ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭೆ ಚುನಾವಣೆ ಫಲಿತಾಂಶ: ಗುಜರಾತ್‌ನಲ್ಲಿ ಬಿಜೆಪಿಗೆ 156, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ಗೆ 40 ಸ್ಥಾನ
LIVE

ಗುಜರಾತ್‌, ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. ಎರಡು ರಾಜ್ಯಗಳಲ್ಲಿ ಹೊಸ ದಾಖಲೆಗಳನ್ನು ಬರೆಯುವ ಉಮೇದಿನಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳಿವೆ. ಈ ಮಧ್ಯೆ ಎಎಪಿ ಕೂಡ ಉತ್ತಮ ಪ್ರದರ್ಶನ ತೋರುವ ವಿಶ್ವಾಸ ಹೊಂದಿದೆ. ರಾಜಕೀಯ ಪಕ್ಷಗಳ ಜಿದ್ದಾಜಿದ್ದಿ ಹಾಗೂ ಫಲಿತಾಂಶದ ಕ್ಷಣಕ್ಷಣದ ಮಾಹಿತಿ ಇಲ್ಲಿದೆ...
Last Updated 9 ಡಿಸೆಂಬರ್ 2022, 1:52 IST
ಅಕ್ಷರ ಗಾತ್ರ
16:3708 Dec 2022

ಬಿಜೆಪಿಗೆ 156 ಸ್ಥಾನ

ಗುಜರಾತ್‌ ವಿಧಾನಸಭೆಯ ಎಲ್ಲ ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ 156 ಕ್ಷೇತ್ರಗಳಲ್ಲಿ ಗೆಲುವು ಕಂಡಿದ್ದು, ಕಾಂಗ್ರೆಸ್‌ 17, ಎಎಪಿ 5 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ. ನಾಲ್ಕು ಕ್ಷೇತ್ರಗಳು ಉಳಿದವರ ಪಾಲಾಗಿವೆ.

14:2808 Dec 2022

150ರ ಗಡಿ ದಾಟಿದ ಬಿಜೆಪಿ

ಗುಜರಾತ್‌ ವಿಧಾನಸಭೆಯ 175 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದೆ. ಈ ಪೈಕಿ ಬಿಜೆಪಿ 150 ಸ್ಥಾನಗಳಲ್ಲಿ ಗೆಲುವಿನ ನಗೆ ಬೀರಿದೆ.

ಕಾಂಗ್ರೆಸ್‌ 16, ಎಎಪಿ 5, ಪಕ್ಷೇತರರು 3 ಮತ್ತು ಸಮಾಜವಾದಿ ಪಕ್ಷ 1 ಕಡೆ ಜಯ ಸಾಧಿಸಿವೆ. 

14:0408 Dec 2022

ಮೇವಾನಿಗೆ ಜಯ

ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ದಲಿತ ನಾಯಕ ಜಿಗ್ನೇಶ್‌ ಮೇವಾನಿ ಅವರು ವಡಗಾವ್‌ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.

ಅವರು 93,848 ಮತ ಗಳಿಸಿಕೊಂಡಿದ್ದಾರೆ. ಅವರ ಸಮೀಪದ ಸ್ಪರ್ಧಿ ಎಂ.ಜೆ. ವಘೇಲಾ 89,052 ಪಡೆದು ಅಲ್ಪ ಅಂತರದಿಂದ ಸೋಲು ಕಂಡಿದ್ದಾರೆ.

ಈ ಗೆಲುವು ನನ್ನ ಜವಾಬ್ದಾರಿಯನ್ನು ಹೆಚ್ಚು ಮಾಡಿದೆ ಎಂದು ಫಲಿತಾಂಶದ ಬಳಿಕ ಟ್ವೀಟ್ ಮಾಡಿರುವ ಮೇವಾನಿ, ಕ್ಷೇತ್ರದ ಜನರಿಗೆ ಧನ್ಯವಾದ ಹೇಳಿದ್ದಾರೆ.

14:0008 Dec 2022

ಮತಗಳಿಕೆಯಲ್ಲಿ ಬಿಜೆಪಿ ಏರಿಕೆ; ಕಾಂಗ್ರೆಸ್‌ ಇಳಿಕೆ

2017ರ ಚುನಾವಣೆಯಲ್ಲಿ ಶೇ 49.05 ರಷ್ಟು ಮತ ಗಳಿಸಿದ್ದ ಬಿಜೆಪಿ ಈವರೆಗೆ ಶೇ 52.50 ರಷ್ಟು ಮತ ಗಳಿಸಿಕೊಂಡಿದೆ. ಶೇ 41.44 ರಷ್ಟಿದ್ದ ಕಾಂಗ್ರೆಸ್‌ ಮತ ಗಳಿಕೆ ಪ್ರಮಾಣ ಈ ಬಾರಿ ಶೇ 27.29ಕ್ಕೆ ಕುಸಿದಿದೆ.

ಇನ್ನೂ ಹತ್ತು ಕ್ಷೇತ್ರಗಳ ಮತ ಎಣಿಕೆ ಪೂರ್ಣಗೊಳ್ಳಬೇಕಿರುವುದರಿಂದ ಬಿಜೆಪಿ ಮತ ಪ್ರಮಾಣ ಏರಿಕೆಯಾಗುವ ಸಾಧ್ಯತೆ ಇದೆ.

ಆಮ್‌ ಆದ್ಮಿ ಪಕ್ಷ ಶೇ 12.92, ಎಐಎಂಐಎಂ ಶೇ 0.29, ಬಿಎಸ್‌ಪಿ ಶೇ 0.50, ಸಿಪಿಐ (ಎಂ) ಶೇ 0.03, ಜೆಡಿಎಸ್‌, ಸಿಪಿಐ ಹಾಗೂ ಸಿಪಿಐ (ಎಂಎಲ್‌–ಎಲ್‌) ತಲಾ ಶೇ 0.01 ರಷ್ಟು ಮತ ಪಡೆದಿವೆ. ಎನ್‌ಸಿಪಿ ಶೇ 0.24, ಎಸ್‌ಪಿ ಶೇ 0.29, ಇತರರು ಶೇ 4.34 ರಷ್ಟು ಮತ ಗಳಿಸಿಕೊಂಡಿದ್ದು, ಶೇ 1.57 ರಷ್ಟು ಮಂದಿ ನೋಟಾ ಒತ್ತಿದ್ದಾರೆ.

ಸಂಜೆ 6.50ರ ವರೆಗೆ ಬಿಜೆಪಿ 147 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದೆ. ಕಳೆದ ಬಾರಿ 77 ಕ್ಷೇತ್ರ ಗೆದ್ದಿದ್ದ, ಕಾಂಗ್ರೆಸ್‌ ಈವರೆಗೆ ಕಾಂಗ್ರೆಸ್‌ 16 ಸ್ಥಾನಗಳಲ್ಲಿ ಜಯ ಸಾಧಿಸಿದೆ. ಆಮ್‌ ಆದ್ಮಿ ಪಕ್ಷ 5 ಕ್ಷೇತ್ರಗಳಲ್ಲಿ, ಪಕ್ಷೇತರರು 3 ಸ್ಥಾನ ಹಾಗೂ ಸಮಾಜವಾದಿ ಪಕ್ಷ 1 ಕಡೆ ಗೆಲುವು ಸಾಧಿಸಿವೆ.

13:1508 Dec 2022

ರಾಹುಲ್ ಗಾಂಧಿ ಧನ್ಯವಾದ

ತೀವ್ರ ಕುತೂಹಲ ಮೂಡಿಸಿದ್ದ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸ್ಪಷ್ಟ ಬಹುಮತ ಸಾಧಿಸಿದೆ. ಈ ಹಿನ್ನೆಯಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ, ‘ಈ ವಿಜಯಕ್ಕೆ ಹಿಮಾಚಲ ಪ್ರದೇಶದ ಎಲ್ಲ ಮತದಾರರಿಗೆ ಹೃದಯ ಪೂರ್ವಕ ಧನ್ಯವಾದ ಹೇಳುತ್ತೇನೆ. ಕಾಂಗ್ರೆಸ್‌ನ ಎಲ್ಲ ಕಾರ್ಯಕರ್ತರು ಮತ್ತು ನಾಯಕರಿಗೆ ಶುಭಾಶಯ. ಈ ಜಯದ ಹಿಂದೆ ನಿಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಇದೆ’ ಎಂದಿದ್ದಾರೆ.

'ಚುನಾವಣೆ ಸಂದರ್ಭ ಜನರಿಗೆ ನೀಡಲಾದ ಎಲ್ಲ ಭರವಸೆಗಳನ್ನು ಆದಷ್ಟು ಬೇಗ ಈಡೇರಿಸುತ್ತೇವೆ ಎಂದು ನಾನು ಮತ್ತೊಮ್ಮೆ ಭರವಸೆ ನೀಡುತ್ತೇನೆ' ಎಂದೂ ತಿಳಿಸಿದ್ದಾರೆ.

12:2708 Dec 2022

ಗುಜರಾತ್‌ ಫಲಿತಾಂಶ: 182 ವಿಧಾನಸಭೆ ಕ್ಷೇತ್ರಗಳ ಪೈಕಿ ಬಿಜೆಪಿ ಇದುವರೆಗೆ 139ರಲ್ಲಿ ಗೆಲುವು ಸಾಧಿಸಿದೆ. ಇನ್ನೂ 17 ಕಡೆ ಮುನ್ನಡೆ ಸಾಧಿಸಿದ್ದು, ಗೆದ್ದ ಕ್ಷೇತ್ರಗಳ ಸಂಖ್ಯೆ ಮತ್ತಷ್ಟು ಏರಿಕೆಯಾಗಲಿದೆ. ಉಳಿದಂತೆ ಕಾಂಗ್ರೆಸ್‌ 15, ಎಎಪಿ 5 ಹಾಗೂ ಪಕ್ಷೇತರರು 4 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.

ಹಿಮಾಚಲ ಪ್ರದೇಶ ಫಲಿತಾಂಶ: 68 ವಿಧಾನಸಭೆ ಸ್ಥಾನಗಳಿರುವ ಹಿಮಾಚಲ ಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿ ಇದುವರೆಗೆ 18 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. 7 ಕ್ಷೇತ್ರಗಳಲ್ಲಿ ಮುನ್ನಡೆಯನ್ನೂ ಕಾಯ್ದುಕೊಂಡಿದೆ. ಕಾಂಗ್ರೆಸ್‌ 39 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತ ಪಡೆದಿದ್ದು, ಇನ್ನೊಂದು ಕಡೆ ಮುನ್ನಡೆಯಲ್ಲಿದೆ. ಮೂರು ಕ್ಷೇತ್ರಗಳು ಇತರರ ಪಾಲಾಗಿವೆ.

12:2308 Dec 2022

ಕಾರ್ಯಕರ್ತರ ಶ್ರಮದಿಂದಲೇ ಐತಿಹಾಸಿಕ ಜಯ: ಮೋದಿ

ಚುನಾವಣೆಯಲ್ಲಿ ಪಕ್ಷದ ಪರ ಕೆಲಸ ಮಾಡಿದ ಕಾರ್ಯಕರ್ತರಿಗೆ ಧನ್ಯವಾದ ಹೇಳಿರುವ ಮೋದಿ, 'ಪ್ರತಿಯೊಬ್ಬರೂ ಚಾಂಪಿಯನ್‌ಗಳು ಎಂದು ಗುಜರಾತ್‌ನ ಎಲ್ಲ ಪರಿಶ್ರಮಿ ಕಾರ್ಯಕರ್ತರಿಗೂ ಹೇಳಲು ಬಯಸುತ್ತೇನೆ. ನಮ್ಮ ಪಕ್ಷದ ನಿಜವಾದ ಶಕ್ತಿಯಾಗಿರುವ ಕಾರ್ಯಕರ್ತರ ಅಸಾಧಾರಣ ಶ್ರಮವಿಲ್ಲದೆ ಈ ಐತಿಹಾಸಿಕ ಜಯ ಸಾಧ್ಯವಾಗುತ್ತಿರಲಿಲ್ಲ' ಎಂದು ತಿಳಿಸಿದ್ದಾರೆ.

11:3008 Dec 2022

ಗುಜರಾತ್‌ ಜನ ಶಕ್ತಿಗೆ ತಲೆಬಾಗುತ್ತೇನೆ –ಮೋದಿ

ಅಭೂತಪೂರ್ವ ಚುನಾವಣಾ ಫಲಿತಾಂಶ ಕಂಡು ಭಾವುಕನಾಗಿದ್ದೇನೆ. ಅಭಿವೃದ್ಧಿ ರಾಜಕೀಯಕ್ಕೆ ಆಶೀರ್ವಾದ ಮಾಡಿರುವ ಜನರು, ಅದು ಹಾಗೆಯೇ ಮುಂದುವರಿಯುವುದನ್ನು ಬಯಸಿದ್ದಾರೆ. ಗುಜರಾತ್‌ ಜನ ಶಕ್ತಿಗೆ ತಲೆಬಾಗುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

10:5408 Dec 2022

ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಬಹುಮತ ಸಾಧಿಸುವತ್ತ ಮುನ್ನಡೆದಿದೆ. ಈ ಹಿನ್ನಲೆಯಲ್ಲಿ ಮಾತನಾಡಿರುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯದ ಜನರು, ಪಕ್ಷದ  ಕಾರ್ಯಕರ್ತರು, ನಾಯಕರುಗಳಿಗೆ ಧನ್ಯವಾದ ಹೇಳಿದ್ದಾರೆ.

10:5208 Dec 2022

ಬಿಜೆಪಿಯಿಂದ ಶಾಸಕರ ಖರೀದಿ ಆತಂಕದಲ್ಲಿ ಕಾಂಗ್ರೆಸ್

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಬಹುಮತ ಸಾಧಿಸುವುದು ಬಹುತೇಕ ಖಚಿತವಾಗಿದೆ. 68 ಕ್ಷೇತ್ರಗಳ ಪೈಕಿ 39ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆ ಪಡೆದಿದ್ದಾರೆ. ಬಿಜೆಪಿ 27 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಈ ಮಧ್ಯೆ, ಕಾಂಗ್ರೆಸ್‌ಗೆ ಶಾಸಕರ ಖರೀದಿ ಆತಂಕ ಶುರುವಾಗಿದೆ.

ಈ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶದ ಚುನಾವಣಾ ವೀಕ್ಷಕರಾದ ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್ ಅವರ ಜೊತೆ ಭೂಪಿಂದರ್ ಸಿಂಗ್ ಹೂಡಾ, ಹಿಮಾಚಲ ಪ್ರದೇಶದ ಎಐಸಿಸಿ ಉಸ್ತುವಾರಿ ರಾಜೀವ್ ಶುಕ್ಲಾ ಸೇರಿದಂತೆ ಹಿರಿಯ ನಾಯಕರನ್ನು ಕಾಂಗ್ರೆಸ್ ಹೈಕಮಾಂಡ್ ಚಂಡೀಗಢಕ್ಕೆ ಕಳುಹಿಸಿದೆ.