ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ: ವಿಶೇಷ ಸ್ಥಾನ ಮರುಸ್ಥಾಪನೆ ಒತ್ತಾಯಕ್ಕೆ ನಿರ್ಧಾರ

ಕಾಶ್ಮೀರ: ಗುಪ್ಕಾರ್ ಸಭೆಯಲ್ಲಿ ತೀರ್ಮಾನ
Last Updated 22 ಜೂನ್ 2021, 19:45 IST
ಅಕ್ಷರ ಗಾತ್ರ

ಶ್ರೀನಗರ: ‘ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಮರುಸ್ಥಾಪಿಸದ ಹೊರತು ಕಣಿವೆಯಲ್ಲಿ ಶಾಂತಿ ಸ್ಥಾಪನೆ ಸಾಧ್ಯವಿಲ್ಲ’ ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ.

ನ್ಯಾಷನಲ್‌ ಕಾನ್ಫರೆನ್ಸ್‌ ಅಧ್ಯಕ್ಷ ಫಾರೂಕ್‌ ಅಬ್ದುಲ್ಲಾ ಅವರ ನಿವಾಸದಲ್ಲಿ ನಡೆದಗುಪ್ಕಾರ್ ಕೂಟದ ಪಕ್ಷಗಳ ಸಭೆಯ ನಂತರ ಮಾಧ್ಯಮಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ನಮ್ಮಿಂದ ಕಿತ್ತುಕೊಂಡಿರುವ ಜಮ್ಮು ಕಾಶ್ಮೀರ ವಿಶೇಷ ಸ್ಥಾನಮಾನ ಮರು ಸ್ಥಾಪಿಸುವಂತೆ ಪ್ರಧಾನಿ ನೇತೃತ್ವದ ಸಭೆಯಲ್ಲಿ ಒತ್ತಾಯಿಸುತ್ತೇನೆ’ ಎಂದು ಹೇಳಿದರು.

‘ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಕೇಂದ್ರ ಸರ್ಕಾರವು ಪಾಕಿಸ್ತಾನ ಸೇರಿದಂತೆ ಎಲ್ಲರೊಂದಿಗೂ ಮಾತುಕತೆ ನಡೆಸಬೇಕು. ಅವರು (ಭಾರತ) ದೋಹಾದ ತಾಲಿಬಾನ್ ಜೊತೆ ಮಾತನಾಡುತ್ತಿದ್ದಾರೆ. ಅದರಂತೆ ಕಾಶ್ಮೀರ ಸಮಸ್ಯೆಯ ಪರಿಹಾರಕ್ಕಾಗಿ ಜಮ್ಮು ಮತ್ತು ಕಾಶ್ಮೀರದ ಜನರೊಂದಿಗೆ ಮತ್ತು ಪಾಕಿಸ್ತಾನದೊಂದಿಗೆ ಮಾತನಾಡಬೇಕು’ ಎಂದರು.

ಕೇಂದ್ರದೊಂದಿಗೆ ಮಾತುಕತೆಯನ್ನು ತಮ್ಮ ಪಕ್ಷ ಎಂದಿಗೂ ವಿರೋಧಿಸಿಲ್ಲ. ಕೋವಿಡ್ ಕಾರಣದಿಂದಾಗಿ ದೇಶದ ಇತರ ಭಾಗಗಳಲ್ಲಿ ಮಾಡಿರುವಂತೆ, ಕಾಶ್ಮೀರದಲ್ಲಿಯೂ ಕೈದಿಗಳನ್ನು ಬಿಡುಗಡೆ ಮಾಡಬೇಕು. ಜನರ ಆತ್ಮವಿಶ್ವಾಸ ಹೆಚ್ಚಿಸುವ ಇಂತಹ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಕಳೆದ ಎರಡು ವರ್ಷಗಳಲ್ಲಿ ತುಂಬಾ ಅವಮಾನಕ್ಕೊಳಗಾಗಿರುವ ರಾಜಕೀಯ ಪಕ್ಷಗಳು ಹಾಗೂ ಜನರ ವಿಶ್ವಾಸ ಗಳಿಸಬೇಕಾದರೆ, ಕೇಂದ್ರವು ರಾಜಕೀಯ ಕೈದಿಗಳು ಮತ್ತು ಇತರ ಬಂಧಿತರನ್ನು ಬಿಡುಗಡೆ ಮಾಡಬೇಕಾಗಿತ್ತು ಎಂದು ಮೆಹಬೂಬಾ ಹೇಳಿದರು.

ಬಿಜೆಪಿ ಸ್ವಾಗತ

ಜಮ್ಮು: ಪ್ರಧಾನಿ ನೇತೃತ್ವದ ಸಭೆಯಲ್ಲಿ ಭಾಗವಹಿಸಲು ಗುಪ್ಕಾರ್ ಕೂಟ ತೆಗೆದುಕೊಂಡಿರುವ ನಿರ್ಧಾರವನ್ನು ಜಮ್ಮು ಕಾಶ್ಮೀರ ಬಿಜೆಪಿ ಘಟಕದ ಮುಖ್ಯಸ್ಥ ರವೀಂದರ್ ರೈನಾ ಸ್ವಾಗತಿಸಿದ್ದಾರೆ.

‘ನಾವೆಲ್ಲರೂ ರಾಷ್ಟ್ರದ ಹಿತದೃಷ್ಟಿಯಿಂದ ಒಂದಾಗಬೇಕು ಮತ್ತು ‘ಏಕ ಭಾರತ ಶ್ರೇಷ್ಠ ಭಾರತ’ಕ್ಕಾಗಿ ಕೆಲಸ ಮಾಡಬೇಕಿದೆ’ ಎಂದು ಅವರು ಹೇಳಿದ್ದಾರೆ.

ಸಮಸ್ಯೆಗಳನ್ನು ಬಗೆಹರಿಸುವ ಮತ್ತು ವಂಚಿತ ಸಮುದಾಯಗಳಿಗೆ ನ್ಯಾಯ ಒದಗಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗೆ ಸದಾ ಚಿಂತಿಸುವ ಪ್ರಧಾನಿಯ ನಿಲುವನ್ನು ರೈನಾ ಶ್ಲಾಘಿಸಿದ್ದಾರೆ.

*******

ಸಭೆಯ ಕಾರ್ಯಸೂಚಿ ಏನು ಎಂದು ಕೇಂದ್ರ ಸರ್ಕಾರ ತಿಳಿಸಿಲ್ಲ. ಹೀಗಾಗಿ ನಾವು ಯಾವ ವಿಷಯದ ಬಗ್ಗೆಯೂ ಮಾತನಾಡಬಹುದು

- ಫಾರೂಕ್ ಅಬ್ದುಲ್ಲಾ, ಗುಪ್ಕಾರ್ ಮುಖ್ಯಸ್ಥ

*******

ನಾವು ನಕ್ಷತ್ರಗಳನ್ನು ಕೇಳುತ್ತಿಲ್ಲ. ನಮ್ಮದನ್ನು ನಾವು ಕೇಳುತ್ತಿದ್ದೇವೆ. ಪ್ರಸ್ತಾವ ಕಾಶ್ಮೀರದ ಜನರ ಹಿತಕ್ಕೆ ಅನುಗುಣವಾಗಿದ್ದರೆ, ಒಪ್ಪುತ್ತೇವೆ

ಎಂ.ವೈ. ತಾರಿಗಾಮಿ, ಸಿಪಿಎಂ ಮುಖ್ಯಸ್ಥ

*********
370ನೇ ವಿಧಿ ಮತ್ತು 35 ಎ ವಿಧಿಗಳನ್ನು ಮರುಸ್ಥಾಪಿಸಬೇಕು ಎಂಬ ನಮ್ಮ ಬೇಡಿಕೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ


- ಮುಜಪ್ಫರ್ ಶಾ, ಎಎನ್‌ಸಿ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT