ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ನಿರ್ವಹಣೆ ವಿಫಲ: ದೆಹಲಿ ಸರ್ಕಾರಕ್ಕೆ ಹೈಕೋರ್ಟ್‌ ಚಾಟಿ

Last Updated 27 ಏಪ್ರಿಲ್ 2021, 21:50 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿಯ ಆಮ್‌ ಅದ್ಮಿ ಪಕ್ಷ (ಎಎಪಿ) ನೇತೃತ್ವದ ಸರ್ಕಾರದ ವಿರುದ್ಧ ಮಂಗಳವಾರ ಚಾಟಿ ಬೀಸಿರುವ ಹೈಕೋರ್ಟ್‌, ‘ನಿಮ್ಮ ಆಡಳಿತ ವ್ಯವಸ್ಥೆಸಂಪೂರ್ಣ ವಿಫಲವಾಗಿದೆ. ಆಕ್ಸಿಜನ್‌ ಸಿಲಿಂಡರ್‌ಗಳು, ಔಷಧಗಳು ರಾಜಧಾನಿಯಲ್ಲಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಅದನ್ನು ತಡೆಯಲೂ ಆಗುತ್ತಿಲ್ಲ’ ಎಂದು ಹರಿಹಾಯ್ದಿದೆ.

ನ್ಯಾಯಮೂರ್ತಿಗಳಾದ ವಿಪಿನ್ ಸಾಂಘಿ ಮತ್ತು ರೇಖಾ ಪಳ್ಳಿ ಅವರಿದ್ದ ಪೀಠವು, ‘ವೈದ್ಯಕೀಯ ಆಕ್ಸಿಜನ್‌ ಪೂರೈಕೆಗೆ ಸಂಬಂಧಿಸಿದಂತೆ ದೆಹಲಿ ಸರ್ಕಾರದ ಆದೇಶವನ್ನು ಯಾವುದೇ ಪೂರೈಕೆದಾರ ಗಂಭೀರವಾಗಿ ಪರಿಗಣಿಸಿಲ್ಲ ಎಂಬುದು ನಮಗೆ ಸಖೇದಾಶ್ಚರ್ಯ ಮೂಡಿಸಿದೆ’ ಎಂದು ಹೇಳಿತು.

ರಾಜಧಾನಿಯಲ್ಲಿ ವಿವಿಧ ಆಸ್ಪತ್ರೆಗಳು ಆಕ್ಸಿಜನ್‌ ಕೊರತೆ ಎದುರಿಸುತ್ತಿವೆ ಎಂದ ಪೀಠ, ಒಂದು ಹಂತದಲ್ಲಿ, ‘ದೆಹಲಿ ಸರ್ಕಾರ ತನ್ನ ಹೊಣೆಗಾರಿಕೆಯನ್ನು ನಿಭಾಯಿಸದಿದ್ದರೆ ಆಡಳಿತವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುವಂತೆ ಕೇಂದ್ರಕ್ಕೆ ಸೂಚಿಸಬೇಕಾಗಬಹುದು’ ಎಂದೂ ಹೇಳಿತು.

ಆಕ್ಸಿಜನ್‌ ಕೊರತೆಯಿಂದ ದೆಹಲಿಯ ಎಲ್ಲ ಆಸ್ಪತ್ರೆಗಳು, ನರ್ಸಿಂಗ್ ಹೋಂಗಳಲ್ಲಿ ಆದ ಸಾವುಗಳ ಕುರಿತು ವರದಿ ಸಲ್ಲಿಸಲು ಸರ್ಕಾರಕ್ಕೆ ಪೀಠ ನಿರ್ದೇಶಿಸಿತು. ದೆಹಲಿ ಸರ್ಕಾರ ಪ್ರತಿನಿಧಿಸಿದ್ದ ಹಿರಿಯ ವಕೀಲ ರಾಹುಲ್‌ ಮೆಹ್ರಾ, ‘ಆಕ್ಸಿಜನ್‌ ಸಿಲಿಂಡರ್‌ಗಳ ವಿತರಕರು ಭಾಗಿಯಾಗಿರುವ ಕಾರಣ ಹೊಸ ವ್ಯವಸ್ಥೆ ರೂಪಿಸಲಾಗುವುದು’ ಎಂದು ತಿಳಿಸಿದರು.

ಆಗ, ‘ನಮಗೆ ಹೊಸ ವ್ಯವಸ್ಥೆ ಅಗತ್ಯವಿಲ್ಲ. ಆದರೆ, ನಿಮ್ಮ ಆಡಳಿತ ವ್ಯವಸ್ಥೆ ವಿಫಲವಾಗಿದೆ’ ಎಂದು ಪೀಠ ಕಟುವಾಗಿ ಹೇಳಿತು. ‘ಮೆಹ್ರಾ ಅವರೇ ಮೊದಲು ನಿಮ್ಮ ವ್ಯವಸ್ಥೆ ಸರಿಪಡಿಸಿ. ಆಗದಿದ್ದರೆ ದಯವಿಟ್ಟು ತಿಳಿಸಿ. ತಮ್ಮ ಸುಪರ್ದಿಗೆಆಡಳಿತ ತೆಗೆದುಕೊಳ್ಳುವಂತೆ ನಾವು ಕೇಂದ್ರ ಸರ್ಕಾರದ ಅಧಿಕಾರಿಗಳಿಗೆ ತಿಳಿಸುತ್ತೇವೆ’ ಎಂದು ಸ್ಪಷ್ಟಪಡಿಸಿತು.

‘ಆಕ್ಸಿಜನ್‌ ಕೊರತೆಯ ಗೊಂದಲ ಬಗೆಹರಿಸಲು ನಿಮಗೆ ಆಗಿಲ್ಲ. ನೀವು ಪರಿಸ್ಥಿತಿ ನಿಭಾಯಿಸುತ್ತಿರುವ ಪರಿ ನಮ್ಮ ಆತ್ಮವಿಶ್ವಾಸವನ್ನೇ ಕದಲಿಸಿದೆ. ನೀವು ಆಡಳಿತದಲ್ಲಿದ್ದೀರಿ. ಹೇಗೆ ಅಧಿಕಾರ ನಡೆಸಬೇಕು ಎಂಬುದು ನಿಮಗೆ ಗೊತ್ತಿರಬೇಕು. ಇಂದಿನ ಸಂದರ್ಭದಲ್ಲಿ ಯಾರೊಬ್ಬರೂ ಜನರ ಮೇಲೆ ಸವಾರಿ ಮಾಡುವಂತಿರಬಾರದು’ ಎಂದು ಸೂಚಿಸಿತು.

ಸರ್ಕಾರ ಹೊಸ ವ್ಯವಸ್ಥೆ ರೂಪಿಸುತ್ತಿದೆ. ಆಕ್ಸಿಜನ್ ಪೂರೈಕೆ ಪರಿಸ್ಥಿತಿ ಕುರಿತಂತೆ ಆಸ್ಪತ್ರೆಗಳಿಗೆ 72 ಗಂಟೆ ಮೊದಲೇ ಮಾಹಿತಿ ತಿಳಿಯಲಿದೆ ಎಂದು ಈ ಸಂದರ್ಭದಲ್ಲಿ ಮೆಹ್ರಾ ತಿಳಿಸಿದರು.

ಒಂದು ಹಂತದಲ್ಲಿ ರಿಫಿಲ್ಲರ್ ಕಂಪನಿಗಳ ಕಾರ್ಯವೈಖರಿ ವಿರುದ್ಧವು ಹರಿಹಾಯ್ದ ನ್ಯಾಯಪೀಠ, ‘ಈ ಎಲ್ಲ ಘಟಕಗಳನ್ನು ನಿಮ್ಮ ಸುಪರ್ದಿಗೆ ತೆಗೆದುಕೊಳ್ಳಿ. ಇಂದಿನ ಪರಿಸ್ಥಿತಿಯಲ್ಲಿ ಯಾರೊಬ್ಬರೂ ಹದ್ದುಗಳಂತೆ ವರ್ತಿಸುವುದು ನಮಗೆ ಇಷ್ಟವಿಲ್ಲ’ ಎಂದು ತಾಕೀತು ಮಾಡಿತು.

ಸರ್ಕಾರ ಕಟ್ಟುನಿಟ್ಟಿನ ಕ್ರಮಜರುಗಿಸಬೇಕು. ಆಕ್ಸಿಜನ್‌ ಪೂರೈಕೆ ಅಷ್ಟೇ ಅಲ್ಲ. ಟನ್‌ಗಟ್ಟಲೆ ಆಕ್ಸಿಜನ್‌ ಪೂರೈಕೆ ಆದರೂ ಅದರ ಲೆಕ್ಕ ಇಟ್ಟಿಲ್ಲ. ಈ ವ್ಯವಸ್ಥೆಯೇ ಕೃತಕ ಅಭಾವನ್ನು ಸೃಷ್ಟಿಸಿದೆ.ಕಾಳಸಂತೆ ಮಾರಾಟಕ್ಕೂ ಆಸ್ಪದವಾಗಿದೆ. ಲೋಪ ಎಸಗುತ್ತಿರುವ ಆಕ್ಸಿಜನ್ ರೀಫಿಲ್ಲರ್‌ ಘಟಕಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಜರುಗಿಸಬೇಕು ಎಂದು ನಿರ್ದೇಶಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT