ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರ್ತು ಪರಿಸ್ಥಿತಿ ಈಗ ಅಪ್ರಸ್ತುತ, ಆ ವಿಷಯವನ್ನು ಸಮಾಧಿ ಮಾಡಬೇಕಿದೆ: ರಾವುತ್

ಇಂದಿರಾ ಗಾಂಧಿ ಸ್ಥಾನಕ್ಕೆ ನರೇಂದ್ರ ಮೋದಿ
Last Updated 7 ಮಾರ್ಚ್ 2021, 13:27 IST
ಅಕ್ಷರ ಗಾತ್ರ

ಮುಂಬೈ: ‘1975ರ ತುರ್ತು ಪರಿಸ್ಥಿತಿಯು ಈಗ ಅಪ್ರಸ್ತುತ. ಹಾಗಾಗಿ ಆ ವಿಷಯವನ್ನು ಶಾಶ್ವತವಾಗಿ ಸಮಾಧಿ ಮಾಡಬೇಕಿದೆ’ ಎಂದು ಶಿವಸೇನಾದ ನಾಯಕ ಸಂಜಯ್ ರಾವುತ್ ಹೇಳಿದ್ದಾರೆ.

ಶಿವಸೇನಾದ ಮುಖವಾಣಿ ‘ಸಾಮ್ನಾ’ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರೂ ಆಗಿರುವ ಸಂಜಯ್ ರಾವುತ್, ತಮ್ಮ ವಾರದ ಅಂಕಣ ‘ರೋಕ್‌ಥೋಕ್‌’ದಲ್ಲಿ ಈ ಕುರಿತು ಬರೆದಿದ್ದು, ‘ಕೆಲವರು ದೇಶದ ಈಗಿನ ಪರಿಸ್ಥಿತಿಯನ್ನು ನೋಡಿ ಆಗಿನ ತುರ್ತುಪರಿಸ್ಥಿತಿಯೇ ಪರವಾಗಿರಲಿಲ್ಲ ಎಂದೂ ಹೇಳಬಹುದು’ ಎಂದಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಮ್ಮ ಅಜ್ಜಿ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ತುರ್ತು ಪರಿಸ್ಥಿತಿ ಹೇರಿದ್ದ ಕುರಿತು ಈಚೆಗೆ ವಿಷಾದ ವ್ಯಕ್ತಪಡಿಸಿದ್ದರು. ಈ ಬಗ್ಗೆ ತಮ್ಮ ಅಂಕಣದಲ್ಲಿ ಪ್ರಶ್ನಿಸಿರುವ ಸಂಜಯ್, ‘ಇಂದಿರಾ ಅವರು ಹೇರಿದ್ದ ತುರ್ತು ಪರಿಸ್ಥಿತಿಗೆ ಭಾರತದ ಜನರೇ ಅವರಿಗೆ ಶಿಕ್ಷೆಯನ್ನೂ ಕೊಟ್ಟಿದ್ದಾರೆ. ಅವರಿಗೆ ಪಾಠವನ್ನೂ ಕಲಿಸಿದ್ದಾರೆ. ನಂತರದ ದಿನಗಳಲ್ಲಿ ಇಂದಿರಾ ಅವರನ್ನು ಕ್ಷಮಿಸಿ ಅವರನ್ನು ಮತ್ತೆ ಅಧಿಕಾರಕ್ಕೂ ತಂದಿದ್ದಾರೆ. ಹಾಗಾಗಿ, ತುರ್ತು ಪರಿಸ್ಥಿತಿ ಅನ್ನುವುದು ಈಗ ಅಪ್ರಸ್ತುತ. ಮತ್ತೆ ಮತ್ತೆ ಅದನ್ನು ಏಕೆ ಕೆದಕಬೇಕು’ ಎಂದಿದ್ದಾರೆ.

‘ರಾಹುಲ್ ಗಾಂಧಿ ನೇರವಾಗಿ ನುಡಿಯುವ ಸರಳ ಮನುಷ್ಯ. ಹಿಂದಿನ ಘಟನೆಯ ಬಗ್ಗೆ ಅವರು ಆಕಸ್ಮಿಕವಾಗಿ ಮಾತನಾಡಿದ್ದಾರೆ’ ಎಂದು ಸಂಜಯ್ ಹೇಳಿದ್ದಾರೆ.

‘1975ರ ತುರ್ತು ಪರಿಸ್ಥಿತಿಯನ್ನು ಒಂದು ವಿಚಿತ್ರ ಸನ್ನಿವೇಶದಲ್ಲಿ ಜಾರಿಗೆ ತರಲಾಯಿತು. ಈ ಘಟನೆಯ ಕುರಿತು ಈಗಿನ ಯುವ ರಾಜಕಾರಣಿಗಳು ಮತ್ತು ಮಾಧ್ಯಮದವರಿಗೆ ಯಾವುದೇ ಸಂಬಂಧವಿಲ್ಲ. ಅಷ್ಟೇ ಅಲ್ಲ ಅದರಿಂದ ಅವರು ಪ್ರಭಾವಿತರಾದವರೂ ಅಲ್ಲ. ಹಾಗಾಗಿ, ದೇಶದಲ್ಲಿ ಈಗಿರುವ ಪರಿಸ್ಥಿತಿಯನ್ನು ನೋಡಿ 75ರ ತುರ್ತು ಪರಿಸ್ಥಿತಿಯೇ ಪರವಾಗಿರಲಿಲ್ಲ ಎಂದು ಕೆಲವರು ಹೇಳಬಹುದು’ ಎಂದು ವಿಶ್ಲೇಷಿಸಿದ್ದಾರೆ.

‘ಸರ್ಕಾರದ ನೀತಿಗಳ ವಿರುದ್ಧ ಮಾತನಾಡಿದ್ದಕ್ಕೆ ಇತ್ತೀಚೆಗೆ ಚಿತ್ರನಿರ್ಮಾಪಕ ಅನುರಾಗ್ ಕಶ್ಯಪ್, ನಟಿ ತಾಪ್ಸಿ ಪನ್ನು ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ಪರಿಸರ ಕಾರ್ಯಕರ್ತೆ ದಿಶಾ ಅವರನ್ನು ದೇಶದ್ರೋಹ ಆರೋಪದಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಬಂಧಿಸಿರುವ ಕುರಿತು ಅಮೆರಿಕದ ‘ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಯು ‘ಅಘೋಷಿತ ತುರ್ತುಪರಿಸ್ಥಿತಿ’ ಎಂದಿದೆ’ ಎಂದೂ ಬರೆದಿದ್ದಾರೆ.

‘ಮಾಧ್ಯಮ ಸಂಸ್ಥೆಗಳ ಮೇಲೆ ರಾಜಕೀಯ ನಿಯಂತ್ರಣ, ಚುನಾವಣೆ ಗೆಲ್ಲಲು, ವಿರೋಧ ಪಕ್ಷವನ್ನು ಸೋಲಿಸಲು ರಾಜಕೀಯ ಕುತಂತ್ರಗಳು, ಸಂವಿಧಾನದ ಉಲ್ಲಂಘನೆ ಇವೆಲ್ಲವೂ 1975ರಲ್ಲಿ ಆದಂತೆಯೇ ಆಗುತ್ತಿದೆ. ನರೇಂದ್ರ ಮೋದಿ ಅವರು ಇಂದಿರಾ ಗಾಂಧಿ ಅವರ ಸ್ಥಾನವನ್ನು ಆಕ್ರಮಿಸಿಕೊಂಡಿದ್ದಾರೆ’ ಎಂದೂ ಸಂಜಯ್ ರಾವುತ್ ಹೇಳಿದ್ದಾರೆ.

‘ತಮ್ಮ ಅವಧಿಯಲ್ಲಿ ಹೇರಿದ ತುರ್ತುಪರಿಸ್ಥಿತಿಯ ಕುರಿತು ವಿಷಾದಿಸಿದ್ದ ಇಂದಿರಾ ಅವರು, ಭವಿಷ್ಯದಲ್ಲಿ ಇಂಥ ಪರಿಸ್ಥಿತಿ ತಲೆದೋರುವುದಿಲ್ಲ ಎಂದು ವಿಶ್ವಾಸ ವ್ಯಕ್ತಿಪಡಿಸಿದ್ದರು’ ಎಂದೂ ರಾವುತ್ ನೆನಪಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT