ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಲಾಬ್‌ ಅಬ್ಬರ: ತೆಲಂಗಾಣದಲ್ಲಿ ಮಳೆ ಆರ್ಭಟ

ಆಂಧ್ರ ಪ್ರದೇಶ, ಒಡಿಶಾದಲ್ಲಿಯೂ ಚಂಡಮಾರುತಡ ಪರಿಣಾಮ
Last Updated 27 ಸೆಪ್ಟೆಂಬರ್ 2021, 17:12 IST
ಅಕ್ಷರ ಗಾತ್ರ

ಹೈದರಾಬಾದ್‌/ಅಮರಾವತಿ/ ಭುವನೇಶ್ವರ: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಗುಲಾಬ್‌ ಚಂಡಮಾರುತದ ಪರಿಣಾಮವಾಗಿ, ತೆಲಂಗಾಣ, ಆಂಧ್ರಪ್ರದೇಶದಲ್ಲಿ ಸೋಮವಾರ ಭಾರಿ ಮಳೆಯಾಗಿದೆ. ತೆಲಂಗಾಣದ 14 ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಮಳೆ–ಭೂಕುಸಿತದಿಂದ ಒಡಿಶಾದಲ್ಲಿಯೂ ಜನಜೀವನ ಅಸ್ತವ್ಯಸ್ತಗೊಂಡಿದೆ.

ತೆಲಂಗಾಣದ ನಿರ್ಮಲ್‌, ನಿಜಾಮಾಬಾದ್‌, ಜಗಿತ್ಯಾಲ, ರಾಜಣ್ಣ ಸಿರಿಸಿಲ್ಲ, ಪೆದ್ದಪಲ್ಲಿ, ಕರೀಂನಗರ, ಭದ್ರಾದ್ರಿ, ವರಂಗಲ್ (ನಗರ), ವರಂಗಲ್ (ಗ್ರಾಮೀಣ), ಸಿದ್ದಿಪೇಟ್, ಕಾಮಾರೆಡ್ಡಿ ಸೇರಿದಂತೆ 14 ಜಿಲ್ಲೆಗಳಲ್ಲಿ, ಮುಂದಿನ 24 ಗಂಟೆಗಳಲ್ಲಿ ತೀವ್ರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ರಸ್ತೆಗಳು ಹಾಗೂ ಬಹುತೇಕ ತಗ್ಗು ಪ್ರದೇಶಗಳು, ಕೃಷಿ ಜಮೀನು ಜಲಾವೃತಗೊಳ್ಳಬಹುದು. ಗುಡುಗು–ಸಿಡಿಲು ಸಮೇತ ಸುರಿಯುವ ಮಳೆ ಹಾಗೂ ಗಾಳಿಯು ಸಾಕಷ್ಟು ಹಾನಿ ಮಾಡುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ.

ಸೋಮವಾರ ಮಧ್ಯಾಹ್ನ 3 ಗಂಟೆವರೆಗೆ ಕಮ್ಮಮ್‌ ಜಿಲ್ಲೆಯ ಬಚೋಡುನಲ್ಲಿ 15 ಸೆಂ.ಮೀ ಹಾಗೂ ವ್ಯಾರಾದಲ್ಲಿ 14 ಸೆಂ.ಮೀ ಮಳೆಯಾಗಿದೆ. ಹೈದರಾಬಾದ್‌ನ ಹಲವು ಭಾಗಗಳಲ್ಲಿಯೂ ಸೋಮವಾರ ಬೆಳಿಗ್ಗೆಯಿಂದ ಮಳೆಯಾಗಿದೆ.

ಚಂಡಮಾರುತದಿಂದಾಗಿ ಭಾರಿ ಮಳೆ ಅನಾಹುತ ಎದುರಿಸಲಿರುವ ಜಿಲ್ಲೆಗಳಲ್ಲಿ ಮುಂದಿನ ಕೆಲ ದಿನಗಳ ಕಾಲ ಕಟ್ಟೆಚ್ಚರ ವಹಿಸುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಅನಗತ್ಯವಾಗಿ ಮನೆಯಿಂದ ಹೊರಬರದಂತೆ ಸಾರ್ವಜನಿಕರಿಗೆ ಪೊಲೀಸರು ಮನವಿ ಮಾಡಿದ್ದಾರೆ.

ಆಂಧ್ರಪ್ರದೇಶದಲ್ಲಿ ಸೋಮವಾರ ಮಹಿಳೆಯೊಬ್ಬರು ಮೃತಪಟ್ಟಿದ್ದು, ಸತ್ತವರ ಸಂಖ್ಯೆ ಎರಡಕ್ಕೆ ಏರಿದೆ. ಶ್ರೀಕಾಕುಳಂ ಜಿಲ್ಲೆಯಲ್ಲಿ ಚಂಡಮಾರುತಕ್ಕೆ ಸಿಲುಕಿ ಭಾನುವಾರ ಮೀನುಗಾರರೊಬ್ಬರು ಮೃತಪಟ್ಟಿದ್ದರು.

ಹೆಚ್ಚು ಹಾನಿಗೀಡಾದ ಶ್ರೀಕಾಕುಳಂ ಜಿಲ್ಲೆಯಲ್ಲಿ, 1,500 ಜನರಿಗೆ 38 ಕೇಂದ್ರಗಳಲ್ಲಿ ವಸತಿ–ಊಟದ ವ್ಯವಸ್ಥೆ ಮಾಡಲಾಗಿದೆ. ರಸ್ತೆಯಲ್ಲಿ ಉರುಳಿಬಿದ್ದಿರುವ ಮರಗಳನ್ನು ತೆರವುಗೊಳಿಸಲಾ
ಗುತ್ತಿದ್ದು, ವಿದ್ಯುತ್‌ ಸಂಪರ್ಕ ವ್ಯವಸ್ಥೆಯನ್ನು ಮರುಸ್ಥಾಪಿಸುವ ಕೆಲಸ ನಡೆಯುತ್ತಿದೆ.

ವಿಶಾಖಪಟ್ಟಣದಲ್ಲಿ ಕಳೆದ 24 ಗಂಟೆಯಲ್ಲಿ 33.3 ಸೆಂ.ಮೀ ದಾಖಲೆಯ ಮಳೆಯಾಗಿದೆ.ಇದೇ ಅವಧಿಯಲ್ಲಿ ಶ್ರೀಕಾಕುಳಂ, ವಿಜಯನಗರಂ, ವಿಶಾಖಪಟ್ಟಣ, ಪೂರ್ವ ಗೋದಾವರಿ, ಪಶ್ಚಿಮ ಗೋದಾವರಿ ಹಾಗೂ ಕೃಷ್ಣಾ ಜಿಲ್ಲೆಗಳಲ್ಲಿ 6 ಸೆಂ.ಮೀ ನಿಂದ 33.3 ಸೆಂ.ಮೀ ವರೆಗೆ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಒಡಿಶಾದ ಗಜಪತಿ, ಕೊರಪುಟ್‌ ಹಾಗೂ ಮಲ್ಕನ್‌ಗಿರಿ ಜಿಲ್ಲೆಗಳಲ್ಲಿ ಕೆಲವೆಡೆ
ಭೂಕುಸಿತವಾಗಿದ್ದು, ಅಲ್ಲಲ್ಲಿ ಮರಗಳು ಉರುಳಿವೆ. ಹಲವು ಮನೆಗಳು ಜಖಂಗೊಂಡಿವೆ. ಹಳಿಗಳು ಜಲಾವೃತವಾಗಿರುವುದರಿಂದ, ಪೂರ್ವ ಕರಾ
ವಳಿಯ ವಿಶಾಖಪಟ್ಟಣ–ವಿಜಯನಗರ–ರಾಯಗಡ ವಿಭಾಗದ 16 ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ.

ಒಡಿಶಾದ ಗೋಪಾಲ‍ಪುರದಿಂದ 95 ಕಿ.ಮೀ ದೂರದಲ್ಲಿರುವ, ಆಂಧ್ರಪ್ರದೇಶದ ಸ್ಥಳವೊಂದರಲ್ಲಿ ಭೂಕುಸಿತವಾಗಿದೆ. ಹೀಗಾಗಿ, ಮುನ್ನೆಚ್ಚರಿಕೆ ಕ್ರಮವಾಗಿ 1,500ಕ್ಕೂ ಹೆಚ್ಚು ಗರ್ಭಿಣಿಯರು ಸೇರಿದಂತೆ 46 ಸಾವಿರ ಜನರನ್ನು ತೆರವುಗೊಳಿಸಿ, ಸುರಕ್ಷಿತ ಸ್ಥಳಗಳಿಗೆ ಕಳುಹಿಸಿಕೊಡಲಾಗಿದೆ. ಅವರಿಗೆ ಆಹಾರದ ವ್ಯವಸ್ಥೆಯನ್ನು ಮಾಡಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT