ಸೋಮವಾರ, ಸೆಪ್ಟೆಂಬರ್ 20, 2021
29 °C

ನಿಫಾ ವೈರಸ್‌ ಮೂಲ, ಸೋಂಕಿತರ ಸಂಪರ್ಕ ಪತ್ತೆಗೆ ಆದ್ಯತೆ: ಕೇರಳ ಆರೋಗ್ಯ ಸಚಿವೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೋಯಿಕ್ಕೋಡ್‌: ‘ನಿಫಾ ವೈರಸ್‌ ಸೋಂಕಿನ ಮೂಲ ಹುಡುಕುವ ಹಾಗೂ ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚುವ ಕಾರ್ಯವನ್ನು ಬಲಪಡಿಸಲು ಆರೋಗ್ಯ ಇಲಾಖೆ ಆದ್ಯತೆ ನೀಡುತ್ತಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಒತ್ತಿ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಿಫಾ ವೈರಸ್ ಸೋಂಕಿನಿಂದ ಭಾನುವಾರ 12 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಆತ, ಹೆಚ್ಚು ಜನರೊಂದಿಗೆ ಸಂಪರ್ಕ ಹೊಂದಿರುವ ಸಾಧ್ಯತೆಗಳಿವೆ. ಬಾಲಕನ ಸಂಪರ್ಕದಲ್ಲಿದ್ದ 188 ಮಂದಿಯನ್ನು ಪತ್ತೆ ಮಾಡಲಾಗಿದೆ. ಆ ಪೈಕಿ 20 ಮಂದಿಯನ್ನು ‘ಅಪಾಯದ ವಿಭಾಗ(ಹೈ ರಿಸ್ಕ್‌)‘ ಎಂದು ಗುರುತಿಸಲಾಗಿದ್ದು, ಅದರಲ್ಲಿ ಏಳು ಮಂದಿಯ ಮಾದರಿಗಳನ್ನು ಸಂಗ್ರಹಿಸಿ ಪುಣೆಯ ಎನ್‌ಐವಿ ಪರೀಕ್ಷಾಲಯಕ್ಕೆ ಕಳುಹಿಸಲಾಗಿದೆ‘ ಎಂದು ಹೇಳಿದರು.

ನಿಫಾ ವೈರಸ್‌ ಸೋಂಕು ತಗುಲಿದ ಬಾಲಕನನ್ನು ಪೋಷಕರು ಮೊದಲು ಕ್ಲಿನಿಕ್‌ಗೆ ಕರೆದೊಯ್ದಿದ್ದಾರೆ. ನಂತರ ಖಾಸಗಿ ಆಸ್ಪತ್ರೆಗೆ, ಆ ನಂತರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ದು, ಕೊನೆಯಲ್ಲಿ ಇನ್ನೊಂದು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಹೀಗಾಗಿ ಬಾಲಕ ಹೆಚ್ಚು ಜನರೊಂದಿಗೆ ಸಂಪರ್ಕ ಹೊಂದಿರುವ ಸಾಧ್ಯತೆ ಇದೆ. ಎಲ್ಲರನ್ನೂ ಪತ್ತೆ ಮಾಡಲು ಪ್ರಯತ್ನಿಸುತ್ತಿದ್ದೇವೆ‘ ಎಂದು ಅವರು ಹೇಳಿದರು.

‘ಸೋಂಕಿತರ ಪತ್ತೆ ಹಚ್ಚುವ ಪ್ರಕ್ರಿಯೆಯನ್ನು ಬಲಗೊಳಿಸಬೇಕಿದೆ. ಇದು ಸೋಂಕಿನ ಮೂಲ ಪತ್ತೆ ಹಚ್ಚುವಷ್ಟೇ ಮುಖ್ಯವಾದ ಕೆಲಸವಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಕ್ಷೇತ್ರ ಸಿಬ್ಬಂದಿಗೆ ವಿಶೇಷ ತರಬೇತಿ ನೀಡುತ್ತಿದ್ದೇವೆ‘ ಎಂದು ಹೇಳಿದ ವೀಣಾ ಜಾರ್ಜ್‌, ‘ಬಾಲಕನಿಗೆ ಸೋಂಕು ಎಲ್ಲಿಂದ ತಗುಲಿತು ಎಂಬುದರ ಬಗ್ಗೆ ಪತ್ತೆ ಮಾಡಬೇಕಿದೆ‘ ಎಂದು ಹೇಳಿದರು. 

‘ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಿರುವ ಏಳು ಮಂದಿಯ ಮಾದರಿಗಳ ವರದಿಯ ನಿರೀಕ್ಷೆಯಲ್ಲಿದ್ದೇವೆ. ಸೋಂಕಿತರ ಮಾದರಿಗಳ ಪರೀಕ್ಷೆಗಾಗಿ ಭೋಪಾಲ್‌ನ ಎನ್‌ಐವಿ ಸಹಾಯವನ್ನು ಕೋರಿದ್ದೇವೆ. ಕೋಯಿಕ್ಕೋಡ್‌ ವೈದ್ಯಕೀಯ ಕಾಲೇಜಿನಲ್ಲಿ ‘ಸೋಂಕು ಪತ್ತೆ ಸೌಲಭ್ಯ‘ವನ್ನು ಪುಣೆಯ ಎನ್‌ಐವಿ ಅನುಷ್ಠಾನಗೊಳಿಸಲಿದ್ದು, ಇದರಿಂದ, ವೇಗವಾಗಿ ಪರೀಕ್ಷಾ ವರದಿಗಳನ್ನು ಪಡೆಯಲು ಸಹಾಯವಾಗುತ್ತದೆ‘ ಎಂದು ವೀಣಾ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು