ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಪೀಡಿತ ಪತಿ ಸಾವಿನ ಅಂಚಿನಲ್ಲಿ: ಐವಿಎಫ್‌ಗೆ ಅನುಮತಿ ಕೋರಿದ ಪತ್ನಿ

ವಡೋದರಾದ ಆಸ್ಪತ್ರೆಗೆ ನಿರ್ದೇಶನ ನೀಡಿದ ಗುಜರಾತ್ ಹೈಕೋರ್ಟ್
Last Updated 21 ಜುಲೈ 2021, 15:32 IST
ಅಕ್ಷರ ಗಾತ್ರ

ಅಹಮದಾಬಾದ್: ಕೋವಿಡ್ ಪೀಡಿತ ಪತಿ ಬದುಕುಳಿಯುವ ಸಾಧ್ಯತೆ ತೀರಾ ಕಮ್ಮಿ ಇದ್ದು, ಅವರಿಂದ ಮಗು ಪಡೆಯಬೇಕೆಂಬ ಪತ್ನಿಯ ಇಚ್ಛೆಯಂತೆ ಐವಿಎಫ್/ಎಆರ್‌ಟಿ ವಿಧಾನವನ್ನು ನೆರವೇರಿಸುವಂತೆ ವಡೋದರಾದ ಆಸ್ಪತ್ರೆಯೊಂದಕ್ಕೆ ಗುಜರಾತ್ ಹೈಕೋರ್ಟ್ ಮಂಗಳವಾರ ನಿರ್ದೇಶನ ನೀಡಿದೆ.

ಈ ಕುರಿತು ಆದೇಶ ಹೊರಡಿಸಿರುವ ಹೈಕೋರ್ಟ್, ಇದನ್ನು ‘ಅಸಾಮಾನ್ಯ ತುರ್ತುಪರಿಸ್ಥಿತಿ’ ಎಂದು ಪರಿಗಣಿಸಿದೆ.

ರೋಗಿಯ ಪತ್ನಿ ಸಲ್ಲಿಸಿದ ಅರ್ಜಿಯ ತುರ್ತು ವಿಚಾರಣೆಯ ನಂತರ, ನ್ಯಾಯಮೂರ್ತಿ ಅಶುತೋಷ್ ಜೆ. ಶಾಸ್ತ್ರಿ ಅವರು, ವಡೋದರಾ ಮೂಲದ ಆಸ್ಪತ್ರೆಗೆ ವೈದ್ಯಕೀಯ ಸಲಹೆಯಂತೆ ಐವಿಎಫ್/ಎಆರ್‌ಟಿ ಕಾರ್ಯವಿಧಾನ‌ದ ಮೂಲಕ ರೋಗಿಯಿಂದ ಮಾದರಿಯನ್ನು ಸಂಗ್ರಹಿಸಲು ಮತ್ತು ಸೂಕ್ತ ಸ್ಥಳದಲ್ಲಿ ಶೇಖರಿಸಿಡಲು ನಿರ್ದೇಶಿಸಿದರು.

‘ಐವಿಎಫ್/ಎಆರ್‌ಟಿಯ ತಂತ್ರಜ್ಞಾನದ ಮೂಲಕ ರೋಗಿಯ ಪತ್ನಿಯು ಕೃತಕ ಗರ್ಭಧಾರಣೆ ಮೂಲಕ ಮಗುವನ್ನು ಪಡೆಯಲು ಬಯಸಿದ್ದರು. ಆದರೆ, ಇದಕ್ಕೆ ನ್ಯಾಯಾಲಯದಿಂದ ಅನುಮತಿ ಬೇಕೆಂದು ಆಸ್ಪತ್ರೆ ಸೂಚಿಸಿತ್ತು’ ಎಂದು ಅರ್ಜಿದಾರ ಮಹಿಳೆಯ ಪರ ವಕೀಲರಾದ ನಿಲೇ ಪಟೇಲ್ ತಿಳಿಸಿದ್ದಾರೆ.

ಈ ಬಗ್ಗೆ ಅರ್ಜಿ ಸಲ್ಲಿಸಿದ್ದ ಅರ್ಜಿದಾರ ಮಹಿಳೆಯು ಇದನ್ನು ತುರ್ತು ವಿಚಾರಣೆಗೆ ಪರಿಗಣಿಸುವಂತೆ ಕೋರಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಹೈಕೋರ್ಟ್ ರಾಜ್ಯ ಸರ್ಕಾರ ಮತ್ತು ಆಸ್ಪತ್ರೆಯ ನಿರ್ದೇಶಕರಿಗೆ ನೋಟಿಸ್ ನೀಡಿದ್ದು, ಜುಲೈ 23ರೊಳಗೆ ಉತ್ತರಿಸುವಂತೆ ಸೂಚಿಸಿದೆ.

ಕೋವಿಡ್‌–19 ಪೀಡಿತರಾಗಿರುವ ಪತಿಯು ಬಹು ಅಂಗಾಂಗ ವೈಫಲ್ಯ ಸಮಸ್ಯೆ ಎದುರಿಸುತ್ತಿದ್ದು, ಜೀವ ಬೆಂಬಲದ (ಲೈಫ್ ಸಪೋರ್ಟ್) ವ್ಯವಸ್ಥೆಯಲ್ಲಿದ್ದಾರೆ. ವೈದ್ಯರ ಪ್ರಕಾರ ಅವರು ಬದುಕುಳಿಯುವ ಸಾಧ್ಯತೆ ಕಡಿಮೆ ಇದೆ. ಹಾಗಾಗಿ, ಐವಿಎಫ್/ಎಆರ್‌ಟಿ ಕಾರ್ಯವಿಧಾನ‌ಕ್ಕೆ ಪೂರಕವಾಗಿ ರೋಗಿಯ ವೀರ್ಯಾಣುಗಳ ಮಾದರಿಗಳನ್ನು ಸಂಗ್ರಹಿಸಿಡಲು ಆಸ್ಪತ್ರೆಗೆ ಆದೇಶ ನೀಡಬೇಕೆಂದು ಕೋರಿ ಅರ್ಜಿದಾರ ಮಹಿಳೆಯು ಹೈಕೋರ್ಟ್‌ಗೆ ತುರ್ತು ಮನವಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT