ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗಾನಿಸ್ತಾನ ಪರಿಸ್ಥಿತಿ ಬಗ್ಗೆ ಭಾರತದ ಕಾದು ನೋಡುವ ತಂತ್ರ

ಸರ್ವ ಪಕ್ಷ ಸಭೆಯಲ್ಲಿ ಅಫ್ಗಾನಿಸ್ತಾನಕ್ಕೆ ಸಂಬಂಧಿಸಿದ ಮಾಹಿತಿ ನೀಡಿದ ಜೈಶಂಕರ್‌
Last Updated 27 ಆಗಸ್ಟ್ 2021, 4:29 IST
ಅಕ್ಷರ ಗಾತ್ರ

ನವದೆಹಲಿ: ಅತ್ಯಂತ ಶೋಚನೀಯ ಸ್ಥಿತಿಯಲ್ಲಿರುವ ಅಫ್ಗಾನಿಸ್ತಾನದಿಂದ ಎಲ್ಲ ಭಾರತೀಯರನ್ನು ತೆರವು ಮಾಡಲು ಸರ್ಕಾರವು ಬದ್ಧವಾಗಿದೆ ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್ ಗುರುವಾರ ಹೇಳಿದ್ದಾರೆ. ಅಫ್ಗಾನಿಸ್ತಾನ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಲು ಕರೆಯಲಾಗಿದ್ದ ಸರ್ವಪಕ್ಷ ಸಭೆಯಲ್ಲಿ ಅವರು ಮಾತನಾಡಿದರು.

ತಾಲಿಬಾನ್‌ ಬಗ್ಗೆ ಯಾವ ಧೋರಣೆ ಅನುಸರಿಸಬೇಕು ಎಂಬ ಬಗ್ಗೆ ಕಾದು ನೋಡುವ ತಂತ್ರ ಅನುಸರಿಸಲಾಗುವುದು. ಪರಿಸ್ಥಿತಿಯನ್ನು ನೋಡಿಕೊಂಡು ನಿರ್ಧಾರ ಕೈಗೊಳ್ಳಲಾಗುವುದು ಎಂದು ಜೈಶಂಕರ್‌ ಹೇಳಿದ್ದಾರೆ. ಪರಿಸ್ಥಿತಿ ಶಾಂತವಾದ ಬಳಿಕ ತಾಲಿಬಾನ್‌ಗೆ ಸಂಬಂಧಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮಾಧ್ಯಮ ಪ್ರತಿನಿಧಿಗಳಿಗೂ ತಿಳಿಸಿದರು. ಸರ್ವಪಕ್ಷ ಸಭೆಯು ಸುಮಾರು ಮೂರೂವರೆ ತಾಸು ನಡೆಯಿತು.

‘ನಮ್ಮ ತಕ್ಷಣದ ಕಾಳಜಿಯು ಎಲ್ಲ ಭಾರತೀಯರನ್ನು ತೆರವು ಮಾಡುವುದೇ ಆಗಿದೆ. ಅಫ್ಗಾನಿಸ್ತಾನ ಜನರ ಜತೆಗಿನ ನಂಟು ನಂತರದ ಆಸಕ್ತಿ’ ಎಂದು ಜೈಶಂಕರ್‌ ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.

ಜೈಶಂಕರ್ ಅವರಲ್ಲದೆ, ರಾಜ್ಯಸಭೆಯ ಸದನ ನಾಯಕ ಪೀಯೂಷ್‌ ಗೋಯಲ್‌ ಮತ್ತು ಸಂಸದೀಯ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ ಅವರೂ ಸರ್ವ ಪಕ್ಷ ಸಭೆಯಲ್ಲಿ ಹಾಜರಿದ್ದರು. ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಹರ್ಷ ಶೃಂಗ್ಲಾ ಸೇರಿ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ರಾಯಭಾರ ಕಚೇರಿಯ 175 ಸಿಬ್ಬಂದಿ, 263 ಮಂದಿ ಭಾರತೀಯ ಪ್ರಜೆಗಳು, 112 ಅಫ್ಗನ್ನರು (ಹಿಂದೂ ಮತ್ತು ಸಿಖ್ಖರು ಸೇರಿ) ಮತ್ತು ಇತರ ದೇಶಗಳ 15 ಜನರನ್ನು ತೆರವು ಮಾಡಲಾಗಿದೆ. ತೆರವು ಮಾಡಲಾದ ಒಟ್ಟು ಜನರ ಸಂಖ್ಯೆ 565 ಎಂದು ಸಭೆಯಲ್ಲಿ ಮಾಹಿತಿ ನೀಡಲಾಗಿದೆ. ಭಾರತೀಯರನ್ನು ತೆರವು ಮಾಡಲು ಇತರ ಸಂಸ್ಥೆಗಳಿಗೆ ನೆರವು ನೀಡಲಾಗಿದೆ ಎಂದೂ ತಿಳಿಸಲಾಗಿದೆ.

‘ಆಪರೇಷನ್ ದೇವಿಶಕ್ತಿ ಅಡಿಯಲ್ಲಿ ಸರ್ಕಾರವು ಆರು ವಿಮಾನಗಳ ಮೂಲಕ ಜನರನ್ನು ಕರೆತಂದಿದೆ. ಕೆಲವರಷ್ಟೇ ಅಲ್ಲಿ ಇನ್ನೂ ಉಳಿದಿದ್ದಾರೆ. ಕೆಲವರಿಗೆ ನಿನ್ನೆಯ ವಿಮಾನದಲ್ಲಿ ಬರಲು ಸಾಧ್ಯವಾಗಿಲ್ಲ. ಉಳಿದವರನ್ನು ಕರೆತರುವ ಪ್ರಯತ್ನ ಮುಂದುವರಿಯಲಿದೆ’ ಎಂದು ಜೈಶಂಕರ್‌ ತಿಳಿಸಿದ್ದಾರೆ.

ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌, ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕ ಅಧಿರ್ ರಂಜನ್‌ ಚೌಧರಿ, ಡಿಎಂಕೆಯ ಟಿ.ಆರ್.ಬಾಲು, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಮುಂತಾದವರು ಸಭೆಯಲ್ಲಿ ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT