ಭಾನುವಾರ, ಆಗಸ್ಟ್ 14, 2022
19 °C

ಹಿಂದೂ, ಬೌದ್ಧ, ಸಿಖ್ಖರ ಮೇಲಿನ ದಾಳಿ ಖಂಡಿಸದ ವಿಶ್ವಸಂಸ್ಥೆ ನಡೆಗೆ ಭಾರತ ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕ್ರೈಸ್ತ, ಯಹೂದಿ ಮತ್ತು ಇಸ್ಲಾಂ ಧರ್ಮದ ವಿರುದ್ಧದ ದಾಳಿಗಳನ್ನು ಮಾತ್ರ ಖಂಡಿಸುವ ವಿಶ್ವಸಂಸ್ಥೆ,  ಹಿಂದೂ, ಬೌದ್ಧ ಮತ್ತು ಸಿಖ್ ಧರ್ಮದ ವಿರುದ್ಧ ದ್ವೇಷ ಮತ್ತು ಹಿಂಸಾಚಾರವನ್ನು ಪರಿಗಣನೆಗೆ ಪಡೆಯುವಲ್ಲಿ ವಿಫಲವಾಗಿದೆ ಎಂದು ಭಾರತ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ, ವಿಶ್ವಸಂಸ್ಥೆಯ 'ಆದ್ಯತೆ'ಗಳನ್ನು ಭಾರತ ಪ್ರಶ್ನೆ ಮಾಡಿದೆ.

ಯಹೂದಿ ವಿರೋಧಿ, ಇಸ್ಲಾಮೋಫೋಬಿಯಾ ಮತ್ತು ಕ್ರೈಸ್ತ ವಿರೋಧಿ ಕೃತ್ಯಗಳನ್ನೂ ಭಾರತ ಬಲವಾಗಿ ಖಂಡಿಸಿದೆ. ಆದರೆ, ವಿಶ್ವಸಂಸ್ಥೆಯ ನಿರ್ಣಯಗಳು ಈ ಮೂರು ಅಬ್ರಹಾಂ  ಧರ್ಮಗಳ ಕುರಿತಾದದ್ದೇ ಆಗಿರುತ್ತದೆ.  ಬೌದ್ಧ, ಹಿಂದೂ ಮತ್ತು ಸಿಖ್ ಧರ್ಮದ ವಿರುದ್ಧದ ದ್ವೇಷ ಮತ್ತು ಹಿಂಸಾಚಾರದ ಏರಿಕೆಯನ್ನು ಪರಿಗಣಿಸುವಲ್ಲಿ ಸಂಸ್ಥೆ (ವಿಶ್ವಸಂಸ್ಥೆಯ ಸಾಮಾನ್ಯ ಸಭೆ) ವಿಫಲವಾಗಿದೆ' ಎಂದು ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆಯ ಶಾಶ್ವತ ನಿಯೋಗದ ಮೊದಲ ಕಾರ್ಯದರ್ಶಿಯಾದ ಆಶಿಶ್‌ ಶರ್ಮಾ ಹೇಳಿದ್ದಾರೆ. 

2009ರಲ್ಲಿ ಭಾರತೀಯ ವಿದೇಶಾಂಗ ಸೇವೆಗೆ (ಐಎಫ್‌ಎಸ್) ಸೇರಿದ ಶರ್ಮಾ, ಬುಧವಾರ ನ್ಯೂಯಾರ್ಕ್‌ನ ಯುಎನ್‌ಜಿಎನಲ್ಲಿ ನಡೆದ “ಶಾಂತಿ ಸಂಸ್ಕೃತಿ” ಕುರಿತ ಸಮಾವೇಶದಲ್ಲಿ ಭಾರತ ಸರ್ಕಾರದ ಪರವಾಗಿ ಮಾತನಾಡಿದರು.

'ಏಕೆ ಈ ಆದ್ಯತೆ? ವಿಶ್ವದಲ್ಲಿ ಹಿಂದೂ ಧರ್ಮವು 1.2 ಶತಕೋಟಿಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದೆ. ಬೌದ್ಧಧರ್ಮವು 535 ದಶಲಕ್ಷ, ಸಿಖ್ ಧರ್ಮವು ಸುಮಾರು 30 ದಶಲಕ್ಷ ಅನುಯಾಯಿಗಳನ್ನು ಹೊಂದಿದೆ. ವಿಶ್ವಸಂಸ್ಥೆಯು ನಿರ್ಣಯಗಳನ್ನು ಕೈಗೊಳ್ಳುವಾಗ ಅಬ್ರಹಾಂ ಧರ್ಮಗಳ ಜೊತೆಗೆ, ಈ ಮೂರು ಧರ್ಮಗಳ ವಿರುದ್ಧದ ದ್ವೇಷ, ಹಿಂಸಾಚಾರವನ್ನೂ ಪರಿಗಣಿಸಬೇಕಾದ ಸಮಯವಿದು. ಶಾಂತಿಯ ಸಂಸ್ಕೃತಿ ಅಬ್ರಹಾಂ ಧರ್ಮಗಳಿಗೆ ಮಾತ್ರ ಸೀಮಿತವಾಗಿಲ್ಲ. ಆದ್ಯತೆಗಳು ಹೀಗೆ ಇರುವವರೆಗೆ ಜಗತ್ತು ಎಂದಿಗೂ ಶಾಂತಿಯ ಸಂಸ್ಕೃತಿಯನ್ನು ಬೆಳೆಸಲು ಸಾಧ್ಯವಿಲ್ಲ' ಎಂದು ಶರ್ಮಾ ಹೇಳಿದರು.

2001ರಲ್ಲಿ ಅಫ್ಘಾನಿಸ್ತಾನದ ಬಮಿಯಾನ್‌ನಲ್ಲಿ ತಾಲಿಬಾನಿಗಳಿಂದ ಧ್ವಂಸಗೊಂಡ  6ನೇ ಶತಮಾನದ ಬುದ್ಧನ ಪ್ರತಿಮೆಯನ್ನು ಭಾರತ ತನ್ನ ಉದಾಹರಣೆಯಾಗಿ ಉಲ್ಲೇಖಿಸಿತು. ಈ ವರ್ಷ ಮಾರ್ಚ್ 26 ರಂದು ಕಾಬೂಲ್‌ನ ಗುರುದ್ವಾರದ ಮೇಲೆ ನಡೆದ ದಾಳಿಯಲ್ಲಿ ಸಿಖ್ಖರನ್ನು ಹತ್ಯೆಗೈದ ಬಗ್ಗೆ ಮತ್ತು ಕೆಲವು ದೇಶಗಳಲ್ಲಿ ಹಿಂದೂ ಮತ್ತು ಬೌದ್ಧ ದೇವಾಲಯಗಳ ಮೇಲೆ ನಡೆಯುತ್ತಿರುವ ದಾಳಿ, 'ಅಲ್ಪಸಂಖ್ಯಾತ ಶುದ್ಧೀಕರಣ'ದಂಥ ವಿಚಾರಗಳನ್ನು ಭಾರತ ವಿಶ್ವಸಂಸ್ಥೆಗೆ ತಿಳಿಸಿತು. 

'ವಿಶ್ವಸಂಸ್ಥೆಯು ಧರ್ಮದ ವಿಷಯದಲ್ಲಿ ಯಾವುದೋ ಒಂದು ಬದಿಯಲ್ಲಿ ನಿಲ್ಲುವಂಥ ಸಂಸ್ಥೆಯಲ್ಲ. ಒಂದು ವೇಳೆ ನಮ್ಮಲ್ಲಿ ಆದ್ಯತೆಗಳಿದ್ದರೆ, ನಾವು ಸ್ಯಾಮ್ಯುಯೆಲ್ ಹಂಟಿಂಗ್ಟನ್ ಅವರ ‘ನಾಗರಿಕತೆಗಳ ಘರ್ಷಣೆ’ ಅನ್ನು ಸಾಬೀತುಪಡಿಸಲು ಹೊರಟಿದ್ದೇವೆ ಎಂದು ಅರ್ಥ. ನಾವು ಇಲ್ಲಿ ಕಟ್ಟಲು ಪ್ರಯತ್ನಿಸುತ್ತಿರುವುದು ‘ನಾಗರಿಕತೆಗಳ ಮೈತ್ರಿ’ಯನ್ನು, ಘರ್ಷಣೆಗಳನ್ನಲ್ಲ' ಎಂದು ಅವರು ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು