ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಆರ್ ವ್ಯಾಲ್ಯು ಕುಸಿತ: 14 ದಿನಗಳಲ್ಲಿ 3ನೇ ಅಲೆ ಉತ್ತುಂಗ ಸಾಧ್ಯತೆ– ವರದಿ

Last Updated 24 ಜನವರಿ 2022, 6:54 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ವೈರಸ್ ಹರಡುವಿಕೆಯ ಪ್ರಮಾಣವನ್ನು ಸೂಚಿಸುವ ಭಾರತದ ಆರ್-ಮೌಲ್ಯವು ಕಳೆದ ವಾರ 1.57ಕ್ಕೆ ಇಳಿಕೆಯಾಗಿದೆ. ಹೀಗಾಗಿ, ದೇಶದಲ್ಲಿ ಕೋವಿಡ್ ಮೂರನೇ ಅಲೆಯು ಮುಂದಿನ 14 ದಿನಗಳಲ್ಲಿ ಉತ್ತುಂಗಕ್ಕೆ ತಲುಪುವ ನಿರೀಕ್ಷೆ ಇದೆ ಎಂದು ಐಐಟಿ ಮದ್ರಾಸ್‌ನ ಪ್ರಾಥಮಿಕ ವಿಶ್ಲೇಷಣೆಯ ವರದಿ ತಿಳಿಸಿದೆ.

ಸೋಂಕಿತ ವ್ಯಕ್ತಿಯಿಂದ ರೋಗವು ಎಷ್ಟು ಜನರಿಗೆ ಹರಡುತ್ತಿದೆ ಎಂಬುದನ್ನು ಆರ್-ವ್ಯಾಲ್ಯು ಸೂಚಿಸುತ್ತದೆ. ಇದು 1 ಕ್ಕಿಂತ ಕಡಿಮೆಯಾದರೆ ಸಾಂಕ್ರಾಮಿಕ ರೋಗವು ಕೊನೆಗೊಳ್ಳುತ್ತದೆ ಎಂದು ಪರಿಗಣಿಸಲಾಗುತ್ತದೆ.

ಐಐಟಿ ಮದ್ರಾಸ್ ಹಂಚಿಕೊಂಡಿರುವ ವಿಶ್ಲೇಷಣೆಯ ಪ್ರಕಾರ, ಜನವರಿ 14 ಮತ್ತು ಜನವರಿ 21 ರ ನಡುವೆ ಆರ್-ಮೌಲ್ಯವು 1.57 ರಷ್ಟು ದಾಖಲಾಗಿದೆ. ಜನವರಿ 7-13ರ ನಡುವಿನ ವಾರದಲ್ಲಿ ಈ ಸಂಖ್ಯೆ 2.2 ರಷ್ಟಿದ್ದರೆ ಅದು ಜನವರಿ 1-6 ರ ಅವಧಿಯಲ್ಲಿ 4 ರಷ್ಟಿತ್ತು ಮತ್ತು ಡಿಸೆಂಬರ್ 25 ರಿಂದ 31ರಲ್ಲಿ 2.9ರಷ್ಟಿತ್ತು.

ಪ್ರಾಥಮಿಕ ವಿಶ್ಲೇಷಣೆಯು ಐಐಟಿ ಮದ್ರಾಸ್‌ನ ಗಣಿತಶಾಸ್ತ್ರ ವಿಭಾಗ ಮತ್ತು ಕಂಪ್ಯೂಟೇಶನಲ್ ಗಣಿತ ಮತ್ತು ದತ್ತಾಂಶ ವಿಜ್ಞಾನ ಕೇಂದ್ರದ ಪ್ರೊ. ನೀಲೇಶ್ ಎಸ್ ಉಪಾಧ್ಯೆ ಮತ್ತು ಪ್ರೊ.ಎಸ್ ಸುಂದರ್ ಅವರ ನೇತೃತ್ವದಲ್ಲಿ ಕಂಪ್ಯೂಟೇಶನಲ್ ಮಾಡೆಲಿಂಗ್‌ನಿಂದ ಮಾಡಲ್ಪಟ್ಟಿದೆ.

ಅಂಕಿ ಅಂಶಗಳ ಪ್ರಕಾರ, ಮುಂಬೈನ ಆರ್-ಮೌಲ್ಯವು 0.67, ದೆಹಲಿ 0.98, ಚೆನ್ನೈ 1.2 ಮತ್ತು ಕೋಲ್ಕತ್ತಾದಲ್ಲಿ 0.56 ರಷ್ಟಾಗಿತ್ತು.

ಮತ್ತಷ್ಟು ವಿವರಣೆ ನೀಡಿದ ಐಐಟಿ ಮದ್ರಾಸ್‌ನ ಗಣಿತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ ಜಯಂತ್ ಝಾ, ಮುಂಬೈ ಮತ್ತು ಕೋಲ್ಕತ್ತಾದ ಆರ್-ಮೌಲ್ಯವು ಅಲ್ಲಿ ಮೂರನೇ ಅಲೆಯ ಉತ್ತುಂಗ ಮುಗಿದಿದೆ ಎಂದು ತೋರಿಸುತ್ತದೆ. ದೆಹಲಿ ಮತ್ತು ಚೆನ್ನೈನಲ್ಲಿ ಇದು ಇನ್ನೂ 1 ರ ಸಮೀಪದಲ್ಲಿದೆ ಎಂದು ಹೇಳಿದರು.

ವಿಶ್ಲೇಷಣೆಯ ಪ್ರಕಾರ, ಫೆಬ್ರವರಿ 6ರ ಹೊತ್ತಿಗೆ ಮುಂದಿನ 14 ದಿನಗಳಲ್ಲಿ ಕೊರೊನಾ ವೈರಸ್ ಉತ್ತುಂಗಕ್ಕೆ ತಲುಪುವ ಸಾಧ್ಯತೆ ಇದೆ ಎಂದು ಝಾ ಹೇಳಿದ್ದಾರೆ.

ಫೆಬ್ರವರಿ 1 ಮತ್ತು ಫೆಬ್ರವರಿ 15 ರ ನಡುವೆ ಕೋವಿಡ್ ಮೂರನೇ ಅಲೆಯು ಉತ್ತುಂಗ ತಲುಪುಬಹುದು ಎಂದು ಈ ಹಿಂದೆ ಅಂದಾಜಿಸಲಾಗಿತ್ತು.

ಕೋವಿಡ್ ಮೂರನೇ ಅಲೆಯು ಕೊರೊನಾ ರೂಪಾಂತರ ತಳಿ ಓಮೈಕ್ರಾನ್‌ನಿಂದ ಆಗುತ್ತಿದೆ. ದೇಶದಲ್ಲಿ ಭಾನುವಾರ 3,33,533 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 3,92,37,264 ಕ್ಕೆ ಏರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT