ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15 ದಿನದಲ್ಲಿ ಕೋವಿಡ್ ಗರಿಷ್ಠ ಮಟ್ಟ ಸಂಭವ: ಐಐಟಿ ಮದ್ರಾಸ್‌ ವಿಶ್ಲೇಷಣೆ

ಐಐಟಿ ಮದ್ರಾಸ್‌ ವಿಶ್ಲೇಷಣೆ: ಸೋಂಕು ಹರಡುವಿಕೆ ವೇಗ ಬಿಂಬಿಸುವ ‘ಆರ್‌‘ ಅಂಶ ಇನ್ನಷ್ಟು ಕುಸಿತ
Last Updated 23 ಜನವರಿ 2022, 11:14 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ಸೋಂಕು ಹರಡುವ ವೇಗದ ಪ್ರಮಾಣವನ್ನು ಬಿಂಬಿಸುವ ‘ಆರ್‌‘ ಅಂಶವು ದೇಶದಲ್ಲಿ ಜನವರಿ 14–21ರ ವಾರದಲ್ಲಿ ಶೇ 1.57ಕ್ಕೆ ಕುಸಿದಿದೆ. ಅಲ್ಲದೆ, ಕೋವಿಡ್‌ ಸೋಂಕು ಹರಡುವಿಕೆ ಮುಂದಿನ ಪಾಕ್ಷಿಕದಲ್ಲಿ ಗರಿಷ್ಠ ಮಟ್ಟವನ್ನು ತಲುಪುವ ಸಂಭವವಿದೆ ಎಂದು ಐಐಟಿ ಮದ್ರಾಸ್‌ನ ಪ್ರಾಥಮಿಕ ವಿಶ್ಲೇಷಣೆ ತಿಳಿಸಿದೆ.

ಒಬ್ಬ ಸೋಂಕಿತ ವ್ಯಕ್ತಿಯು ಎಷ್ಟು ಜನರಿಗೆ ಸೋಂಕು ಹರಡಿಸಬಹುದು ಎಂಬುದನ್ನು ‘ಆರ್’ ಅಂಶವು ಬಿಂಬಿಸಲಿದೆ. ಈ ಪ್ರಮಾಣವು ಶೇ 1ಕ್ಕೂ ಕಡಿಮೆಯಾದಾಗ ಸೋಂಕು ಪರಿಸ್ಥಿತಿ ಅಂತ್ಯಗೊಂಡಿದೆ ಎಂದು ವ್ಯಾಖ್ಯಾನಿಸಲಾಗುತ್ತದೆ.

ಐಐಟಿ ಮದ್ರಾಸ್‌ನ ವಿಶ್ಲೇಷಣೆ ಅನುಸಾರ, ‘ಆರ್‌’ ಅಂಶವು ಜನವರಿ 14–21ರ ಅವಧಿಯಲ್ಲಿ 1.57ರಷ್ಟಿತ್ತು. ಇದು, ಜನವರಿ 7–13ರ ಮಧ್ಯೆ 2.2, ಜನವರಿ 1–6ರ ಅವಧಿಯಲ್ಲಿ 4 ಮತ್ತು ಡಿ. 25–31ರ ನಡುವೆ 2.9 ಇತ್ತು.

ಪ್ರೊ.ನೀಲೇಶ್ ಎಸ್‌.ಉಪಾಧ್ಯೆ ಮತ್ತು ಪ್ರೊ.ಎಸ್‌.ಸುಂದರ್ ನೇತೃತ್ವದಲ್ಲಿಗಣಕೀಕೃತ ಮಾದರಿಯಲ್ಲಿ ಐಐಟಿ ಮದ್ರಾಸ್‌ನ ಗಣಿತ ಉನ್ನತ ಅಧ್ಯಯನ ಕೇಂದ್ರ ಈ ವಿಶ್ಲೇಷಣೆ ನಡೆಸಿದೆ. ಅಂಕಿ–ಅಂಶಗಳ ಪ್ರಕಾರ, ಆರ್ ಅಂಶವು ಮುಂಬೈನಲ್ಲಿ 0.57ರಷ್ಟಿದ್ದರೆ, ದೆಹಲಿಯಲ್ಲಿ 0.98, ಚೆನ್ನೈನಲ್ಲಿ 1.2 ಮತ್ತು ಕೋಲ್ಕೊತ್ತಾದಲ್ಲಿ 0.56ರಷ್ಟಿದೆ.

ವಿಶ್ಲೇಷಣೆ ಕುರಿತಂತೆ ಮಾಹಿತಿಯನ್ನು ಒದಗಿಸಿದ ಗಣಿತ ವಿಭಾಗದ ಸಹಾಯಕ ಪ್ರೊಫೆಸರ್ ಡಾ.ಜಯಂತ್ ಝಾ ಅವರು, ಮುಂಬೈ ಮತ್ತು ಕೋಲ್ಕೊತ್ತಾದಲ್ಲಿನ ಆರ್‌ ಅಂಶದ ಪ್ರಕಾರ, ಅಲ್ಲಿ ಈಗಾಗಲೇ ಸೋಂಕಿನ ಗರಿಷ್ಠ ಮಟ್ಟ ತಲುಪಿದ್ಗು, ಇಳಿಮುಖವಾಗುತ್ತಿದೆ. ದೆಹಲಿ ಮತ್ತು ಚೆನ್ನೈನಲ್ಲಿ ಸೋಂಕಿನ ಪ್ರಮಾಣ 1ರ ಸಮೀಪದಲ್ಲಿದೆ.

ಐಸಿಎಂಆರ್‌ ನೂತನ ಮಾರ್ಗಸೂಚಿಯಲ್ಲಿ ಸಂಪರ್ಕ ಗುರುತಿಸುವ ಮಾನದಂಡವನ್ನು ಪರಿಷ್ಕರಿಸಿದೆ. ಅದರಂತೆ ಗಂಭೀರ ಪರಿಣಾಮ ಇಲ್ಲದಿದ್ದಲ್ಲಿ ಪರೀಕ್ಷೆ ಅನಗತ್ಯ. ಇದು, ಕೂಡಾ ಪರಿಸ್ಥಿತಿ ಬದಲಾಗಲು ಕಾರಣವಿರಬಹುದು ಎಂದರು.

ವಿಶ್ಲೇಷಣೆ ಅನುಸಾರ ಫೆಬ್ರುವರಿ 6ರ ವೇಳೆಗೆ ಅಂದರೆ ಮುಂದಿನ 14 ದಿನದಲ್ಲಿ ಸೋಂಕು ಗರಿಷ್ಠ ಮಟ್ಟ ತಲುಪಬಹುದು. ಈ ಮೊದಲು ಫೆಬ್ರುವರಿ1–15ರ ನಡುವೆ ಗರಿಷ್ಠ ಮಟ್ಟ ತಲುಪಬಹುದು ಎಂದು ಅಂದಾಜಿಸಲಾಗಿತ್ತು.

ಕೋವಿಡ್‌ ಮೂರನೇ ಅಲೆಯಲ್ಲಿ ಓಮೈಕ್ರಾನ್‌ ತಳಿಯು ಪ್ರಾಬಲ್ಯ ಸಾಧಿಸಿದೆ. ಭಾರತದಲ್ಲಿ ಭಾನುವಾರ ಒಟ್ಟು 3,33,533 ಹೊಸ ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು ಸಂಖ್ಯೆ 3,92,37,264ಕ್ಕೆ ಏರಿದೆ.

‘ಸಮುದಾಯದಲ್ಲಿ ಹರಡುವ ಹಂತಕ್ಕೆ ‘ಓಮೈಕ್ರಾನ್‌’

ರೂಪಾಂತರ ಸೋಂಕು ‘ಓಮೈಕ್ರಾನ್‌‘ ಈಗದೇಶದಲ್ಲಿ ಸಮುದಾಯದಲ್ಲಿ ಹರಡುವ ಹಂತದಲ್ಲಿದೆ. ಬಹುತೇಕ ಮೆಟ್ರೊಗಳಲ್ಲಿ ಇದು ಪ್ರಾಬಲ್ಯ ಹೊಂದಿದ್ದು, ಇಲ್ಲಿ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿವೆ.

ಐಎನ್‌ಎಸ್‌ಎಸಿಒಜಿ ಭಾನುವಾರ ಬಿಡುಗಡೆ ಮಾಡಿದ ವಾರ್ತಾಪತ್ರ ಇದನ್ನು ದೃಢಪಡಿಸಿದೆ. ಓಮೈಕ್ರಾನ್‌ನ ಉಪ ರೂಪಾಂತರ ತಳಿ ‘ಬಿಎ.2’ ಪ್ರಕರಣಗಳು ಗಮನಾರ್ಹ ಸಂಖ್ಯೆಯಲ್ಲಿ ದೇಶದಲ್ಲಿ ಪತ್ತೆಯಾಗಿವೆ ಎಂದೂ ತಿಳಿಸಿದೆ.

ಈಗ ದೃಢಪಟ್ಟಿರುವ ಓಮೈಕ್ರಾನ್‌ನ ಬಹುತೇಕ ಪ್ರಕರಣಗಳು ರೋಗಲಕ್ಷಣ ರಹಿತವಾಗಿವೆ ಅಥವಾ ಅಲ್ಪ ಪರಿಣಾಮದ್ದಾಗಿವೆ. ಮೂರನೇ ಅಲೆಯಲ್ಲಿ ಆಸ್ಪತ್ರೆಗೆ ದಾಖಲು ಅಥವಾ ಐಸಿಯುಗೆ ಸೇರುವವರ ಸಂಖ್ಯೆ ಹೆಚ್ಚಿದ್ದರೂ ಅಪಾಯದ ಸ್ಥಿತಿಗತಿಯಲ್ಲಿ ಗಮನಾರ್ಹ ಬದಲಾವಣೆಯೇನೂ ಆಗಿಲ್ಲ ಎಂದು ಹೇಳಿದೆ.

ಹೊಸದಾಗಿ ಪತ್ತೆಯಾಗಿರುವ ಬಿ.1.640.2 ಹೆಸರಿನ ತಳಿಯನ್ನು ಗಮನಿಸಲಾಗುತ್ತಿದೆ. ಇದು, ತೀವ್ರವಾಗಿ ಹರಡಲಿದೆ ಎಂಬುದಕ್ಕೆ ಯಾವುದೇ ನಿದರ್ಶನವಿಲ್ಲ. ಇದು, ಸದ್ಯ ಗಂಭೀರವಾಗಿ ಪರಿಗಣಿಸಬೇಕಾದ ತಳಿಯಲ್ಲ. ಭಾರತದಲ್ಲಿ ಇಂಥ ತಳಿಯ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಐಎನ್‌ಎಸ್‌ಎಸಿಒಜಿ ಹೇಳಿದೆ.

ಐಎನ್‌ಎಸ್‌ಎಸಿಒಜಿ ಇದುವರೆಗೂ ಒಟ್ಟು 1,50,710 ಮಾದರಿಗಳನ್ನು ಸೀಕ್ವೆನ್ಸಿಂಗ್ ಮಾದರಿ ಪರೀಕ್ಷೆಗೆ ಪರಿಗಣಿಸಿದ್ದು, 1,27,697 ಮಾದರಿಗಳ ಪರೀಕ್ಷೆಯನ್ನು ಪೂರ್ಣಗೊಳಿಸಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT