಧಾನಿ ಮತ್ತು ಉಪರಾಷ್ಟ್ರಪತಿ ಅವರಿಗೆ ಹೊಸ ನಿವಾಸ ನಿರ್ಮಿಸಲು ನಗರ ವ್ಯವಹಾರಗಳ ಸಚಿವಾಲಯವು ಪರಿಸರ ಸಚಿವಾಲಯ ಅನುಮೋದನೆ ಪಡೆದಿದೆ. ಬಿಡ್ಡಿಂಗ್ ಪ್ರಕ್ರಿಯೆ ಇನ್ನಷ್ಟೇ ಆರಂಭವಾಗಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯೋಜನೆಯ ಅನುಸಾರ, ನೂತನ ಮನೆಗಳ ನಿರ್ಮಾಣ ಪ್ರಕ್ರಿಯೆ 2022ರ ಒಳಗೆ ಪೂರ್ಣಗೊಳ್ಳಬೇಕಾಗಿತ್ತು. ಆದರೆ, ಸರ್ಕಾರ ಈ ಎರಡೂ ಯೋಜನೆಗಳನ್ನು ವಿಳಂಬಗೊಳಿಸಲು ಚಿಂತನೆ ನಡೆಸಿದೆ. ಪ್ರಧಾನಮಂತ್ರಿಗಳ ನೂತನ ನಿವಾಸ ಮತ್ತು ಎಸ್‌ಪಿಜಿ ಬಿಲ್ಡಿಂಗ್‌ ನಿರ್ಮಾಣ ಕಾರ್ಯವು ಡಾಲ್‌ಹೌಸಿ ರಸ್ತೆಯಲ್ಲಿನ ಕೆಲ ಕಚೇರಿಗಳನ್ನು ಆಫ್ರಿಕಾ ಅವಿನ್ಯೂ ಮತ್ತು ಕಸ್ತೂರಬಾ ಗಾಂಧಿ ಮಾರ್ಗದಲ್ಲಿ ಹೊಸ ಕಟ್ಟಡಗಳಿಗೆ ಸ್ಥಳಾಂತರಿಸಿದ ನಂತರ ಆರಂಭವಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೆ, ರಾಜಪಥದಲ್ಲಿ ಸಚಿವಾಲಯ ಕಟ್ಟಡ ನಿರ್ಮಿಸಲು ಹಾಲಿ ಇರುವ ಯಾವ ಕಟ್ಟಡಗಳನ್ನು ನೆಲಸಮಗೊಳಿಸಬೇಕು ಎಂದು ಸರ್ಕಾರ ಇನ್ನೂ ತೀರ್ಮಾನಿಸಿಲ್ಲ. ಸರ್ಕಾರ ಒಟ್ಟಾರೆ ₹ 23,000 ಕೋಟಿ ವೆಚ್ಚದಲ್ಲಿ ಸೆಂಟ್ರಲ್‌ ವಿಸ್ತಾ ಯೋಜನೆ ಜಾರಿಗೊಳಿಸುತ್ತಿದ್ದು, ನಿರ್ಮಾಣಕ್ಕೆ ನಿಗದಿಪಡಿಸಿದ್ದ ಗಡುವನ್ನು ಈಗಾಗಲೇ 2026ಕ್ಕೆ ವಿಸ್ತರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT