ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಹಾರ್‌ ಜೈಲಿನಲ್ಲಿ ಲೈಂಗಿಕ ಬಯಕೆ ತೀರಿಸಿಕೊಳ್ಳಲೂ ಇದೆ ವ್ಯವಸ್ಥೆ: ಮಾಜಿ ಅಧಿಕಾರಿ

Last Updated 24 ನವೆಂಬರ್ 2022, 6:34 IST
ಅಕ್ಷರ ಗಾತ್ರ

ನವದೆಹಲಿ: ತಿಹಾರ್‌ ಜೈಲಿನಲ್ಲಿ ಅಕ್ರಮ ಚಟುವಟಿಕೆಗಳು ಸಾಮಾನ್ಯವಾಗಿವೆ. ಬಂಧನದಲ್ಲಿರುವ ಪ್ರಭಾವೀ ವ್ಯಕ್ತಿಗಳಿಗೆ ಲೈಂಗಿಕ ಬಯಕೆ ತೀರಿಸಿಕೊಳ್ಳಲೂ ವ್ಯವಸ್ಥೆ ಮಾಡಿಕೊಡುವ ಬಗ್ಗೆ ತಮಗೆ ಗೊತ್ತಿದೆ ಎಂದು ಬಂದೀಖಾನೆಯ ಮಾಜಿ ಕಾನೂನು ಅಧಿಕಾರಿ ಸುನೀಲ್‌ ಗುಪ್ತಾ ಆರೋಪಿಸಿದ್ದಾರೆ.

ನ್ಯಾಯಾಂಗ ಬಂಧನದಲ್ಲಿರುವ ದೆಹಲಿ ಸಚಿವ ಸತ್ಯೇಂದ್ರ ಜೈನ್‌ ಅವರು ಜೈಲಿನೊಳಗೆ ಮಸಾಜ್‌ ಮಾಡಿಸಿಕೊಳ್ಳುತ್ತಿರುವ ಸಿಸಿಟಿವಿ ವಿಡಿಯೊಗೆ ಸಂಬಂಧಿಸಿ ಪಿಟಿಐಗೆ ಗುಪ್ತಾ ಪ್ರತಿಕ್ರಿಯಿಸಿದ್ದಾರೆ.

ಸುನೀಲ್‌ ಗುಪ್ತಾ ಅವರು 1981 ರಿಂದ 2016ರ ವರೆಗೆ ತಿಹಾರ್‌ ಜೈಲಿನಲ್ಲಿ ಕಾನೂನು ಅಧಿಕಾರಿ ಮತ್ತು ವಕ್ತಾರರಾಗಿ ಕೆಲಸ ಮಾಡಿದ್ದಾರೆ. ನಿವೃತ್ತಿಯಾದ ಒಂದು ವರ್ಷದ ಬಳಿಕ 'ಬ್ಲ್ಯಾಕ್‌ ವಾರೆಂಟ್‌' ಎಂಬ ಹೆಸರಿನ ಪುಸ್ತಕವನ್ನು ಬರೆದಿದ್ದಾರೆ. ಅದರಲ್ಲಿ ಪ್ರಭಾವೀ ಕೈದಿಗಳು ಜೈಲಿನೊಳಗೆ ಕಾನೂನು ಮುರಿದು ಹೇಗೆ ಐಷಾರಾಮಿ ಜೀವನ ನಡೆಸುತ್ತಿದ್ದರು ಎಂಬ ಬಗ್ಗೆ ವಿವರಿಸಿದ್ದಾರೆ.

ತಿಹಾರ್‌ ಜೈಲು ರಾಷ್ಟ್ರದ ಅತಿದೊಡ್ಡ ಬಂದೀಖಾನೆ ಎಂದು ಗುರುತಿಸಿಕೊಂಡಿದೆ.

ಬಂಧಿತ ಪ್ರಭಾವೀ ವ್ಯಕ್ತಿಗಳಿಗೆ ಎಲ್ಲ ರೀತಿಯ ಸೌಲಭ್ಯಗಳು ಮತ್ತು ವಿಶೇಷ ಉಪಚಾರಗಳು ಜೈಲಿನ ಆವರಣದಲ್ಲೇ ಸಿಗುತ್ತವೆ. ಇಂತಹ ಕೃತ್ಯಗಳಲ್ಲಿ ಜೈಲಿನ ಅಧಿಕಾರಿಗಳು ಮತ್ತು ಸಹಕೈದಿಗಳು ಭಾಗಿಯಾಗಿರುತ್ತಾರೆ. ತಾನು ವರದಿ ಮಾಡಿದ ಕೆಲವು ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಗುಪ್ತಾ ಹೇಳಿದರು. ಯಾವುದೇ ಪ್ರಕರಣದ ಬಗ್ಗೆ ಹೆಚ್ಚು ಮಾಹಿತಿ ನೀಡದೆ ತಮ್ಮ ಮಾತನ್ನು ಮೊಟಕುಗೊಳಿಸಿದರು.

ಸತ್ಯೇಂದ್ರ ಜೈನ್‌ ಅವರು ಪಾದಗಳಿಗೆ ಮಸಾಜ್‌ ಮಾಡಿಸಿಕೊಳ್ಳುತ್ತಿರುವ ವಿಡಿಯೊ ನವೆಂಬರ್‌ 19ರಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗಿತ್ತು. ಕೆಲವು ದಿನಗಳ ಬಳಿಕ ಹೊರಗಿನಿಂದ ಊಟ ತರಿಸಿಕೊಂಡು ತಿನ್ನುತ್ತಿರುವ ವಿಡಿಯೊ ಕೂಡ ಬಹಿರಂಗವಾಗಿತ್ತು. ಈ ವಿಚಾರವಾಗಿ ತಿಹಾರ್‌ ಜೈಲಿನಲ್ಲಿ ವಿವಿಐಪಿ ಉಪಚಾರ ನೀಡುತ್ತಿರುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಜೈನ್‌ ಅವರಿಗೆ ಮಸಾಜ್‌ ಮಾಡುತ್ತಿದ್ದ ವ್ಯಕ್ತಿ ಪೋಸ್ಕೊ ಅಡಿ ಶಿಕ್ಷೆಗೊಳಪಟ್ಟವರು ಎಂದು ಕೊನೆಗೆ ತಿಳಿದುಬಂದಿದೆ. ಆದರೆ ಇದು ಹಳೆಯ ವಿಡಿಯೊ ಎನ್ನಲಾಗುತ್ತಿದ್ದು, ಇದಕ್ಕೆ ಸಂಬಂಧಿಸಿ ಜೈಲಿನ ಅಧಿಕಾರಿ ಅಜಿತ್‌ ಕುಮಾರ್‌ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಸಿಸಿಟಿವಿ ವಿಡಿಯೊವನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸೋರಿಕೆ ಮಾಡಿದ್ದಾರೆ ಎಂದು ಎಎಪಿ ಆರೋಪಿಸಿದೆ.

ನನ್ನ ಅವಧಿಯಲ್ಲಿ, ಪ್ರಭಾವಿ ವ್ಯಕ್ತಿಗಳು ಲೈಂಗಿಕ ಬಯಕೆಗಳನ್ನು ಪೂರೈಸುವಂತೆ ಬೇಡಿಕೆ ಇಡುತ್ತಿದ್ದುದನ್ನು ನೋಡಿದ್ದೇನೆ. ತಮ್ಮ ಕಾಮನೆಗಳನ್ನು ತೀರಿಸಿಕೊಳ್ಳಲು ಸಣ್ಣ ಪ್ರಾಯದ ಕೈದಿಗಳನ್ನು ಬಳಸಿಕೊಳ್ಳುವುದನ್ನು ಗಮನಿಸಿದ್ದೇನೆ. ತಿಹಾರ್‌ ಜೈಲಿನೊಳಗೆ ಸೊಡಮಿ (ಗುದದ್ವಾರ ಮೂಲಕ ಲೈಂಗಿಕ ಕ್ರಿಯೆ) ಸಾಮಾನ್ಯವಾಗಿದೆ. ಸಹಕೈದಿಗಳೊಂದಿಗೆ ಸಹಮತದಿಂದ ಅಥವಾ ಜೈಲಿನ ಅಧಿಕಾರಿಗಳ ಸಹಾಯದಿಂದ ಲೈಂಗಿಕ ಬಯಕೆಗಳನ್ನು ತೀರಿಸಿಕೊಳ್ಳುತ್ತಾರೆ ಎಂದು ಗುಪ್ತಾ ವಿವರಸಿದರು.

ಗುಪ್ತಾ ಅವರ ಆರೋಪದ ಬಗ್ಗೆ ಪ್ರತಿಕ್ರಿಯಿಸಲು ತಿಹಾರ್‌ ಜೈಲಿನ ಹಾಲಿ ವಕ್ತಾರ ಧೀರಜ್‌ ಮಥುರ್‌ ನಿರಾಕರಿಸಿದ್ದಾರೆ.

ಪ್ರಭಾವೀ ವ್ಯಕ್ತಿಗಳ ಸಖ್ಯವನ್ನು ಯಾರು ಬಯಸದಿರಲ್ಲಾ? ಅವರು ಉದ್ಯೋಗದ, ನ್ಯಾಯದ, ಹಣಕಾಸಿನ ಮತ್ತಿತರ ನೆರವಿನ ಭರವಸೆಗಳನ್ನು ಕೊಟ್ಟು ತಮಗೆ ಬೇಕಾದುದ್ದನ್ನು ಪಡೆಯಲು ಸಹಕೈದಿಗಳನ್ನು ಓಲೈಸಿಕೊಳ್ಳಲಾಗುತ್ತದೆ. ಜೈಲಿನ ಅಧಿಕಾರಿಗಳು ಅವರ ಹಾಡಿಗೆ ತಕ್ಕಂತೆ ನರ್ತಿಸುತ್ತಾರೆ ಎಂದು ಗುಪ್ತಾ ಬೇಸರಿಸಿದರು.

ಸಣ್ಣ ವಯಸ್ಸಿನ ಕೈದಿಗಳನ್ನು ಲೈಂಗಿಕವಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ವಿಚಾರವಾಗಿ ಸಂಜಯ್‌ ಸೂರಿ ಮತ್ತು ದೆಹಲಿ ಆಡಳಿತದ ನಡುವೆ ಕಾನೂನು ಹೋರಾಟಕ್ಕೆ ಸಂಬಂಧಿಸಿ 1987ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು ಗಮನಾರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT