ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ ಪ್ರಕರಣ: ಸಾವಂತ್‌ಗೆ ಟೀಕೆಗಳ ಸುರಿಮಳೆ, ಹೇಳಿಕೆ ಹಿಂಪಡೆದ ಗೋವಾ ಸಿಎಂ

Last Updated 30 ಜುಲೈ 2021, 9:31 IST
ಅಕ್ಷರ ಗಾತ್ರ

ಪಣಜಿ: ಅಪ್ರಾಪ್ತೆಯರ ಮೇಲಿನ ಸಾಮೂಹಿಕ ಅತ್ಯಾಚಾರದ ಕುರಿತು ನೀಡಿದ ಹೇಳಿಕೆಗೆ ತೀವ್ರ ಟೀಕೆಗಳು ವ್ಯಕ್ತವಾಗಿದ್ದರಿಂದ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್ ಅವರು ಆ ಹೇಳಿಕೆಯನ್ನು ಹಿಂದಕ್ಕೆ ಪಡೆದಿದ್ದಾರೆ. ಇದೇ ವೇಳೆ ‘ಅಪ್ರಾಪ್ತ ವಯಸ್ಕರ ಸುರಕ್ಷತೆಯ ಜವಾಬ್ದಾರಿ ಎಲ್ಲರಿಗೂ ಸೇರಿದೆ’ ಎಂದು ಅವರು ಹೇಳಿದ್ದಾರೆ.

‘ಈ ಘಟನೆಯಿಂದ ನನಗೆ ತೀವ್ರ ನೋವುಂಟಾಗಿದೆ. ಪ್ರಕರಣದ ಆರೋಪಿಗಳು ಕಾನೂನಿನಡಿಯಲ್ಲಿ ಅತ್ಯಂತ ಕಠಿಣ ಶಿಕ್ಷೆಗೆ ಗುರಿಯಾಗುತ್ತಾರೆ’ ಎಂದು ಅವರು ತಿಳಿಸಿದ್ದಾರೆ.

ಇಲ್ಲಿನ ಬೆನೌಲಿಮ್ ಬೀಚ್‌ನಲ್ಲಿ ಭಾನುವಾರ ಇಬ್ಬರು ‍ಬಾಲಕಿಯರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಬುಧವಾರ ಸದನದಲ್ಲಿ ನೀಡಿದ್ದ ಹೇಳಿಕೆಗೆ ಆಕ್ಷೇಪ ವ್ಯಕ್ತವಾಗಿತ್ತು. ‘ಮಕ್ಕಳ ಸುರಕ್ಷತೆಯ ಜವಾಬ್ದಾರಿಯನ್ನು ಪೋಷಕರು ವಹಿಸಿಕೊಳ್ಳಬೇಕು. ವಿಶೇಷವಾಗಿ ಅಪ್ರಾಪ್ತ ವಯಸ್ಸಿನವರನ್ನು ರಾತ್ರಿಯಲ್ಲಿ ಹೊರಗೆ ಬಿಡಬಾರದು’ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ವಿರೋಧ ಪಕ್ಷಗಳಿಂದ ತೀವ್ರ ಟೀಕೆಗಳು ವ್ಯಕ್ತವಾಗಿದ್ದವು.

ಶುಕ್ರವಾರ ಇಲ್ಲಿ ನೀಡಿದ ಹೇಳಿಕೆಯಲ್ಲಿ ಸಾವಂತ್, ‘ಈ ದುರದೃಷ್ಟಕರ ಘಟನೆಯ ಬಗ್ಗೆ ಕುರಿತು ನೀಡಿದ್ದ ಹೇಳಿಕೆಯನ್ನು ನಾನು ಹಿಂದಕ್ಕೆ ಪಡೆಯುತ್ತೇನೆ. ಜವಾಬ್ದಾರಿಯುತ ಸರ್ಕಾರದ ಮುಖ್ಯಸ್ಥರಾಗಿ ಮತ್ತು 14 ವರ್ಷದ ಮಗಳ ತಂದೆಯಾಗಿ, ಈ ಘಟನೆಯ ಬಗ್ಗೆ ನಾನು ತೀವ್ರವಾಗಿ ನೋವು ಅನುಭವಿಸುತ್ತಿದ್ದೆ. ಆ ನೋವನ್ನು ವಿವರಿಸಲು ಸಾಧ್ಯವಿಲ್ಲ’ ಎಂದು ಅವರು ಹೇಳಿದರು.

‘ನಾಗರಿಕರ ಸುರಕ್ಷತೆ ನಮ್ಮ ಸರ್ಕಾರದ ಆದ್ಯತೆಯಾಗಿದೆ. ಮಕ್ಕಳ ಸುರಕ್ಷತೆ, ಅದರಲ್ಲೂ ವಿಶೇಷವಾಗಿ ಹದಿಹರೆಯದವರ ಸುರಕ್ಷತೆಯ ವಿಚಾರದಲ್ಲಿ ಸರ್ಕಾರದ ಜತೆಗೆ ಎಲ್ಲರೂ ಕೈಜೋಡಿಸಬೇಕು. ಈ ವಿಷಯದಲ್ಲಿ ಮಕ್ಕಳಿಗೆ ಮತ್ತು ಅಪ್ರಾಪ್ತ ವಯಸ್ಸಿನವರಿಗೆ ಮಾರ್ಗದರ್ಶನದ ಅಗತ್ಯವೂ ಇದೆ’ ಎಂದು ಸಾವಂತ್ ಅಭಿಪ್ರಾಯಪಟ್ಟಿದ್ದಾರೆ.

ಕೊರೊನಾ ಸಾಂಕ್ರಾಮಿಕದ ಹಿನ್ನೆಯಲ್ಲಿ ರಾಜ್ಯದಲ್ಲಿ ಕರ್ಫ್ಯೂ ವಿಧಿಸಲಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಜನರು ಗುಂಪು ಗುಂಪಾಗಿ ಸೇರುವುದನ್ನು ನಿರ್ಬಂಧಿಸಲಾಗಿದೆ. ಹೀಗಾಗಿ, ಅಪ್ರಾಪ್ತ ಮಕ್ಕಳ ಕಾಳಜಿಯ ಜವಾಬ್ದಾರಿಯನ್ನು ಎಲ್ಲರೂ ಹಂಚಿಕೊಳ್ಳುವ ಬಗ್ಗೆ ನಾನು ಹೇಳಿಕೆ ನೀಡಿದ್ದೆ. ಈ ಹೇಳಿಕೆಯಲ್ಲಿ ನನ್ನಂತೆಯೇ ಮಕ್ಕಳನ್ನು ಹೊಂದಿರುವ ನಾಗರಿಕರು ಮತ್ತು ಮಕ್ಕಳ ಬಗೆಗಿನ ಪ್ರೀತಿ ಮತ್ತು ಕಾಳಜಿ ಇತ್ತೇ ಹೊರತು, ಬೇರೆ ಏನೂ ಇರಲಿಲ್ಲ‌’ ಎಂದು ವಿವರಿಸಿದರು.

ಈ ವೇಳೆ ಸಾವಂತ್ ಅವರು, ಗೋವಾ ಸರ್ಕಾರದ ಕಾನೂನು ಸುವ್ಯವಸ್ಥೆಯನ್ನು ಸಮರ್ಥಿಸಿಕೊಂಡರು. ಈ ಪ್ರಕರಣದಲ್ಲಿ ಗೋವಾದ ಪೊಲೀಸರು ತಮ್ಮ ವೃತಿಪರತೆಯನ್ನು ಪ್ರದರ್ಶಿಸಿದ್ದಾರೆ. ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯ ವಿಷಯದಲ್ಲಿ ಕಾಳಜಿ ತೋರಿದ್ದಾರೆ. ಪ್ರಕರಣದ ಆರೋಪಿಗಳನ್ನು ತ್ವರಿತಗತಿಯಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುತ್ತದೆ ಎಂದು ಖಚಿತಪಡಿಸುತ್ತೇನೆ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT