ಸೋಮವಾರ, ಸೆಪ್ಟೆಂಬರ್ 26, 2022
24 °C
ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದಿಂದಲೇ ಆರೋಪ

ಅಯೋಧ್ಯೆಯಲ್ಲಿ ಅಕ್ರಮ ಭೂ ವ್ಯವಹಾರ: ಮೇಯರ್, ಬಿಜೆಪಿ ಶಾಸಕ ಭಾಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಯೋಧ್ಯೆ: ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ಅಕ್ರಮ ಭೂ ವ್ಯವಹಾರ ನಡೆದಿದ್ದು, ಇದರಲ್ಲಿ ಆಡಳಿತಾರೂಢ ಬಿಜೆಪಿಯ ಜನಪ್ರತಿನಿಧಿಗಳೇ ಶಾಮೀಲಾಗಿದ್ದಾರೆ ಎಂಬ ಆರೋಪಕ್ಕೆ ಇದೀಗ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದ ಮೂಲಕವೇ ಪುಷ್ಟಿ ದೊರೆತಿದೆ.

ನಗರದ ಮೇಯರ್, ಸ್ಥಳೀಯ ಬಿಜೆಪಿ ಶಾಸಕ ಮತ್ತು ಪಕ್ಷದ ಮಾಜಿ ಶಾಸಕ ಸೇರಿದಂತೆ 40 ಜನರು ಅಕ್ರಮವಾಗಿ ನಿವೇಶನಗಳನ್ನು ಮಾರಾಟ ಮಾಡಿ, ಅಲ್ಲಿ ಮೂಲ ಸೌಕರ್ಯ ಕಲ್ಪಿಸಿದ್ದಾರೆ ಎಂದು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ ಆರೋಪಿಸಿದೆ.

ಮೇಯರ್ ರಿಷಿಕೇಶ್ ಉಪಾಧ್ಯಾಯ ಮತ್ತು ಶಾಸಕ ವೇದ್ ಪ್ರಕಾಶ್ ಗುಪ್ತಾ ಅವರು ತಾವು ನಿರಪರಾಧಿಗಳು ಎಂದು ಹೇಳಿಕೊಂಡಿದ್ದು, ಪ್ರಾಧಿಕಾರ ಬಿಡುಗಡೆ ಮಾಡಿದ ಅಪರಾಧಿಗಳ ಪಟ್ಟಿಯಲ್ಲಿ ತಪ್ಪಾಗಿದೆ ಎಂದು ಆರೋಪಿಸಿದ್ದಾರೆ.

‘ಪ್ರಾಧಿಕಾರದ ಪ್ರದೇಶದಲ್ಲಿ ಅಕ್ರಮವಾಗಿ ಭೂಮಿ ಖರೀದಿಸಿ, ಮಾರಾಟ ಮಾಡಿ, ಕಟ್ಟಡ ಕಾಮಗಾರಿ ಪಡೆದಿರುವ 40 ಮಂದಿಯ ಪಟ್ಟಿಯನ್ನು ಶನಿವಾರ ರಾತ್ರಿ ಬಿಡುಗಡೆ ಮಾಡಲಾಗಿದೆ. ಎಲ್ಲ 40 ಜನರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಪ್ರಾಧಿಕಾರದ ಉಪಾಧ್ಯಕ್ಷ ವಿಶಾಲ್ ಸಿಂಗ್ ಭಾನುವಾರ ಸುದ್ದಿಸಂಸ್ಥೆಗೆ ತಿಳಿಸಿದರು.

ಮಿಲ್ಕಿಪುರ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಗೋರಖನಾಥ್ ಬಾಬಾ ಹೆಸರೂ ಪಟ್ಟಿಯಲ್ಲಿದೆ.

ಈ ವರ್ಷದ ಆರಂಭದಲ್ಲಿ ನಡೆದ ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಪ್ರತಿಪಕ್ಷಗಳು ಅಯೋಧ್ಯೆಯಲ್ಲಿ ಅಕ್ರಮ ಭೂಮಿ ಖರೀದಿ ಮತ್ತು ಮಾರಾಟದ ವಿಷಯವನ್ನು ಪ್ರಸ್ತಾಪಿಸಿದ್ದವು.

ಪಟ್ಟಿ ಬಹಿರಂಗವಾಗುತ್ತಿದ್ದಂತೆ, ಈ ಹಗರಣದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಮಾಜವಾದಿ ಪಕ್ಷ ಆಗ್ರಹಿಸಿದೆ.

ವಿಶೇಷ ತನಿಖಾ ತಂಡದಿಂದ ಪ್ರಕರಣದ ತನಿಖೆ ನಡೆಸುವಂತೆ ಆಗ್ರಹಿಸಿ ಸ್ಥಳೀಯ ಸಂಸದ ಲಲ್ಲು ಸಿಂಗ್ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು