ಗುಜರಾತ್: ವಿಧಾನಸಭಾ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ 182 ಶಾಸಕರ ಪೈಕಿ 40 ಶಾಸಕರು ಅಪರಾಧ ಹಿನ್ನೆಲೆ ಹೊಂದಿದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್) ಹೇಳಿದೆ.
ಚುನಾವಣೆ ವೇಳೆ ಸಲ್ಲಿಸಿದ ಅಫಿಡವಿಟ್ ಪ್ರಕಾರ ಇವರ ವಿರುದ್ಧ ಅಪರಾಧ ಪ್ರಕರಣಗಳು ದಾಖಲಾಗಿವೆ. 40 ರಲ್ಲಿ 29 ಜನ ಕೊಲೆ ಯತ್ನ ಮತ್ತು ಅತ್ಯಾಚಾರದಂತಹ ಗಂಭೀರ ಅಪರಾಧ ಹಿನ್ನೆಲೆ ಹೊಂದಿರುವವರು. 29ರಲ್ಲಿ 20 ಜನ ಬಿಜೆಪಿ, 4 ಕಾಂಗ್ರೆಸ್, 2 ಆಮ್ ಆದ್ಮಿ ಮತ್ತು 2 ಪಕ್ಷೇತರ ಶಾಸಕರು ಹಾಗೂ ಒಬ್ಬರು ಸಮಾಜವಾದಿ ಪಕ್ಷದವರು.
ಡಿ.8ರಂದು ಗುಜರಾತ್ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, 7ನೇ ಅವಧಿಗೆ ಅಧಿಕಾರ ಹಿಡಿದಿರುವ ಬಿಜೆಪಿ 156 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ 17 ಮತ್ತು ಎಎಪಿ 5 ಸ್ಥಾನ ಗೆದ್ದಿದೆ.
ಎಡಿಆರ್ ಅಧ್ಯಯನದ ಪ್ರಕಾರ ಬಿಜೆಪಿಯ 156 ಶಾಸಕರ ಪೈಕಿ 26 (ಶೇ.17) ಶಾಸಕರು, ಕಾಂಗ್ರೆಸ್ 9 (ಶೇ.53) ಮತ್ತು ಎಎಪಿಯ 2 (ಶೇ.40), 2 ಸ್ವತಂತ್ರ ಅಭ್ಯರ್ಥಿಗಳು (ಶೇ.68) ಮತ್ತು ಸಮಾಜವಾದಿ ಪಕ್ಷದಿಂದ ಗೆದ್ದಿರುವ ಖಂಡಲ್ ಜಡೇಜ ಅಪರಾಧ ಪ್ರಕರಣ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ ಎಂದು ಎಎಡಿಆರ್ ವರದಿ ಹೇಳಿದೆ.
ಎಡಿಆರ್ ಚುನಾವಣಾ ವ್ಯವಸ್ಥೆ ಸುಧಾರಣೆಗಾಗಿ ಕೆಲಸ ಮಾಡುತ್ತಿದ್ದು ಹೊಸತಾಗಿ ಆಯ್ಕೆಯಾದ 182 ಶಾಸಕರ ಅಫಿಡವಿಟ್ ಅಧ್ಯಯನ ಮಾಡಿ ವರದಿ ನೀಡುತ್ತದೆ. 2017ರ ಚುನಾವಣೆ ಗೆದ್ದವರಲ್ಲಿ 47 ಅಭ್ಯರ್ಥಿಗಳ ಮೇಲೆ ಅಪರಾಧ ಪ್ರಕರಣಗಳಿತ್ತು ಎಂದು ಎಡಿಆರ್ ಹೇಳಿದೆ.
ಈ ಸಲ ಕಾಂಗ್ರೆಸ್‌ನಿಂದ ಆಯ್ಕೆಯಾದ ವಂಡ್ಸ ಶಾಸಕ ಅನಂತ್ ಪಟೇಲ್, ಪಟಾಣ್ ಶಾಸಕ ಕಿರಿತ್ ಪಟೇಲ್ ಮತ್ತು ಬಿಜೆಪಿ ಉನಾ ಶಾಸಕ ಕಲುಭಾಯ್ ರಾಥೋಡ್ ಮೇಲೆ ಐಪಿಸಿ 307ರ ಅನ್ವಯ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ನಾಲ್ವರ ಮೇಲೆ ಐಪಿಸಿ 376ರ ಪ್ರಕಾರ ಮಹಿಳೆಯರ ಮೇಲಿನ ಅಪರಾಧ ಪ್ರಕರಣ ದಾಖಲಾಗಿದೆ. ಕಾಂಗ್ರೆಸ್‌ನ ಜಿಗ್ನೇಶಿ ಮೇವಾನಿ ಮೇಲೆ ಕೂಡ ಐಪಿಸಿ 354 ಅಡಿಯಲ್ಲಿ ಪ್ರಕರಣವಿದೆ ಎಂದು ವರದಿ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.