ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿಬಿಪಿ ಸಿಬ್ಬಂದಿಗೆ 'ಆಕ್ರಮಣಕಾರಿ ಯುದ್ಧ ತಂತ್ರ' ತರಬೇತಿ ನೀಡಲು ನಿರ್ಧಾರ

2020ರಲ್ಲಿ ಗಾಲ್ವನ್‌ ಕಣಿವೆಯಲ್ಲಿ ನಡೆದಿದ್ದ ಕಾದಾಟದ ಹಿನ್ನೆಲೆ– ಜೂಡೊ, ಕರಾಟೆಯಂತಹ ಸಮರ ಕಲೆಗಳಿಗೆ ಆದ್ಯತೆ
Last Updated 30 ಅಕ್ಟೋಬರ್ 2022, 11:23 IST
ಅಕ್ಷರ ಗಾತ್ರ

ಭಾನು, ಪಂಚಕುಲ: ಭಾರತ ಮತ್ತು ಚೀನಾ ಗಡಿಯಲ್ಲಿನ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಪಹರೆ ಕಾಯುವ ಇಂಡೊ ಟಿಬೇಟನ್‌ ಬಾರ್ಡರ್‌ ಪೊಲೀಸ್‌ (ಐಟಿಬಿಪಿ) ಸಿಬ್ಬಂದಿಗೆ ಶಸ್ತ್ರಾಸ್ತ್ರ ರಹಿತವಾದಂತಹ ಆಕ್ರಮಣಕಾರಿ ಯುದ್ಧ ತಂತ್ರಗಳ ಕುರಿತು ತರಬೇತಿ ನೀಡಲು ನಿರ್ಧರಿಸಲಾಗಿದೆ.

ಜೂಡೊ, ಕರಾಟೆ, ಕ್ರಾವ್‌ ಮಾಗಾದಂತಹ ಸಮರ ಕಲೆ ಪ್ರಕಾರಗಳಿಂದ ಆಯ್ಕೆ ಮಾಡಿಕೊಂಡಿರುವ ಪಂಚಿಂಗ್‌, ಜಾಯಿಂಟ್‌ ಲಾಕ್‌, ಒದೆಯುವುದು ಮತ್ತು ಎತ್ತಿ ಬಿಸಾಕುವುದೂ ಸೇರಿದಂತೆ 15 ರಿಂದ 20 ರಕ್ಷಣಾ ತಂತ್ರಗಳ ಕುರಿತು ಸುಮಾರು ಮೂರು ತಿಂಗಳ ಕಾಲ ಸಿಬ್ಬಂದಿಗೆ ಬೇಸಿಕ್ ಟ್ರೈನಿಂಗ್‌ ಸೆಂಟರ್‌ನಲ್ಲಿ (ಬಿಟಿಸಿ) ತರಬೇತಿ ನೀಡಲಾಗುತ್ತದೆ.

‘ಐಟಿಬಿಪಿಯ ಮಾಜಿ ಮಹಾ ನಿರ್ದೇಶಕ ಸಂಜಯ್‌ ಅರೋರಾ ಅವರ ನಿರ್ದೇಶನದಂತೆ ಕಳೆದ ವರ್ಷದಿಂದಲೇ ಈ ಬಗೆಯ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ತರಬೇತಿ ಅವಧಿಯಲ್ಲಿ ಸಿಬ್ಬಂದಿಗೆ ರಕ್ಷಣಾತ್ಮಕ ಹಾಗೂ ಆಕ್ರಮಣಕಾರಿ ಕೌಶಲಗಳನ್ನು ಹೇಳಿಕೊಡಲಾಗುತ್ತದೆ. ಎದುರಾಳಿಗಳನ್ನು ಹಣಿಯಲು ಹಾಗೂ ಅಶಕ್ತಗೊಳಿಸಲು ಈ ಯುದ್ಧತಂತ್ರಗಳು ಸಹಕಾರಿಯಾಗಲಿವೆ’ ಎಂದು ಐಟಿಬಿಪಿ ಇನ್‌ಸ್ಪೆಕ್ಟರ್‌ ಜನರಲ್‌ ಈಶ್ವರ್‌ ಸಿಂಗ್‌ ದುಹಾನ್‌ ಹೇಳಿದ್ದಾರೆ.

‘ಹಿಮಗಾಳಿ, ಹಿಮಪಾತ, ಆಮ್ಲಜನಕ ಕಡಿಮೆ ಇರುವಂತಹ ಪ್ರದೇಶಗಳಲ್ಲಿ ಪಹರೆ ಕಾಯುವ ಸಿಬ್ಬಂದಿಯ ದೈಹಿಕ ಕ್ಷಮತೆಯನ್ನು ಹೆಚ್ಚಿಸುವ ಸಲುವಾಗಿ ವಿಶೇಷ ತರಬೇತಿ ಘಟಕಗಳನ್ನು ಪರಿಚಯಿಸಲು ಐಟಿಬಿಪಿ ಮುಂದಾಗಿದೆ’ ಎಂದೂ ಅವರು ಮಾಹಿತಿ ನೀಡಿದ್ದಾರೆ.

‘ಗಡಿ ಹಾಗೂ ಅತಿ ಎತ್ತರದ ಪ್ರದೇಶಗಳಲ್ಲಿ ಪಹರೆಗೆ ನಿಯೋಜನೆಗೊಳ್ಳುವ ತುಕಡಿಯ ಕಾರ್ಯದಕ್ಷತೆ ಕುಗ್ಗದಂತೆ ತಡೆಯಲು ನಾವು ಯೋಜನೆಯೊಂದನ್ನು ರೂಪಿಸಿದ್ದೇವೆ. ಇಂತಹ ಸ್ಥಳಗಳಲ್ಲಿ ತುಕಡಿಯೊಂದನ್ನು 90 ದಿನಗಳಿಗಿಂತಲೂ ಹೆಚ್ಚು ಕಾಲ ಪಹರೆಗೆ ನಿಯೋಜಿಸದಿರಲು ತೀರ್ಮಾನಿಸಲಾಗಿದೆ. ಸೂಕ್ತ ಸಮಯಕ್ಕೆ ಬದಲಿ ತುಕಡಿಗಳ ನಿಯೋಜನೆಗೆ ಅನುಕೂಲವಾಗುವಂತೆ ಸಾರಿಗೆ ಸಂಪರ್ಕವನ್ನು ಕಲ್ಪಿಸಲು ನಿರ್ಧರಿಸಲಾಗಿದೆ’ ಎಂದೂ ಹೇಳಿದ್ದಾರೆ.

2020ರಲ್ಲಿ ಗಾಲ್ವನ್‌ ಕಣಿವೆಯಲ್ಲಿ ನಡೆದಿದ್ದ ಕಾದಾಟದಲ್ಲಿ ಚೀನಾ ಸೈನಿಕರು ಕಲ್ಲು, ಕಬ್ಬಿಣದ ಸರಳುಗಳಿಂದ ಭಾರತೀಯ ಸೈನಿಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಇಂತಹ ಸಂದಿಗ್ಧ ಪರಿಸ್ಥಿತಿಗಳಲ್ಲಿ ಶತ್ರುಪಡೆಗಳ ದಾಳಿಯನ್ನು ಸಮರ್ಥವಾಗಿ ಮೆಟ್ಟಿನಿಲ್ಲುವ ದಿಸೆಯಲ್ಲಿ ತನ್ನ ಸಿಬ್ಬಂದಿಯನ್ನು ಸಜ್ಜುಗೊಳಿಸುವುದು ಹೇಗೆ ಎಂಬುದರ ಕುರಿತು ಐಟಿಬಿಪಿ ವೈಜ್ಞಾನಿಕ ನೆಲೆಯಲ್ಲಿ ಸಮೀಕ್ಷೆ ನಡೆಸಿತ್ತು.

ಜೊತೆಗೆಒಂದೇ ಸ್ಥಳದಲ್ಲಿ ಸೈನಿಕರನ್ನು ಸುದೀರ್ಘ ಅವಧಿವರೆಗೆ ಪಹರೆಗೆ ನಿಯೋಜಿಸುವುದರಿಂದ ಅವರ ದೇಹದ ಮೇಲಾಗುವ ವ್ಯತಿರಿಕ್ತ ಪರಿಣಾಮಗಳ ಕುರಿತು ಡಿಆರ್‌ಡಿಒದ ಡಿಫೆನ್ಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಫಿಸಿಯೋಲಜಿ ಅಲೈಯ್ಡ್‌ ಸೈನ್ಸನ್‌ (ಡಿಐಪಿಎಎಸ್‌) ನೀಡಿದ್ದ ಕೆಲವು ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ ಈ ಬಗೆಯ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲುಮುಂದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT