ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಮೈಕ್ರಾನ್‌ ಡೆಲ್ಟಾ ಹರಡುವಿಕೆ ತಡೆಯುತ್ತದೆ ಎಂಬುದು ಅಪಾಯಕಾರಿ ನಂಬಿಕೆ: ತಜ್ಞರು

ಹೊಸ ರೂಪಾಂತರ ತಳಿಯು ಓಮೈಕ್ರಾನ್‌ ನೈಸರ್ಗಿಕ ಲಸಿಕೆಯಲ್ಲ ಎಂದ ತಜ್ಞರು
Last Updated 2 ಜನವರಿ 2022, 19:31 IST
ಅಕ್ಷರ ಗಾತ್ರ

ನವದೆಹಲಿ: ‘ಡೆಲ್ಟಾ ರೂಪಾಂತರ ತಳಿಯ ವಿರುದ್ಧ ಓಮೈಕ್ರಾನ್‌ ರೂಪಾಂತರ ತಳಿಯು ನೈಸರ್ಗಿಕ ಲಸಿಕೆಯಂತೆ ಕೆಲಸ ಮಾಡುತ್ತದೆ ಎಂಬ ಅಭಿಪ್ರಾಯವು ಅತ್ಯಂತ ಅಪಾಯಕಾರಿ. ಬೇಜವಾಬ್ದಾರಿಯುತ ಜನರಷ್ಟೇ ಇಂತಹ ತಪ್ಪು ಮಾಹಿತಿಯನ್ನು ಹರಡುತ್ತಾರೆ. ಇದಕ್ಕೆ ಕಿವಿಗೊಡದೆ, ಕೋವಿಡ್‌ ನಿಯಂತ್ರಣ ಕ್ರಮಗಳನ್ನು ಪಾಲಿಸಬೇಕು’ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಕೊರೊನಾ ವೈರಾಣುವಿನ ಬೇರೆಲ್ಲಾ ರೂಪಾಂತರ ತಳಿಗಳಿಗಿಂತ ಓಮೈಕ್ರಾನ್‌ ಅತ್ಯಂತ ಕ್ಷಿಪ್ರವಾಗಿ ಹರಡುವ ಸಾಮರ್ಥ್ಯ ಹೊಂದಿದೆ. ಜತೆಗೆ ಈ ತಳಿಯಿಂದ ಬರುವ ಕೋವಿಡ್‌ನ ತೀವ್ರತೆ ಕಡಿಮೆ ಇದೆ. ಹೀಗಾಗಿಯೇ ಓಮೈಕ್ರಾನ್‌ನಿಂದ ಕೋವಿಡ್‌ ಬಂದು ಗುಣಮುಖವಾದರೆ, ಕೋವಿಡ್‌ ಪ್ರತಿರೋಧ ಶಕ್ತಿ ಸೃಷ್ಟಿಯಾಗುತ್ತದೆ. ಆ ಪ್ರತಿರೋಧ ಶಕ್ತಿಯು ಡೆಲ್ಟಾ ತಳಿಯಿಂದ ಕೋವಿಡ್‌ ತಗಲುವುದನ್ನು ತಡೆಯುತ್ತದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಈಚೆಗೆ, ಮಹಾರಾಷ್ಟ್ರ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು, ‘ಓಮೈಕ್ರಾನ್‌ ನೈಸರ್ಗಿಕ ಲಸಿಕೆಯಂತೆ ಕೆಲಸ ಮಾಡುತ್ತದೆ’ ಎಂದು ಘೋಷಿಸಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ತಜ್ಞರು ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

‘ಈ ರೀತಿಯ ಅಭಿಪ್ರಾಯ ಹರಡುತ್ತಿರುವವರಿಗೆ ವೈರಾಣುವಿನ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಎಂದರ್ಥ. ಭಾರತೀಯರಲ್ಲಿ ಅಪೌಷ್ಟಿಕತೆ ಇದೆ, ಇಲ್ಲಿ ಹೆಚ್ಚು ಪರಿಸರ ಮಾಲಿನ್ಯವಿದೆ. ಜತೆಗೆ ಮಧುಮೇಹದಿಂದ ಬಳಲುತ್ತಿರುವವ ಪ್ರಮಾಣವೂ ಹೆಚ್ಚು. ಓಮೈಕ್ರಾನ್‌ನಿಂದ ಬರುವ ಕೋವಿಡ್‌ನ ತೀವ್ರತೆಯನ್ನು ಈ ಅಂಶಗಳು ಪ್ರಭಾವಿಸುತ್ತವೆ. ಹೀಗಾಗಿ ಓಮೈಕ್ರಾನ್‌ ನೈಸರ್ಗಿಕ ಲಸಿಕೆಯಂತೆ ಕೆಲಸ ಮಾಡುತ್ತದೆ ಎಂಬ ನಂಬಿಕೆ ಅಪಾಯಕಾರಿ’ ಎಂದು ಕೇಂದ್ರ ಸರ್ಕಾರದ ಕೋವಿಡ್‌ ವೈರಾಣು ಸಂರಚನೆ ವಿಶ್ಲೇಷಣೆ ಸಂಸ್ಥೆಯ ಶಾಹಿದ್ ಜಮೀಲ್
ಹೇಳಿದ್ದಾರೆ.

‘ಓಮೈಕ್ರಾನ್‌ನಿಂದ ಹಲವು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಲವರು ಮೃತಪಟ್ಟಿದ್ದಾರೆ. ನೈಜ ಲಸಿಕೆಗೆ ಹೋಲಿಸಿದರೆ, ವೈರಾಣುವಿಂದ ಬಂದ ಪ್ರತಿರೋಧ ಶಕ್ತಿಯು ಕೊಡುವ ರಕ್ಷಣೆ ಅತ್ಯಂತ ಕಡಿಮೆ. ಇದು ಆಸ್ಪತ್ರೆಗೆ ದಾಖಲಾಗುವುದರಿಂದ ಮತ್ತು ಮರಣದ ಸಾಧ್ಯತೆಯಿಂದ ರಕ್ಷಣೆ ನೀಡುವುದಿಲ್ಲ. ಓಮೈಕ್ರಾನ್‌ ಸಮೂಹ ಪ್ರತಿರೋಧ ಶಕ್ತಿಯನ್ನು ಸೃಷ್ಟಿಸಲಿದೆ, ಇದರಿಂದ ಕೋವಿಡ್‌ ವಿರುದ್ಧದ ಸಮುದಾಯ ಪ್ರತಿರೋಧ ಶಕ್ತಿ ಬಲಗೊಳ್ಳಲಿದೆ ಎಂಬ ಅಭಿಪ್ರಾಯವಿದೆ. ಇದು ಅಭಿಪ್ರಾಯವಷ್ಟೆ, ಇದಕ್ಕೆ ಯಾವುದೇ ಆಧಾರಗಳು ಇಲ್ಲ’ ಎಂದು ಇಂಡಿಯನ್ ಪಬ್ಲಿಕ್ ಹೆಲ್ತ್ ಫೌಂಡೇಶನ್‌ನ ವೈರಾಣುಶಾಸ್ತ್ರ ವಿಭಾಗದ ಮುಖ್ಯಸ್ಥ ಗಿರಿಧರ ಆರ್‌. ಬಾಬು
ಹೇಳಿದ್ದಾರೆ.

‘ಓಮೈಕ್ರಾನ್‌ ಸೌಮ್ಯ ಲಕ್ಷಣಗಳನ್ನು ಹೊಂದಿವೆ ಎನ್ನಲಾಗುತ್ತಿದೆ. ಆದರೆ ಈ ತಳಿಯಿಂದ ಕೋವಿಡ್ ಬಂದಾಗ, ದೇಹದ ವಿವಿಧ ಅಂಗಗಳ ಮೇಲೆ ಅದರ ದೀರ್ಘಾವಧಿ ಪರಿಣಾಮಗಳೇನು ಎಂಬುದನ್ನು ಕಂಡುಕೊಳ್ಳಲು ಆರು ತಿಂಗಳಾದರೂ ಬೇಕಾಗುತ್ತದೆ. ಓಮೈಕ್ರಾನ್‌ ನಮ್ಮ ಶ್ವಾಸಕೋಶ, ಹೃದಯ, ಮಿದುಳು ಮತ್ತು ಮೂತ್ರಪಿಂಡಗಳ ಮೇಲೆ ಯಾವ ಪರಿಣಾಮ ಬೀರುತ್ತವೆ ಎಂಬುದು ಇನ್ನೂ ಗೊತ್ತಿಲ್ಲ. ಓಮೈಕ್ರಾನ್‌ನಿಂದ ಕೋವಿಡ್‌ಗೆ ಒಳಗಾದವರಲ್ಲಿ ಏಕಾಗ್ರತೆಯ ಕೊರತೆ ಇರುವುದು ವರದಿಯಾಗಿದೆ. ಹೀಗಾಗಿ ಎಚ್ಚರಿಕೆಯಿಂದ ಇರಬೇಕು’ ಎಂದು ಉಜಾಲಾ ಸೈನಸ್ ಗ್ರೂಪ್‌ ಆಫ್‌ ಹಾಸ್ಪಿಟಲ್ಸ್‌ನ ಸಂಸ್ಥಾಪಕ ನಿರ್ದೇಶಕ ಸುಚಿನ್ ಬಜಾಜ್ ಹೇಳಿದ್ದಾರೆ.

ಸರಣಿ ವೆಬಿನಾರ್ ಆಯೋಜನೆ

ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳ ನಿರ್ವಹಣೆ ಕುರಿತಂತೆ ದೆಹಲಿಯ ಏಮ್ಸ್ ಸಹಯೋಗದಲ್ಲಿ ಜನವರಿ 5ರಿಂದ 19ರವರೆಗೆ ಸರಣಿ ವೆಬಿನಾರ್ ಆಯೋಜಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್, ರಾಜ್ಯಮಟ್ಟದ ಉತ್ಕೃಷ್ಟತಾ ಕೇಂದ್ರಗಳು (ವೈದ್ಯಕೀಯ ಕಾಲೇಜು ಆಸ್ಪತ್ರೆಗಳು), ಜಿಲ್ಲಾ ಮಟ್ಟದ ಕೋವಿಡ್ ಆರೋಗ್ಯ ಕೇಂದ್ರಗಳ ವೈದ್ಯರು, ಖಾಸಗಿ ಹಾಗೂ ಸರ್ಕಾರಿ ವೈದ್ಯರು, ಕೋವಿಡ್ ಚಿಕಿತ್ಸಾಲಯಗಳ ಉಸ್ತುವಾರಿಗಳು ಈ ವೆಬಿನಾರ್‌ನಲ್ಲಿ ಭಾಗವಹಿಸಬೇಕು ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ, ಸಚಿವಾಲಯವು ಏಮ್ಸ್ ಜತೆಗೂಡಿ ರಾಜ್ಯಗಳ ವೈದ್ಯಕೀಯ ಕಾಲೇಜು ಆಸ್ಪತ್ರೆಗಳ ಸಿಬ್ಬಂದಿಗೆ ಕೋವಿಡ್‌ ನಿರ್ವಹಣೆ ಕುರಿತು ವೆಬಿನಾರ್ ಹಮ್ಮಿಕೊಂಡಿತ್ತು. ಇದಕ್ಕೆ ಭಾರಿ ಸ್ಪಂದನೆ ವ್ಯಕ್ತವಾದ ಕಾರಣ, ಇದನ್ನು ಸರಣಿ ರೂಪದಲ್ಲಿ ಹಮ್ಮಿಕೊಳ್ಳಲು ಸಚಿವಾಲಯ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT