ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಭಯೋತ್ಪಾದನೆ ನಿಗ್ರಹಿಸಲು ಜಗತ್ತು ಕ್ಷಿಪ್ರ ಸ್ಪಂದಿಸಲಿ: ನರೇಂದ್ರ ಮೋದಿ

ಇಂಟರ್‌ಪೋಲ್‌ನ 90ನೇ ಸಾಮಾನ್ಯ ಸಭೆ ಉದ್ಘಾಟನೆ
Last Updated 18 ಅಕ್ಟೋಬರ್ 2022, 15:27 IST
ಅಕ್ಷರ ಗಾತ್ರ

ನವದೆಹಲಿ:ಭ್ರಷ್ಟಾಚಾರ, ಭಯೋತ್ಪಾದನೆ, ಮಾದಕ ವಸ್ತು ಕಳ್ಳಸಾಗಣೆ, ಕಳ್ಳ ಬೇಟೆ ಹಾಗೂ ಸಂಘಟಿತ ಅಪರಾಧಗಳಿಗೆ ಯಾವುದೇ ಸುರಕ್ಷಿತ ನೆಲೆ ಇರಬಾರದು. ಈ ಅಪಾಯಗಳ ನಿಗ್ರಹಕ್ಕೆ ಜಾಗತಿಕ ಸ್ಪಂದನೆ ಅಗತ್ಯ ಎಂದುಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಕರೆ ನೀಡಿದರು.

ಪ್ರಗತಿ ಮೈದಾನದಲ್ಲಿ ನಡೆದ ಇಂಟರ್‌ಪೋಲ್‌ನ 90ನೇ ಸಾಮಾನ್ಯ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಅಪರಾಧಗಳು ವಿಶ್ವಸಮುದಾಯ ಎದುರಿಸುತ್ತಿರುವ ಜಾಗತಿಕ ಬೆದರಿಕೆಗಳಾಗಿವೆ. ಇದರ ನಿರ್ಮೂಲನೆಗೆ ಜಾಗತಿಕ ಸಮುದಾಯ ಕ್ಷಿಪ್ರಗತಿಯಲ್ಲಿ ಕ್ರಮಕೈಗೊಂಡರೆ, ತನಿಖಾ ಸಂಸ್ಥೆಗಳು ಉತ್ತಮ ಸಹಕಾರ ನೀಡಿದರೆ,ಅಪರಾಧ ಹಿನ್ನೆಲೆಯ ಶಕ್ತಿಗಳು ನಿಷ್ಕ್ರಿಯವಾಗಲಿವೆ ಎಂದರು.

‘ಈ ಅಪಾಯಗಳ ವೇಗವು ಮೊದಲಿಗಿಂತ ಈಗ ವೇಗವಾಗಿ ಬದಲಾಗಿದೆ. ಬೆದರಿಕೆಗಳು ಜಾಗತಿಕವಾಗಿದ್ದಾಗ, ಪ್ರತಿಕ್ರಿಯೆ ಕೇವಲ ಸ್ಥಳೀಯವಾಗಿರಲು ಸಾಧ್ಯವಿಲ್ಲ. ಭಯೋತ್ಪಾದನೆ ಸೈಬರ್‌ ದಾಳಿಗೂ ವಿಸ್ತರಿಸಿದೆ. ಈ ಬೆದರಿಕೆಗಳನ್ನು ಮಣಿಸಲು ಜಗತ್ತು ಒಟ್ಟುಗೂಡುವ ಸಮಯವಿದು. ಜಗತ್ತಿನ ಸುರಕ್ಷತೆ ಮತ್ತು ಭದ್ರತೆ ಜಾಗತಿಕ ಸಮುದಾಯದ ಸಮಾನ ಜವಾಬ್ದಾರಿ’ ಎಂದು ಮೋದಿ ಪ್ರತಿಪಾದಿಸಿದರು.

‘ಭಾರತವು ಹಲವು ದಶಕಗಳಿಂದ ವಿದೇಶಿ ಪ್ರಾಯೋಜಿತ ಭಯೋತ್ಪಾದನೆಯನ್ನು ಎದುರಿಸುತ್ತಿದೆ.ಜಗತ್ತು ಇದರತ್ತ ಎಚ್ಚೆತ್ತುಕೊಳ್ಳುವ ಮೊದಲೇ, ಸುರಕ್ಷತೆ ಮತ್ತು ಭದ್ರತೆಯ ಮಹತ್ವ ನಮಗೆ ತಿಳಿದಿತ್ತು. ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ನಮ್ಮ ಸಾವಿರಾರು ಜನರು ಪ್ರಾಣ ತ್ಯಾಗ ಮಾಡಿದ್ದಾರೆ’ ಎಂದು ಅವರು ಹೇಳಿದರು.

90ನೇ ಸಾಮಾನ್ಯ ಸಭೆಯ ನೆನಪಿನಾರ್ಥ ವಿಶೇಷ ಅಂಚೆ ಚೀಟಿ ಮತ್ತು ₹100 ನಾಣ್ಯವನ್ನು ಮೋದಿ ಬಿಡುಗಡೆ ಮಾಡಿದರು. ಗೃಹ ಸಚಿವ ಅಮಿತ್‌ ಶಾ, ಇಂಟರ್‌ಪೋಲ್‌ ಅಧ್ಯಕ್ಷ ಅಹ್ಮದ್‌ ನಾಸಿರ್‌ ಅಲ್‌ ರೈಸಿ, ಪ್ರಧಾನಕಾರ್ಯದರ್ಶಿ ಜರ್ಗೆನ್‌ ಸ್ಟಾಕ್‌ ಇದ್ದರು.ಪಾಕಿಸ್ತಾನದ ಫೆಡರಲ್‌ ಇನ್ವೆಸ್ಟಿಗೇಷನ್‌ ಏಜೆನ್ಸಿ (ಎಫ್‌ಐಎ) ಮಹಾನಿರ್ದೇಶಕ ಮೊಹ್ಸಿನ್‌ ಭಟ್‌ ಸೇರಿ 195 ದೇಶಗಳ ಪ್ರತಿನಿಧಿಗಳು ಈ ಸಮಾವೇಶದಲ್ಲಿ ಭಾಗವಹಿಸಿದ್ದರು.

ದಾವೂದ್‌, ಹಫೀಜ್‌, ಮಸೂದ್‌ ಎಲ್ಲಿ?: ಪಾಕ್‌ ಮೌನ
ನವದೆಹಲಿ(ಪಿಟಿಐ): ‌
1993ರ ಮುಂಬೈ ಸರಣಿ ಸ್ಫೋಟದ ಸಂಚುಕೋರ ದಾವೂದ್‌ ಇಬ್ರಾಹಿಂ, 26/11ರ ದಾಳಿಯ ಪ್ರಮುಖ ಸಂಚುಕೋರರಾದ ಸಹೀದ್‌ ಹಫೀಜ್‌ ಮತ್ತು ಅಜರ್‌ ಮಸೂದ್‌ ಅಡಗು ತಾಣಗಳ ಬಗ್ಗೆ ಮಾಹಿತಿ ನೀಡಲು ಪಾಕಿಸ್ತಾನ ನಿರಾಕರಿಸಿದೆ.

ಇಂಟರ್‌ಪೋನ್‌ 90ನೇ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡಿದ್ದ ಪಾಕಿಸ್ತಾನದ ತನಿಖಾ ಏಜೆನ್ಸಿಯ (ಎಫ್‌ಐಎ) ಮುಖ್ಯಸ್ಥ ಮೊಹ್ಸಿನ್‌ ಭಟ್, ಕುಖ್ಯಾತ ಉಗ್ರರ ಕುರಿತ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸದೇ ಉದ್ದೇಶ ಪೂರ್ವಕವಾಗಿ ನುಣುಚಿಕೊಂಡರು.

ಪ್ರಧಾನಿ ಮೋದಿ ಅವರು ಸಮಾವೇಶದ ಸಭಾಂಗಣ ಪ್ರವೇಶಿಸುವ ಕೊನೆಯ ಕ್ಷಣದವರೆಗೂ ಮೊಹ್ಸಿನ್‌ ಅವರು ಭೋಜನ ಕೊಠಡಿಯಲ್ಲೇ ಸಮಯ ಕಳೆದರು. ಪ್ರಧಾನಿಯವರ ಭಾಷಣ ಮುಗಿದ ತಕ್ಷಣ ವರದಿಗಾರರುಮೊಹ್ಸಿನ್‌ ಅವರನ್ನು ಸುತ್ತುವರಿದು, ಕುಖ್ಯಾತ ಭಯೋತ್ಪಾದಕರ ಆಶ್ರಯ ತಾಣದ ಬಗ್ಗೆ ಪ್ರಶ್ನಿಸಿದಾಗ, ಮೊಹ್ಸಿನ್‌ ಯಾವುದೇ ಉತ್ತರ ನೀಡದೆ, ಮೌನವಾಗಿ ಸ್ಥಳದಿಂದ ನಿರ್ಗಮಿಸಿದರು.

ಇದಕ್ಕೂ ಮೊದಲು ಮೋದಿ ಅವರು ತಮ್ಮ 14 ನಿಮಿಷಗಳ ಭಾಷಣದಲ್ಲಿ,ಭಾರತವು ಈವರೆಗೆ 780 ರೆಡ್‌ ಕಾರ್ನರ್‌ ನೋಟಿಸ್‌ಗಳು ಹೊರಡಿಸಿದೆ. ಇದರಲ್ಲಿ 205 ನೋಟಿಸ್‌ಗಳು ಸಿಬಿಐಗೆ ಬೇಕಾಗಿರುವ ಅಪರಾಧಿಗಳಿಗೆ ಸಂಬಂಧಿಸಿದವು. ದೇಶಭ್ರಷ್ಟ ಅಪರಾಧಿಗಳನ್ನುಬಂಧಿಸಲು ರೆಡ್ ಕಾರ್ನರ್ ನೋಟಿಸ್‌ಗಳಿಗೆ ಚುರುಕು ನೀಡಲು ಇಂಟರ್‌ಪೋಲ್‌ ನೆರವಾಗಲಿದೆ. ಪೊಲೀಸ್ ಮತ್ತು ಕಾನೂನು ಜಾರಿ ಸಂಸ್ಥೆಗಳ ನಡುವೆಯೂ ಸಹಕಾರ ಹೆಚ್ಚಿಸಲು ನಿರ್ಧಿಷ್ಟಕಾರ್ಯವಿಧಾನಗಳು ಮತ್ತು ಶಿಷ್ಟಾಚಾರವನ್ನೂ ರೂಪಿಸಬೇಕಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT