ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೆಗಾಸಸ್‌ ಪ್ರಕರಣ ಚರ್ಚಾರ್ಹ ವಿಷಯವಲ್ಲ’: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

Last Updated 30 ಜುಲೈ 2021, 19:34 IST
ಅಕ್ಷರ ಗಾತ್ರ

ನವದೆಹಲಿ:ಪೆಗಾಸಸ್‌ ಗೂಢಚರ್ಯೆ ಪ್ರಕರಣದ ಬಗ್ಗೆ ಚರ್ಚೆ ನಡೆಯಬೇಕು ಎಂದು ಆಗ್ರಹಿಸಿ ಪ್ರತಿಪ‍ಕ್ಷಗಳ ಸದಸ್ಯರು ಶುಕ್ರವಾ
ರವೂ ಸಂಸತ್ತಿನಲ್ಲಿ ಪ್ರತಿಭಟನೆ ಮುಂದುವರಿಸಿದವು. ಆದರೆ, ಇದು ಚರ್ಚಾರ್ಹ ಹಾಗೂ ಗಂಭೀರ ವಿಷಯವೇ ಅಲ್ಲ ಎಂದು ಸರ್ಕಾರ ಹೇಳಿದೆ.

ಜನರಿಗೆ ಸಂಬಂಧಿಸಿದ ಸಾಕಷ್ಟು ವಿಷಯಗಳ ಚರ್ಚೆಯಾಗಬೇಕಿದ್ದು, ಅವುಗಳ ಬಗ್ಗೆ ಗಮನ ನೀಡುವಂತೆ ಹೇಳಿದೆ.

ಸತತ ಪ್ರತಿಭಟನೆಯಿಂದಾಗಿ ಸಂಸತ್ತಿನ ಕಲಾಪ ನಡೆಯದೇ ಇರುವುದಕ್ಕೆ ಬೇಸರ ವ್ಯಕ್ತ‍‍‍‍ಪಡಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ,ಲೋಕಸಭೆಯಲ್ಲಿ ನೇರವಾಗಿ ಜನರಿಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಲು ಸರ್ಕಾರ ಸಿದ್ಧವಾಗಿದ್ದರೂ, ವಿರೋಧ ಪಕ್ಷಗಳು ನಡೆದುಕೊಳ್ಳುತ್ತಿರುವ ರೀತಿ ದುರದೃಷ್ಟಕರ‘ ಎಂದಿದ್ದಾರೆ.

ಪೆಗಾಸಸ್ ಗೂಢಚರ್ಯೆ ಪ್ರಕರಣವನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಸರಣಿ ಪ್ರತಿಭಟನೆ ನಡೆಸುತ್ತಿರುವುದನ್ನು ಉಲ್ಲೇಖಿಸಿ ಮಾತನಾಡಿದ ಅವರು, ‘ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್‌ ಅವರು ಉಭಯ ಸದನಗಳಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ವಿವರವಾದ ಮಾಹಿತಿ ನೀಡಿದ್ದಾರೆ. ಆದರೂ ವಿರೋಧ ಪಕ್ಷಗಳು ತಮ್ಮ ಪ್ರತಿಭಟನೆ ಮುಂದುವರಿಸುತ್ತಾ ಕಲಾಪಕ್ಕೆ ಅಡ್ಡಿಪಡಿಸುತ್ತಿರುವುದು ದುರದೃಷ್ಟಕರ‘ ಎಂದು ಹೇಳಿದ್ದಾರೆ.

ವಿರೋಧ ಪಕ್ಷಗಳು ಸಮಸ್ಯೆಯಲ್ಲದ, ಗಂಭೀರ ವಿಷಯವೂ ಅಲ್ಲದ ವಿಚಾರಗಳಿಗಾಗಿ ಪ್ರತಿಭಟನೆ ನಡೆಸುತ್ತಿವೆ. ದೇಶದಲ್ಲಿ ನೇರವಾಗಿ ಜನರಿಗೆ ಸಂಬಂಧಿಸಿದ ಸಾಕಷ್ಟು ವಿಷಯಗಳಿವೆ. ಸರ್ಕಾರ ಅವುಗಳ ಬಗ್ಗೆ ಚರ್ಚಿಸಲು ಸಿದ್ಧವಿದೆ. ಇಂಥ ವಿಷಯಗಳ ಚರ್ಚೆಯೊಂದಿಗೆ ಲೋಕಸಭೆ ನಡೆಯಲು ಅವಕಾಶ ನೀಡುವಂತೆ ವಿರೋಧ ಪಕ್ಷಗಳ ಸದಸ್ಯರನ್ನು ಜೋಶಿ ಒತ್ತಾಯಿಸಿದರು.

‘ಸಂಸದರ ಪ್ರತಿಭಟನೆಯ ನಡುವೆಯೇ ಕೆಳಮನೆಯಲ್ಲಿಈ ವಾರದಲ್ಲಿ ಹಲವು ಮಸೂದೆಗಳು ಹೆಚ್ಚು ಚರ್ಚೆಯಾಗದೇ ಅನುಮೋದನೆಗೊಂಡಿವೆ. ಆದರೆ, ಯಾವುದೇ ಮಸೂದೆಗಳು ಚರ್ಚೆಗೊಳಪಡದೇ ಅನುಮೋದನೆಯಾಗಬಾರದು ಎಂಬುದು ನಮ್ಮ ಅಭಿಪ್ರಾಯವಾಗಿದೆ‘ ಎಂದು ಜೋಶಿ ಪ್ರತಿಪಾದಿಸಿದರು.

ವೆಂಕಯ್ಯ ಅಸಮಾಧಾನ

ಪ್ರತಿಭಟನೆಯ ಹೆಸರಿನಲ್ಲಿ ಕೆಲವು ಸಂಸದರು ನಡೆದುಕೊಂಡ ರೀತಿಗೆ ಅಸಮಾಧಾನ ವ್ಯಕ್ತಪಡಿಸಿರುವ ರಾಜ್ಯಸಭೆಯ ಸಭಾಪತಿ ಎಂ.ವೆಂಕಯ್ಯ ನಾಯ್ಡು, ‘ಕೆಲವರ ವರ್ತನೆ ಸಂಸತ್ತಿನ ಘನತೆಗೆ ಚ್ಯುತಿ ತರುತ್ತಿದ್ದು, ಸದನದ ಸಹನೆಯನ್ನು ಪರೀಕ್ಷಿಸಲು ಮುಂದಾಗಬಾರದು’ ಎಂದು ಎಚ್ಚರಿಸಿದರು.

ಮೂರು ಮಸೂದೆ ಮಂಡನೆ

ಸರ್ಕಾರಿ ಸ್ವಾಮ್ಯದ ವಿಮಾ ಕಂಪನಿಗಳಿಂದ ಸರ್ಕಾರದ ಷೇರುಗಳನ್ನು ಕಡಿತಗೊಳಿಸಲು ಅವಕಾಶ ನೀಡುವುದಕ್ಕಾಗಿ, ಸಾಮಾನ್ಯ ವಿಮೆ ವ್ಯವಹಾರ (ರಾಷ್ಟ್ರೀಕರಣ) ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಯಿತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಇದು ಸರ್ಕಾರಿ ಸ್ವಾಮ್ಯದ ವಿಮಾ ಕಂಪನಿಗಳ ಖಾಸಗೀಕರಣಕ್ಕೆ ದಾರಿಯಾಗುವುದಿಲ್ಲ ಎಂದಿದ್ದಾರೆ.‌

ರಾಷ್ಟ್ರದ ರಾಜಧಾನಿ ಪ್ರದೇಶ ಹಾಗೂ ಸುತ್ತಲಿನ ನಗರಗಳ ವಾಯು ಗುಣಮಟ್ಟ ನಿರ್ವಹಣೆ ಆಯೋಗ ಮಸೂದೆ–2021 ಹಾಗೂ ಸಾಮಾನ್ಯ ವಿಮೆ ವ್ಯವಹಾರ (ರಾಷ್ಟ್ರೀಕರಣ) ತಿದ್ದುಪಡಿ ವಿಧೇಯಕವನ್ನೂ ಮಂಡಿಸಲಾಯಿತು.

ಸೀಮಿತ ಹೊಣೆಗಾರಿಕೆ ಪಾಲುದಾರಿಕೆ (ತಿದ್ದುಪಡಿ) ಮಸೂದೆಯನ್ನುರಾಜ್ಯಸಭೆಯಲ್ಲಿ ಮಂಡಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT