ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಪಿಡುಗಿನಲ್ಲೂ ಸ್ಟಾರ್ಟ್‌ಅಪ್‌ಗಳಿಂದ ಸಂಪತ್ತು ಸೃಷ್ಟಿ: ಪ್ರಧಾನಿ ಮೋದಿ

‘ಮನ್‌ ಕಿ ಬಾತ್‌’ನಲ್ಲಿ ಪ್ರಧಾನಿ ಮೋದಿ ಹೇಳಿಕೆ
Last Updated 29 ಮೇ 2022, 11:12 IST
ಅಕ್ಷರ ಗಾತ್ರ

ನವದೆಹಲಿ: ‘ಕೋವಿಡ್‌ ಪಿಡುಗಿನ ಸಂದರ್ಭದಲ್ಲಿ ಕೂಡ ದೇಶದ ಸ್ಟಾರ್ಟಅಪ್‌ಗಳು ಸಂಪತ್ತು ಸೃಷ್ಟಿಸುವ ಜೊತೆಗೆ ತಮ್ಮ ಮೌಲ್ಯವನ್ನು ಸಹ ಹೆಚ್ಚಿಸಿಕೊಂಡಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದರು.

ಆಕಾಶವಾಣಿಯಲ್ಲಿ ಪ್ರಸಾರವಾದ ತಿಂಗಳ ‘ಮನ್‌ ಕಿ ಬಾತ್‌’ನಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ‘ದೇಶದ ಸಣ್ಣ ಪಟ್ಟಣಗಳು ಹಾಗೂ ನಗರಗಳಲ್ಲಿಯೂ ಸಹ ಉದ್ಯಮಶೀಲರು ಹೊರಹೊಮ್ಮುತ್ತಿದ್ದಾರೆ’ ಎಂದರು.

‘ಈ ತಿಂಗಳ 5ನೇ ತಾರೀಖಿನಂದು ಯೂನಿಕಾರ್ನ್‌ಗಳ ಸಂಖ್ಯೆ (₹ 7,500 ಕೋಟಿಗಿಂತ ಹೆಚ್ಚಿನ ಬಂಡವಾಳ ಮೌಲ್ಯ ಹೊಂದಿರುವ ನವೋದ್ಯಮ) 100ರ ಗಡಿ ದಾಟಿತು. ಈ ನವೋದ್ಯಮಗಳ ಒಟ್ಟು ಮೌಲ್ಯ ₹ 25 ಲಕ್ಷ ಕೋಟಿಗೂ ಅಧಿಕವಾಗಿದ್ದು, ಇದು ಪ್ರತಿಯೊಬ್ಬ ಭಾರತೀಯ ಹೆಮ್ಮೆಪಡುವ ವಿಷಯ’ ಎಂದು ಮೋದಿ ಹೇಳಿದರು.

‘ದೇಶದಲ್ಲಿರುವ ಒಟ್ಟು ಸ್ಟಾರ್ಟ್‌ಅಪ್‌ಗಳ ಪೈಕಿ 44 ನವೋದ್ಯಮಗಳು ಕಳೆದ ವರ್ಷ ಕಾರ್ಯಾರಂಭ ಮಾಡಿವೆ. ಕಳೆದ 3–4 ತಿಂಗಳ ಅವಧಿಯಲ್ಲಿಯೇ 14 ನವೋದ್ಯಮಗಳು ಅಸ್ತಿತ್ವಕ್ಕೆ ಬಂದಿವೆ ಎಂಬುದು ಅಚ್ಚರಿ ತರಿಸುತ್ತದೆ’ ಎಂದರು.

‘ಇ–ಕಾಮರ್ಸ್‌, ಫಿನ್‌ಟೆಕ್, ಎಡುಟೆಕ್‌ ಹಾಗೂ ಬಯೋಟೆಕ್‌ ಕ್ಷೇತ್ರಗಳು ಸೇರಿದಂತೆ ಈ ನವೋದ್ಯಮಗಳ ಕಾರ್ಯಾಚರಣೆಯನ್ನು ವಿವಿಧ ಕ್ಷೇತ್ರಗಳಲ್ಲಿ ಕಾಣಬಹುದು. ಬರುವ ದಿನಗಳಲ್ಲಿ ನವೋದ್ಯಮಗಳ ಸಂಖ್ಯೆಯಲ್ಲಿ ಕ್ಷಿಪ್ರ ಏರಿಕೆ ಕಂಡುಬರಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ’ ಎಂದು ಹೇಳಿದರು.

ದೇಶದಲ್ಲಿರುವ ಭಾಷಾ ವೈವಿಧ್ಯ, ಆಹಾರ ಪದ್ಧತಿಗಳಲ್ಲಿ ವಿವಿಧತೆ, ಉಡುಗೆ–ತೊಡುಗೆ, ಸಂಸ್ಕೃತಿಯಲ್ಲಿನ ವೈವಿಧ್ಯವನ್ನು ಸಹ ಮೋದಿಯವರು ಪ್ರಸ್ತಾಪಿಸಿದರು. ಈ ವೈವಿಧ್ಯವೇ ನಮ್ಮನ್ನು ಒಂದುಗೂಡಿಸುತ್ತದೆ ಎಂದೂ ಹೇಳಿದರು.

‘ಮಾನವಕುಲಕ್ಕಾಗಿ ಯೋಗ’: ಈ ಬಾರಿಯ ಧ್ಯೇಯವಾಕ್ಯ

ಬರುವ ಜೂನ್‌ 21ರಂದು 8ನೇ ಅಂತರರಾಷ್ಟ್ರೀಯ ಯೋಗ ದಿನ ಆಚರಿಸಲಾಗುತ್ತದೆ. ಯೋಗ ದಿನಾಚರಣೆಯ ಈ ವರ್ಷದ ಧ್ಯೇಯ ವಾಕ್ಯ ‘ಮನುಕುಲಕ್ಕಾಗಿ ಯೋಗ’ ಎಂಬುದಾಗಿದೆ ಎಂದು ಮೋದಿ ಹೇಳಿದರು.

‘ಯೋಗ ದಿನಾಚರಣೆಯಲ್ಲಿ ಎಲ್ಲರೂ ಹೆಚ್ಚು ಉತ್ಸಾಹದಿಂದ ಪಾಲ್ಗೊಳ್ಳಬೇಕು. ಜೊತೆಗೆ ಕೋವಿಡ್‌ ಕುರಿತು ಎಚ್ಚರಿಕೆ ವಹಿಸುವುದು ಅಗತ್ಯ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT