ಸುಪ್ರೀಂ ನ್ಯಾಯಮೂರ್ತಿಗಳು 65ನೇ ವಯಸ್ಸಿಗೆ ನಿವೃತ್ತರಾಗಬೇಕು: ನ್ಯಾ. ರವೀಂದ್ರ ಭಟ್

ನವದೆಹಲಿ: ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸನ್ನು 65ಕ್ಕಿಂತ ಹೆಚ್ಚು ವಿಸ್ತರಿಸಬಾರದು ಎಂದು ಸುಪ್ರೀಂ ನ್ಯಾಯಮೂರ್ತಿ ಎಸ್.ರವೀಂದ್ರ ಭಟ್ ಹೇಳಿದ್ದಾರೆ.
ಅಸೀಮ್ ಚಾವ್ಲಾ ಅವರ ʼಸ್ಟೈಟ್ ಲೈನ್ ಬಿಟ್‌ವೀನ್ ದಿ ಟ್ವಿಸ್ಟ್ ಅಂಡ್ ಟರ್ನ್ʼ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನ್ಯಾ. ಭಟ್, ʼನಿವೃತ್ತಿ ವಯಸ್ಸನ್ನು ವಿಸ್ತರಿಸಬೇಕು ಎಂದು ನಾನು ಮತ್ತು ನ್ಯಾ.ವಿಪಿನ್ ಸಿಂಗ್ (ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ) ಚಿಂತಿಸಿಲ್ಲ. ಇಷ್ಟು ಸಾಕು! ಬಹುಶಃ ಹೈಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸನ್ನು 65ಕ್ಕೆ ಹೆಚ್ಚಿಸಬೇಕು. ಆದರೆ, ಅದನ್ನು ಮೀರಬಾರದು. ನಾವೂ ವಿಶ್ರಾಂತಿ ಬಯಸುತ್ತೇವೆ. ಕೆಲಸದ ಹೊರೆಯನ್ನು ಹೊರತುಪಡಿಸಿ ನಮಗೂ ಮನರಂಜನೆ ಅಗತ್ಯವಿದೆ ಎಂದು ಭಾವಿಸುತ್ತೇನೆʼ ಎಂದಿದ್ದಾರೆ.
ಪೀಠದಲ್ಲಿ ಸೇವೆ ಸಲ್ಲಿಸುವ ಅವಕಾಶ ಯುವ ಜನರಿಗೆ ಸಿಗಬೇಕು ಎಂದೂ ಒತ್ತಿಹೇಳಿದ್ದಾರೆ.
ಯುವಕರು ಹೊಸ ಆಲೋಚನೆಗಳೊಂದಿಗೆ ಬರುತ್ತಾರೆ. ವಿಚಾರಣೆ ಮತ್ತು ಸಮಕಾಲೀನ ವಿಚಾರಗಳಲ್ಲಿ ಪೀಠಕ್ಕೆ ಹೊಸತನವನ್ನು ಮತ್ತು ಮಾಹಿತಿ ಪೂರ್ಣತೆಯನ್ನು ತರುತ್ತಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸದ್ಯ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸು 65 ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸು 62 ಆಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.