ಕೊರೊನಾ ಭಯಕ್ಕೆ ಜಾಮೀನು ಕೋರಿದ ಬಾಲಾಪರಾಧಿ:ಸಿಬಿಐ ಪ್ರತಿಕ್ರಿಯೆ ಕೇಳಿದ ‘ಸುಪ್ರೀಂ’

ನವದೆಹಲಿ: 2017ರಲ್ಲಿ ಏಳು ವರ್ಷದ ಸಹ ವಿದ್ಯಾರ್ಥಿಯನ್ನು ಕೊಲೆ ಮಾಡಿದ ಆರೋಪದ ಪ್ರಕರಣದಲ್ಲಿ ಬಂಧನದಲ್ಲಿರುವ ಗುರುಗ್ರಾಮದ ಪ್ರತಿಷ್ಠಿತ ಶಾಲೆಯೊಂದರ ಹನ್ನೆರಡನೇ ತರಗತಿಯ ಬಾಲಾಪರಾಧಿ ಕೋವಿಡ್ 19 ಸೋಂಕಿನ ಭಯದಿಂದ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯಿಸುವಂತೆ ಸುಪ್ರೀಂಕೋರ್ಟ್ ಸಿಬಿಐಗೆ ಆದೇಶ ನೀಡಿದೆ.
ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಎಂ.ಆರ್.ಶಾ ಅವರಿದ್ದ ಪೀಠವು, ಈ ಸಂಬಂಧ ಸಿಬಿಐಗೆ ನೋಟಿಸ್ ನೀಡಿ, ಜುಲೈ 1ರೊಳಗೆ ಅಫಿಡವಿಟ್ ಸಲ್ಲಿಸಲು ಸೂಚಿಸಿದೆ.
‘ಬಾಲಮಂದಿರದಲ್ಲಿ ಹಲವಾರು ಸಹ ಕೈದಿಗಳಿಗೆ ಕೋವಿಡ್ 19 ಸೋಂಕು ದೃಢಪಟ್ಟಿರುವುದರಿಂದ ನನ್ನ ಜೀವಕ್ಕೂ ಅಪಾಯವಿದೆ’ ಎಂದು ಆತಂಕ ತೋಡಿಕೊಂಡಿರುವ ಬಾಲಾಪರಾಧಿ, ಕರ್ನಲ್‌ನಲ್ಲಿರುವ ಬಾಲಮಂದಿರದಿಂದ ಬಿಡುಗಡೆ ಮಾಡುವಂತೆ ಕೋರಿದ್ದಾನೆ.
ಪ್ರಕರಣದ ದಾಖಲೆಗಳಲ್ಲಿ ‘ಮಾಸ್ಟರ್ ಭೋಲು’ ಎಂದು ಹೆಸರಿಸಿರುವ ಬಾಲಾಪರಾಧಿ ಪರವಾಗಿ ಹಿರಿಯ ವಕೀಲ ಮನನ್ ಕುಮಾರ್ ಮಿಶ್ರಾ ಮತ್ತು ವಕೀಲ ದುರ್ಗಾ ದತ್ ಅವರು ಸಲ್ಲಿಸಿದ ಅರ್ಜಿಯನ್ನು ಆಲಿಸಿದ ಪೀಠವು, ಈ ಆದೇಶ ನೀಡಿತು.
2017ರ ಸೆಪ್ಟೆಂಬರ್ 1ರಂದು ರಯಾನ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ವಾಷ್ ರೂಮ್‌ನಲ್ಲಿ 7 ವರ್ಷದ ಬಾಲಕನ ಕೊಲೆಯಾಗಿದ್ದು, ಗಂಟಲು ಸೀಳಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಶಾಲೆಯ ಪರೀಕ್ಷೆ ಮತ್ತು ಪೋಷಕರು– ಶಿಕ್ಷಕರ ಮೀಟಿಂಗ್ ಮುಂದೂಡುವ ಸಲುವಾಗಿ ಆರೋಪಿಯು ಬಾಲಕನನ್ನು ಹತ್ಯೆ ಮಾಡಿದ್ದಾನೆ ಎಂದು ಸಿಬಿಐ ಚಾರ್ಜ್‌ಶೀಟ್ ಸಲ್ಲಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.