ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದೆಲ್ಲೆಡೆ ಹಿಂದಿ ಬಳಸಿ: ಅಧಿಕೃತ ಭಾಷಾ ಸಮಿತಿ ಸಭೆಯಲ್ಲಿ ಅಮಿತ್ ಶಾ ಹೇಳಿಕೆ

ವ್ಯಾಪಕ ವಿರೋಧ
Last Updated 8 ಏಪ್ರಿಲ್ 2022, 19:56 IST
ಅಕ್ಷರ ಗಾತ್ರ

ನವದೆಹಲಿ: ‘ದೇಶದ ಎಲ್ಲಾ ರಾಜ್ಯಗಳ ಜನರು ಪರಸ್ಪರ ಸಂಪರ್ಕಕ್ಕಾಗಿ ಹಿಂದಿ ಭಾಷೆಯನ್ನು ಬಳಸಬೇಕು. ಹಿಂದಿ ಯನ್ನು ಇಂಗ್ಲಿಷ್‌ಗೆ ಪರ್ಯಾಯ ಭಾಷೆಯಾಗಿ ಒಪ್ಪಿಕೊಳ್ಳಬೇಕು’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿರುವುದಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ.

ಅಧಿಕೃತ ಭಾಷಾ ಸಂಸದೀಯ ಸಮಿತಿಯ 37ನೇ ಸಭೆಯಲ್ಲಿ ಗುರುವಾರ ಭಾಗಿಯಾಗಿದ್ದ ಶಾ ಅವರು, ‘ಹಿಂದಿಯನ್ನು ಇಂಗ್ಲಿಷ್‌ಗೆ ಪರ್ಯಾಯ ಭಾಷೆಯಾಗಿ ಬಳಸಬೇಕೇ ಹೊರತು ಸ್ಥಳೀಯ ಭಾಷೆಗಳನ್ನಲ್ಲ. ದೇಶದೆಲ್ಲೆಡೆ ಸಂಪರ್ಕ ಭಾಷೆಯಾಗಿ ದೇಶೀಯ ಭಾಷೆಯಾದ ಹಿಂದಿಯನ್ನು ಬಳಸಬೇಕು. ವಿದೇಶಿ ಭಾಷೆಯಲ್ಲ’ ಎಂದು ಅವರು ಹೇಳಿದ್ದಾರೆ.

‘ಕೇಂದ್ರ ಸಚಿವ ಸಂಪುಟದ ಶೇ 70ರಷ್ಟು ಕಾರ್ಯಸೂಚಿಗಳನ್ನು ಈಗ ಹಿಂದಿಯಲ್ಲೇ ಸಿದ್ಧಪಡಿಸಲಾಗುತ್ತದೆ. ದೇಶದ ಅಧಿಕೃತ ಭಾಷೆಯಾದ ಹಿಂದಿಯನ್ನು ದೇಶವನ್ನು ಒಗ್ಗೂಡಿಸುವ ಸಾಧನವಾಗಿ ಮಾಡುವ ಸಮಯ ಈಗ ಬಂದಿದೆ’ ಎಂದು ಅವರು ಸಭೆಯಲ್ಲಿ ಘೋಷಿಸಿದ್ದಾರೆ.

9ನೇ ತರಗತಿವರೆಗೆ ಬೋಧನೆ:‘ಅಧಿಕೃತ ಭಾಷಾಸಮಿತಿಯು ಈವರೆಗೆ 11 ವರದಿಗಳನ್ನು ನೀಡಿದೆ. ಆ ವರದಿಗಳನ್ನು ಹಂತ ಹಂತವಾಗಿ ಜಾರಿಗೆ ತರುವ ಸಂಬಂಧ ಇದೇ ಜುಲೈನಲ್ಲಿ ಸಭೆ ನಡೆಸಿ’ ಎಂದು ಸಮಿತಿಯ ಅಧ್ಯಕ್ಷರೂ ಆಗಿರುವ ಅಮಿತ್ ಶಾ ಅವರು, ಸಮಿತಿಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.

‘9ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಹಿಂದಿಯಲ್ಲಿನ ಜ್ಞಾನವನ್ನು ನೀಡುವುದಕ್ಕೆ ಒತ್ತು ನೀಡಬೇಕು. ಹಿಂದಿ ಬೋಧನಾ ಪರೀಕ್ಷೆಗಳಿಗೆ ಆದ್ಯತೆ ನೀಡಬೇಕು. ಹಿಂದಿ ಪದಕೋಶವನ್ನು ಪರಿಷ್ಕರಿಸಿ, ಮರುಮುದ್ರಣ ಮಾಡಬೇಕು’ ಎಂದು ಶಾ ಅವರು ಸಮಿತಿಗೆ ಸೂಚಿಸಿದ್ದಾರೆ.

ಈ ಸಮಿತಿಯ ವರದಿಗಳ ಅನುಷ್ಠಾನವನ್ನು ಪರಿಶೀಲಿಸಲು ಸಮಿತಿಯ ಸದಸ್ಯರ ಸಭೆ ಕರೆಯಬೇಕು ಎಂದು ಹೇಳಿರುವ ಶಾ, ‘ಈಶಾನ್ಯ ಭಾರತದ ರಾಜ್ಯಗಳಲ್ಲಿ ಹಿಂದಿ ಬೋಧನೆಯನ್ನು ಉತ್ತೇಜಿಸಲು 22,000 ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಈ ರಾಜ್ಯಗಳ ಸರ್ಕಾರಗಳು 10ನೇ ತರಗತಿವರೆಗೆ ಹಿಂದಿ ಕಲಿಕೆಯನ್ನು ಕಡ್ಡಾಯ ಮಾಡಲು ಒಪ್ಪಿಗೆ ನೀಡಿವೆ. ಈ ರಾಜ್ಯಗಳ ಒಂಬತ್ತು ಬುಡಕಟ್ಟು ಸಮುದಾಯಗಳು ತಮ್ಮ ಭಾಷೆಯಲ್ಲಿನ ಸಾಹಿತ್ಯವನ್ನು ಹಿಂದಿಯ ದೇವನಾಗರಿ ಲಿಪಿಗೆ ಪರಿವರ್ತಿಸಿವೆ’ ಎಂದು ಶಾ ಹೇಳಿದ್ದಾರೆ.

‘ಹಿಂದಿ ಹೇರಿಕೆ ನಿಲ್ಲಿಸಿ’

ಅಮಿತ್ ಶಾ ಅವರ ಈ ಹೇಳಿಕೆ ಸುದ್ದಿಯಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ‘ಹಿಂದಿ ಹೇರಿಕೆ ನಿಲ್ಲಿಸಿ’ ಎಂಬ ಅಭಿಯಾನ ಆರಂಭವಾಗಿದೆ. ದ್ರಾವಿಡ ಭಾಷಾ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರ ಪ್ರದೇಶ ಮತ್ತು ತಮಿಳುನಾಡಿನ ನೆಟ್ಟಿಗರು ಈ ಅಭಿಯಾನವನ್ನು ತೀವ್ರಗೊಳಿಸಿದ್ದಾರೆ.

#stopHindiImposition ಎಂಬ ಹ್ಯಾಷ್‌ಟ್ಯಾಗ್‌ನಲ್ಲಿ ಹಿಂದಿ ಹೇರಿಕೆಯನ್ನು ವಿರೋಧಿಸಲಾಗುತ್ತಿದೆ. ಶುಕ್ರವಾರ ಮಧ್ಯಾಹ್ನದ ನಂತರ ಈ ಹ್ಯಾಷ್‌ಟ್ಯಾಗ್‌ ಟ್ವಿಟರ್‌ನಲ್ಲಿ ಟ್ರೆಂಡ್‌ನಲ್ಲಿತ್ತು. ಈ ಹ್ಯಾಷ್‌ಟ್ಯಾಗ್‌ನ ಜತೆಗೆ ಕನ್ನಡಿಗರು ‘ನನಗೆ ಹಿಂದಿ ಗೊತ್ತಿಲ್ಲ ಹೋಗೋ’, ತಮಿಳರು ‘ಎನಕು ಹಿಂದಿ ತೆರಿಯಾದು ಪೋಡಾ’, ಮಲಯಾಳಿಗಳು ‘ಎನಿಕ್ಕ್ ಹಿಂದಿ ಅರಿಯಿಲ್ಲಾ ಪೋ’ ಮತ್ತು ತೆಲುಗಿನವರು ‘ನಾಕು ಹಿಂದಿ ತೆಲಿಯಾದು ಪೋರಾ’ ಎಂದು ತಮ್ಮ ಭಾಷೆಗಳಲ್ಲಿ ಹ್ಯಾಷ್‌ಟ್ಯಾಗ್ ಹಾಕುತ್ತಿದ್ದಾರೆ.

****

ಅಧಿಕೃತ ಭಾಷೆಯನ್ನೇ ಸರ್ಕಾರ ನಡೆಸುವ ಮಾಧ್ಯಮವಾಗಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ. ಇದು ಹಿಂದಿಯ ಪ್ರಾಮುಖ್ಯವನ್ನು ಹೆಚ್ಚಿಸುತ್ತದೆ

- ಅಮಿತ್ ಶಾ, ಕೇಂದ್ರ ಗೃಹ ಸಚಿವ

ದೇಶದ ಬಹುತ್ವವನ್ನು ಹಾಳು ಮಾಡಲು ಬಿಜೆಪಿ ನಾಯಕರು ಸದಾ ಯತ್ನಿಸುತ್ತಾರೆ. ನೀವು ಪದೇ ಪದೇ ಈ ತಪ್ಪು ಮಾಡುತ್ತಿದ್ದೀರಿ. ಅದರೆ ಇದರಲ್ಲಿ ನೀವು ಯಶಸ್ವಿಯಾಗುವುದಿಲ್ಲ

- ಎಂ.ಕೆ.ಸ್ಟಾಲಿನ್, ತಮಿಳುನಾಡು ಮುಖ್ಯಮಂತ್ರಿ

ಎಲ್ಲಾ ರಾಜ್ಯಗಳ ಮೇಲೆ ಹಿಂದಿಯನ್ನು ಹೇರಲಾಗುತ್ತದೆ ಎಂಬುದೇ ಶಾ ಅವರ ಹೇಳಿಕೆಯ ಅರ್ಥ. ತಮಿಳರು ಇದನ್ನು ಎಂದಿಗೂ ಒಪ್ಪುವುದಿಲ್ಲ

- ಎಸ್‌.ರಾಮದಾಸ್, ಪಿಎಂಕೆ ಸಂಸ್ಥಾಪಕ

ಅಮಿತ್ ಶಾ ಮತ್ತು ಬಿಜೆಪಿ ಹಿಂದಿ ಹೇರಲು ಯತ್ನಿಸಿದರೆ, ಅದನ್ನು ತಡೆಯುತ್ತೇವೆ. ಬಿಜೆಪಿಯ ಒಂದು ರಾಷ್ಟ್ರ, ಒಂದು ಭಾಷೆ, ಒಂದು ಧರ್ಮದ ಕನಸು ನಿಜವಾಗುವುದಿಲ್ಲ

- ಟಿಎಂಸಿ, ಪಶ್ಚಿಮ ಬಂಗಾಳದ ಆಡಳಿತ ಪಕ್ಷ

ಭಾರತವನ್ನು ಮಹಾ ಉತ್ತರ ಪ್ರದೇಶವಾಗಿಸಲು ಬಿಜೆಪಿ ಹೊರಟಿದೆ. ಬ್ರಿಟಿಷರನ್ನು ಸೋಲಿಸಿದ್ದೇವೆ. ಹಿಂದಿ ಹೇರಿಕೆಯನ್ನೂ ಸೋಲಿಸುತ್ತೇವೆ

- ಕೌಶಿಕ ಮೈತಿ, ಬಾಂಗ್ಲಾ ಪೋಖ್ಖೊ ಚಳವಳಿಯ ನಾಯಕ

ಅಮಿತ್‌ ಶಾ ಅವರಿಗೆ ಇಂಗ್ಲಿಷ್‌ ಬರಲ್ವಾ? ಹಿಂದಿ ಹೇರಿಕೆ ವಿರುದ್ಧದ ಅಭಿಯಾನಕ್ಕೆ ನನ್ನ ಬೆಂಬಲವಿದೆ. ಕನ್ನಡ ನಾಡಿನಲ್ಲಿ ಕನ್ನಡವೇ ದೊಡ್ಡದು

- ಎಚ್‌.ಡಿ. ಕುಮಾರಸ್ವಾಮಿ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT