ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ಬಿಬಿಸಿ ನಿಷೇಧ ಕೋರಿದ್ದ ಅರ್ಜಿ ವಿಚಾರಣೆ ತಿರಸ್ಕರಿಸಿದ ಸುಪ್ರೀಂಕೋರ್ಟ್

Last Updated 10 ಫೆಬ್ರವರಿ 2023, 15:51 IST
ಅಕ್ಷರ ಗಾತ್ರ

ನವದೆಹಲಿ: 2002ರ ಗುಜರಾತ್‌ ಗಲಭೆ ಕುರಿತು ‘ಇಂಡಿಯಾ: ದಿ ಮೋದಿ ಕ್ವೆಶ್ಚನ್‌’ ಎಂಬ ಸಾಕ್ಷ್ಯಚಿತ್ರ ನಿರ್ಮಿಸಿದ್ದಕ್ಕಾಗಿ ಬ್ರಿಟಿಷ್‌ ಬ್ರಾಡ್‌ಕಾಸ್ಟಿಂಗ್‌ ಕಾರ್ಪೊರೇಷನ್‌ಗೆ (ಬಿಬಿಸಿ) ಭಾರತದಲ್ಲಿ ನಿಷೇಧ ಹೇರಬೇಕು ಎಂದು ಹಿಂದೂ ಸೇನಾದ ಅಧ್ಯಕ್ಷ ವಿಷ್ಣು ಗು‍ಪ್ತಾ ಅವರು ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ವಜಾ ಮಾಡಿದೆ. ಅರ್ಜಿಯು ‘ಸಂಪೂರ್ಣ ತಪ್ಪುಗ್ರಹಿಕೆಯಿಂದ ಕೂಡಿದೆ’ ಹಾಗೂ ‘ಖಂಡಿತವಾಗಿಯೂ ಹುರುಳಿಲ್ಲದ್ದು’ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.

ಸಾಕ್ಷ್ಯಚಿತ್ರದ ವಿರುದ್ಧ ಮುಜಫ್ಫರ್‌ಪುರದ ನಿವಾಸಿ, ರೈತ ಬೀರೇಂದ್ರ ಕುಮಾರ್‌ ಸಿಂಗ್ ಅವರು ಮತ್ತೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ‘ಈ ಸಾಕ್ಷ್ಯಚಿತ್ರವು ಮೋದಿ ವಿರುದ್ಧ ಪ್ರಚಾರ ಮಾತ್ರವಲ್ಲ, ಅವರ ಚಾರಿತ್ರ್ಯಕ್ಕೆ ಕಳಂಕ ತರುವುದಾಗಿದೆ. ಜೊತೆಗೆ ಹಿಂದೂ ವಿರೋಧಿ ಧೋರಣೆಯ ಸಾಕ್ಷ್ಯಚಿತ್ರವನ್ನು ನಿರ್ಮಿಸಿ ಬಿಬಿಸಿಯು ಭಾರತದ ಸೌಹಾರ್ದವನ್ನು ಹದಗೆಡಿಸುವ ಪ್ರಯತ್ನವಾಗಿದೆ’ ಎಂದು ವಾದಿಸಿದ್ದರು. ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಹಾಗೂ ಎಂ.ಎಂ. ಸುಂದರೇಶ್‌ ಅವರಿದ್ದ ಪೀಠವು ಈ ಅರ್ಜಿಗಳ ವಿಚಾರಣೆಯನ್ನು ನಡೆಸಿತು.

‘ಒಂದು ಸಾಕ್ಷ್ಯಚಿತ್ರವು ಭಾರತವನ್ನು ಹೇಗೆ ಬಾಧಿಸುತ್ತದೆ. ಅರ್ಜಿಯು ಸಂಪೂರ್ಣವಾಗಿ ತಪ್ಪು ಗ್ರಹಿಕೆಯಿಂದ ಕೂಡಿದೆ. ಜೊತೆಗೆ, ಇದೊಂದು ಹುರುಳಿಲ್ಲದ ಅರ್ಜಿಯಾಗಿದೆ. ಅರ್ಜಿಯ ಮೂಲಕ ನೀವು ಈ ರೀತಿ ವಾದಿಸುತ್ತಿರುವುದಾದರೂ ಹೇಗೆ? ಎಂದು ಪ್ರಶ್ನಿಸಿದ ಪೀಠ ಈ ಅರ್ಜಿಯನ್ನು ವಜಾ ಮಾಡಿತು.

ಹಿರಿಯ ವಕೀಲೆ ಪಿಂಕಿ ಆನಂದ್‌ ಅವರು ಅರ್ಜಿದಾರರ ಪರ ವಾದಿಸಿದರು. ‘ಭಾರತವು ಜಗತ್ತಿನಲ್ಲಿ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಭಾರತೀಯನೊಬ್ಬ ಬ್ರಿಟನ್‌ನ ಪ್ರಧಾನಿಯಾಗಿರುವ ಈ ಹೊತ್ತಿನಲ್ಲಿ ಈ ಸಾಕ್ಷ್ಯಚಿತ್ರ ಹೊರಬಂದಿದೆ. ಆದ್ದರಿಂದ ಈ ಸಾಕ್ಷ್ಯಚಿತ್ರವನ್ನು ಈ ಸಂದರ್ಭದಲ್ಲೇ ಬಿಡುಗಡೆ ಮಾಡಿರುವುದರ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳಬೇಕು’ ಎಂದು ವಾದಿಸಿದರು.

‘ಈ ಎಲ್ಲದರ ಮೇಲೆ ಸಾಕ್ಷ್ಯಚಿತ್ರವು ಪ್ರಭಾವ ಬೀರುತ್ತದೆ ಎಂದು ನಿಮಗೆ ಅನ್ನಿಸುತ್ತದೆಯೇ? ಏನಿದು? ನಾವು ಈ ಸಾಕ್ಷ್ಯಚಿತ್ರಕ್ಕೆ ಸಂಪೂರ್ಣವಾಗಿ ಕತ್ತರಿ ಪ್ರಯೋಗ ಮಾಡಬೇಕು ಎಂದು ನೀವು ಬಯಸುತ್ತೀರಾ’ ಎಂದು ನ್ಯಾಯಾಲಯವು ಕೇಳಿತು.

ಬಿಬಿಸಿ ನಿರ್ಮಿಸಿರುವ ಸಾಕ್ಷ್ಯಚಿತ್ರದ ಮೇಲೆ ನಿರ್ಬಂಧ ಹೇರಿದ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಪತ್ರಕರ್ತ ಎನ್‌.ರಾಮ್‌, ವಕೀಲ ಪ್ರಶಾಂತ್‌ ಭೂಷಣ್‌ ಹಾಗೂ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯೊಂದಿಗೆ ತಮ್ಮ ಅರ್ಜಿಯನ್ನೂ ಸೇರಿಸಿಕೊಂಡು ವಿಚಾರಣೆ ನಡೆಸುವಂತೆ ಪಿಂಕಿ ಆನಂದ್‌ ಅವರು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದರು.

‘ನ್ಯಾಯಾಲಯದ ಸಮಯ ಹಾಳು ಮಾಡಬೇಡಿ’
‘ನಿರ್ಭಯಾ, ಕಾಶ್ಮೀರ ಪ್ರಕರಣ ಹಾಗೂ ಮುಂಬೈ ಗಲಭೆಗಳ ಕುರಿತೂ ಇದೇ ರೀತಿಯ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಲಾಗಿದೆ. ಭಾರತ ಹಾಗೂ ಭಾರತ ಸರ್ಕಾರದ ವಿರುದ್ಧ ಬಿಬಿಸಿಯು ಹಿಂದಿನಿಂದಲೂ ಪೂರ್ವಗ್ರಹಪೀಡಿತವಾಗಿದೆ. ಭಾರತ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಗತ್ತಿನಲ್ಲಿ ದೊರೆಯುತ್ತಿರುವ ಮಹತ್ವದ ವಿರುದ್ಧ ನಡೆಸುತ್ತಿರುವ ದೊಡ್ಡ ಮಟ್ಟದ ಸಂಚಿನ ಭಾಗವಾಗಿ ಈ ಸಾಕ್ಷ್ಯಚಿತ್ರವನ್ನು ನಿರ್ಮಿಸಲಾಗಿದೆ’ ಎಂದು ಪಿಂಕಿ ಆನಂದ್‌ ವಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯವು, ‘ನ್ಯಾಯಾಲಯದ ಸಮಯವನ್ನು ಇನ್ನಷ್ಟು ಹಾಳು ಮಾಡುವುದು ಬೇಡ’ ಎಂದಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT