ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷದಲ್ಲಿ ಒಬ್ಬರಿಗೆ ಒಂದು ಹುದ್ದೆ: ಮಮತಾ–ಅಭಿಷೇಕ್ ನಡುವೆ ಭಿನ್ನಮತದ ವದಂತಿ

Last Updated 12 ಫೆಬ್ರುವರಿ 2022, 18:45 IST
ಅಕ್ಷರ ಗಾತ್ರ

ಕೋಲ್ಕತ್ತ:ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಹಾಗೂ ಅವರ ಸೋದರಳಿಯ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ನಡುವೆ ಭಿನ್ನಮತ ಶುರುವಾಗಿದೆ ಎಂಬ ಊಹಾಪೋಹಗಳು ಎದ್ದಿವೆ.

‘ಪಕ್ಷದಲ್ಲಿ ಒಬ್ಬರಿಗೆ ಒಂದು ಹುದ್ದೆ’ ಎಂಬ ವಿಚಾರವು ಬಿಕ್ಕಟ್ಟು ಸೃಷ್ಟಿಸಿದೆ. ಅಭಿಷೇಕ್ ಅವರು ಇದಕ್ಕೆ ಬೆಂಬಲವಾಗಿ ನಿಂತಿದ್ದಾರೆ ಎನ್ನಲಾಗಿದೆ.ಟಿಎಂಸಿ ಪಕ್ಷದ ಅಗ್ರ ನಾಯಕರಲ್ಲಿ ಮಮತಾ ನಂತರ ಅಭಿಷೇಕ್ ಇದ್ದಾರೆ. ಪಕ್ಷದ ಹಿರಿಯರು ಹಾಗೂ ಹೊಸ ತಲೆಮಾರಿನವರ ನಡುವೆ ಅಧಿಕಾರ ಹಂಚಿಕೆ ವಿಚಾರವಾಗಿ ಬಿಕ್ಕಟ್ಟು ಇದೆ ಎನ್ನಲಾಗಿದೆ.

ಕಳೆದ ವಿಧಾನಸಭಾ ಚುನಾವಣೆ ಸಮಯದಿಂದ ಟಿಎಂಸಿ ಜತೆ ಕೆಲಸ ಮಾಡುತ್ತಿರುವಪ್ರಶಾಂತ್ ಕಿಶೋರ್ ಅವರ ಐಪ್ಯಾಕ್ ಸಂಘಟನೆಯೂ ವಿವಾದದ ಕೇಂದ್ರವಾಗಿದೆ. ಪಕ್ಷದ ನಾಯಕಿ ಚಂದ್ರಿಮಾ ಭಟ್ಟಾಚಾರ್ಯ ಅವರ ಟ್ವಿಟರ್ ಖಾತೆಯಲ್ಲಿ ‘ಒಬ್ಬರಿಗೆ ಒಂದು ಹುದ್ದೆ’ ವಿಚಾರ ಪ್ರಸ್ತಾಪವಾಗಿದೆ. ಇದರ ಹಿಂದೆ ಐಪ್ಯಾಕ್ ಇದೆ ಎಂದು ಅವರು ಆರೋಪಿಸಿದ್ದಾರೆ. ಇದನ್ನು ಐಪ್ಯಾಕ್ ನಿರಾಕರಿಸಿದೆ. ಪಕ್ಷದ ಯಾವುದೇ ನಾಯಕರ ಟ್ವಿಟರ್‌ ಖಾತೆಗಳನ್ನು ತಾನು ನಿರ್ವಹಿಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಸ್ಥಳೀಯ ಸಂಸ್ಥೆ ಚುನಾವಣೆಗೆ ಪಕ್ಷದ ಎರಡು ಪಟ್ಟಿಗಳು ಬಿಡುಗಡೆಯಾಗಿ ಗೊಂದಲ ಮೂಡಿಸಿದ್ದವು. ಸಹಿ ಮಾಡಿರದ ಒಂದು ಪಟ್ಟಿಯು ಪಕ್ಷದ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗಿತ್ತು. ಇದನ್ನು ಪ್ರತಿಭಟಿಸಿ ರಾಜ್ಯದಲ್ಲಿ ಪ್ರತಿಭಟನೆಗಳು ನಡೆದಿದ್ದವು. ಪಟ್ಟಿ ಪ್ರಕಟಣೆಯ ಹಿಂದೆಯೂ ಐಪ್ಯಾಕ್ ಇದೆ ಎಂಬ ಆರೋಪ ಮಾಡಲಾಗಿತ್ತು. ಆದರೆ ಸಂಸ್ಥೆಯು ಇದನ್ನು ಅಲ್ಲಗಳೆದಿದೆ.

ಅಸಮಾಧಾನ:ಒಬ್ಬರಿಗೆ ಒಂದು ಹುದ್ದೆ ವಿಚಾರವು ಪಕ್ಷದ ಹಿರಿಯ ಮುಖಂಡರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಈ ರೀತಿ ಬಹಿರಂಗವಾಗಿ ಪ್ರಸ್ತಾಪ ಮಾಡುವುದು ಪಕ್ಷದ ಶಿಸ್ತಿನ ಉಲ್ಲಂಘನೆ ಎಂದು ಹಿರಿಯ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಲ್ಕತ್ತ ಮೇಯರ್ ಫಿರ್ಹಾದ್ ಹಕೀಮ್, ‘ಪಕ್ಷವು ಇಂತಹ ಯಾವುದೇ ಸಿದ್ಧಾಂತವನ್ನು ಅನುಮೋದಿಸುವುದಿಲ್ಲ. ಕೆಲವು ನಾಯಕರು ಇಂತಹ ದಾರಿ ತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ’ ಎಂದು ಹೇಳಿದ್ದರು.

ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ಇದೆ ಎಂಬುದಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಸುಳ್ಳುಗಳನ್ನು ಹೆಣೆಯಲು ಯತ್ನಿಸುತ್ತಿವೆ ಎಂದು ಟಿಎಂಸಿ ಶಾಸಕ ಮದನ್ ಮಿತ್ರಾ ಹೇಳಿದ್ದಾರೆ. ‘ತಮ್ಮ ಹೇಳಿಕೆಯನ್ನು ಮಾಧ್ಯಮಗಳು ತಪ್ಪಾಗಿ ಅರ್ಥ ಮಾಡಿಕೊಂಡಿವೆ. ಮಮತಾ ಅವರೇ ಪಕ್ಷದ ಅಧಿನಾಯಕಿ. ಅಭಿಷೇಕ್ ಅವರು ಮುಂಚೂಣಿಯಲ್ಲಿರುವ ಯುವ ನಾಯಕ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಭವಿಷ್ಯದಲ್ಲಿ ಅಭಿಷೇಕ್ ಅವರು ಮಮತಾ ಅವರನ್ನು ಬದಿಗೊತ್ತಿ ಪಕ್ಷವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದು ಎಂದು ಮದನ್ ಮಿತ್ರಾ ಹೇಳಿದ್ದರು ಎಂದುವರದಿಯಾಗಿತ್ತು.

20 ಸದಸ್ಯರ ಕಾರ್ಯಕಾರಿ ಸಮಿತಿ ರಚನೆ

ಪಕ್ಷದಲ್ಲಿ ಭಿನ್ನಮತವಿದೆ ಎಂಬ ವಿಚಾರದ ನಡುವೆಯೇ, 20 ಸದಸ್ಯರ ಕಾರ್ಯಕಾರಿ ಸಮಿತಿಯನ್ನು ಟಿಎಂಸಿ ಶನಿವಾರ ಪ್ರಕಟಿಸಿದೆ. ಇದೇ ತಿಂಗಳ ಆರಂಭದಲ್ಲಿ ನಡೆದಿದ್ದ ಪಕ್ಷದ ಸಂಘಟನಾ ಸಭೆಯಲ್ಲಿ ಮಮತಾ ಬ್ಯಾನರ್ಜಿ ಅವರು ಪಕ್ಷದ ಮುಖ್ಯಸ್ಥೆಯಾಗಿ ಪುನರಾಯ್ಕೆಯಾಗಿದ್ದರು.

ಈಗ ರಚಿಸಿರುವ ಸಮಿತಿಯಲ್ಲಿ ಅಮಿತ್ ಮಿತ್ರಾ, ಸುದೀಪ್ ಬಂದೋಪಾಧ್ಯಾಯ, ಸುಖೇಂದು ಶೇಖರ್ ರಾಯ್, ಅಭಿಷೇಕ್ ಬ್ಯಾನರ್ಜಿ ಇದ್ದಾರೆ. ಪಕ್ಷದ ಏಳು ಪ್ರಮುಖ ನಾಯಕರು ಈ ಸಭೆಯಲ್ಲಿ ಹಾಜರಿದ್ದರು.

ಒಬ್ಬರಿಗೆ ಒಂದು ಹುದ್ದೆ ವಿಚಾರ ಹಾಗೂ ಪಕ್ಷದ ನೀತಿಗಳಲ್ಲಿ ಐ–ಪ್ಯಾಕ್ ಮೂಗು ತೂರಿಸುತ್ತಿದೆ ಎಂಬ ವಿಚಾರಗಳು ಸಭೆಯಲ್ಲಿ ಚರ್ಚೆಯಾಗಬಹುದೇ ಎಂಬ ಕುತೂಹಲ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT