ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಹಾಂಗೀರ್‌ಪುರಿ ಗಲಭೆ: ‘ಸುಪ್ರೀಂ’ ಆದೇಶಕ್ಕೆ ಜಗ್ಗದೆ ನೆಲಸಮ

ಕೋರ್ಟ್‌ ಸೂಚನೆ ಬಳಿಕವೂ ಜಹಾಂಗೀರ್‌ಪುರಿಯಲ್ಲಿ 90 ನಿಮಿಷ ಕಾರ್ಯಾಚರಣೆ
Last Updated 20 ಏಪ್ರಿಲ್ 2022, 21:38 IST
ಅಕ್ಷರ ಗಾತ್ರ

ನವದೆಹಲಿ: ಇದೇ 16ರಂದು ಹಿಂಸಾ ಚಾರ ನಡೆದ ಜಹಾಂಗೀರ್‌ಪುರಿಯ ಮಸೀದಿಯ ಆವರಣ ಗೋಡೆ ಮತ್ತು ಸುತ್ತಲೂ ಇದ್ದ ಕೆಲವು ಕಟ್ಟಡಗಳನ್ನು ಉತ್ತರ ದೆಹಲಿ ಮಹಾನಗರಪಾಲಿಕೆಯು (ಎನ್‌ಡಿಎಂಸಿ) ಬುಲ್ಡೋಜರ್‌ ಬಳಸಿ ಬುಧವಾರ ನೆಲಸಮ ಮಾಡಿದೆ.

ಬಿಜೆಪಿ ಆಳ್ವಿಕೆ ಇರುವ ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಗುಜರಾತ್‌ನಲ್ಲಿ ಇದೇ ರೀತಿಯ ಕಾರ್ಯಾಚರಣೆ ಈ ಹಿಂದೆ ನಡೆದಿತ್ತು. ಎನ್‌ಡಿಎಂಸಿಯಲ್ಲಿ ಬಿಜೆಪಿ ಆಳ್ವಿಕೆ ಇದೆ. ಜಹಾಂಗೀರ್‌ಪುರಿ ಮುಸ್ಲಿಮರೇ ಹೆಚ್ಚಾಗಿರುವ ಪ್ರದೇಶ.

ಜಹಾಂಗೀರ್‌ಪುರಿ ಪ್ರದೇಶದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ ನಂತರವೂ 90 ನಿಮಿಷ ಕಾರ್ಯಾಚರಣೆ ಮುಂದುವರಿಯಿತು.

ಗುರುವಾರದವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳಿ, ಗುರುವಾರ ಪ್ರಕರಣ
ವನ್ನು ವಿಚಾರಣೆಗೆ ಎತ್ತಿಕೊಳ್ಳಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ನೇತೃತ್ವದ ಪೀಠವು ಆದೇಶ ನೀಡಿತು.ಕೋರ್ಟ್‌ ಆದೇಶದ ಬಳಿಕವೂ ನೆಲಸಮ ಕಾರ್ಯಾಚರಣೆಯನ್ನು ನಿಲ್ಲಿಸಿಲ್ಲ ಎಂಬುದನ್ನು ಅರ್ಜಿದಾರರ ಪರ ವಕೀಲ ದುಷ್ಯಂತ್ ದವೆ ಅವರು ಪೀಠದ ಗಮನಕ್ಕೆ ತಂದರು.

‘ಕೋರ್ಟ್‌ ಆದೇಶವು ಅಧಿಕೃತವಾಗಿ ಸಿಕ್ಕಿಲ್ಲ. ಹಾಗಾಗಿ, ನೆಲಸಮ ಕಾರ್ಯಾಚರಣೆ ನಿಲ್ಲಿಸಲಾಗದು ಎಂದು ಅಧಿಕಾರಿಗಳು ಹೇಳಿದ್ದಾರೆ. ಪೊಲೀಸ್‌ ಆಯುಕ್ತರು, ಮೇಯರ್‌ ಮತ್ತು ಎನ್‌ಡಿಎಂಸಿ ಆಯುಕ್ತರಿಗೆ ರಿಜಿಸ್ಟ್ರಾರ್‌ ಮೂಲಕ ಆದೇಶ ತಲುಪಿಸಬೇಕು’ ಎಂದು ದವೆ ಹೇಳಿದರು.

ಆದೇಶವನ್ನು ಸಂಬಂಧಪ‍ಟ್ಟವರಿಗೆ ತಕ್ಷಣ ತಲುಪಿಸುವಂತೆ ಮುಖ್ಯ ನ್ಯಾಯಮೂರ್ತಿ ಅವರು ಕೋರ್ಟ್‌ನ ರಿಜಿಸ್ಟ್ರಾರ್‌ಗೆ ಸೂಚಿಸಿದರು.

ಅದಕ್ಕೂ ಮೊದಲು, ಒತ್ತುವರಿ ತೆರವು ಕಾರ್ಯಾಚರಣೆಗೆ 5ರಿಂದ 15 ದಿನ ಗಳ ನೋಟಿಸ್‌ ನೀಡಬೇಕು. ಆದರೆ, ಜಹಾಂಗೀರ್‌ಪುರಿ ಕಾರ್ಯಾ ಚರಣೆಗೆ ಮುನ್ನ ಯಾವುದೇ ನೋಟಿಸ್‌ ನೀಡಲಾ ಗಿಲ್ಲ. ಹಾಗಾಗಿ, ಈ ಕಾರ್ಯಾಚರಣೆಯು ಸಂವಿಧಾನಬಾಹಿರ ಮತ್ತು ಅಕ್ರಮ ಎಂದು ದವೆ ವಾದಿಸಿ ದ್ದರು.

ಹನುಮ ಜಯಂತಿ ಮೆರವಣಿಗೆ ಸಂದರ್ಭದಲ್ಲಿ ಶನಿವಾರ ಹಿಂಸಾಚಾರ ನಡೆದ ಸ್ಥಳದಲ್ಲಿಯೇ ಕಟ್ಟಡ ಧ್ವಂಸ ಕಾರ್ಯಾಚರಣೆ ನಡೆದಿದೆ. ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗ ದಳವು ಸಂಘಟಿಸಿದ್ದ ಮೆರವಣಿಗೆ ಸಂದರ್ಭದಲ್ಲಿ ಸಂಘರ್ಷ ಏರ್ಪಟ್ಟಿತ್ತು. ಈ ಮೆರವಣಿಗೆಗೆ ಅನುಮತಿ ಪಡೆದಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಉತ್ತರ ಪ್ರದೇಶ, ಗುಜರಾತ್‌ ಮತ್ತು ಮಧ್ಯಪ್ರದೇಶದಲ್ಲಿ ರಾಮ ನವಮಿ ಮೆರವಣಿಗೆ ಸಂದರ್ಭದಲ್ಲಿ ಹಿಂಸಾಚಾರ ನಡೆದ ಸ್ಥಳಗಳಲ್ಲಿ ಕೂಡ ಇದೇ ರೀತಿಯ ನೆಲಸಮ ಕಾರ್ಯಾಚರಣೆಯನ್ನು ಅಲ್ಲಿನ ನಗರ ಸ್ಥಳೀಯ ಸಂಸ್ಥೆಗಳು ನಡೆಸಿವೆ.

ಜಹಾಂಗೀರ್‌ಪುರಿಯಲ್ಲಿ ಬೆಳಿಗ್ಗೆ 10 ಗಂಟೆಯ ಹೊತ್ತಿಗೆ ಕಾರ್ಯಾಚರಣೆ ಆರಂಭಿಸಲಾಯಿತು. ಭಾರಿ ಪೊಲೀಸ್‌ ಬಂದೋಬಸ್ತ್‌ನಲ್ಲಿ ಕಾರ್ಯಾಚರಣೆ ನಡೆಯಿತು. ಕಟ್ಟಡ ತೆರವಿಗೆ ಮುನ್ನ ಪೊಲೀಸರು ಪಥಸಂಚಲನವನ್ನೂ ನಡೆಸಿದರು. ಪರಿಸ್ಥಿತಿಯ ಮೇಲೆ ನಿಗಾ ಇರಿಸಲು ಡ್ರೋನ್‌ ಅನ್ನು ಕೂಡ ಬಳಸಲಾಗಿತ್ತು.

ಮಂಗಳವಾರವೇ ಕಾರ್ಯಾಚರಣೆ ಆರಂಭಿಸಲು ಎನ್‌ಡಿಎಂಸಿ ಬಯಸಿತ್ತು. ಆದರೆ, ಪೊಲೀಸ್‌ ಸಿಬ್ಬಂದಿ ಲಭ್ಯವಾಗದ ಕಾರಣ ಕಾರ್ಯಾಚರಣೆಯನ್ನು ಬುಧ ವಾರಕ್ಕೆ ಮುಂದೂಡಬೇಕಾಯಿತು ಎಂದು ಎನ್‌ಡಿಎಂಇ ಮೇಯರ್‌
ಹೇಳಿದ್ದಾರೆ.

ಕಾನೂನುಬಾಹಿರ ತೆರವು ಕಾರ್ಯಾಚರಣೆಗಳ ಮೂಲಕ ಕಾನೂನುಗಳು ಮತ್ತು ಸಂವಿಧಾನವನ್ನು ನೆಲಸಮ ಮಾಡಲಾಗಿದೆ. ಕನಿಷ್ಠ, ಸುಪ್ರೀಂ ಕೋರ್ಟ್‌ ಮತ್ತು ಅದರ ಆದೇಶವನ್ನಾದರೂ ನೆಲಸಮ ಮಾಡಬಾರದು

ಬೃಂದಾ ಕಾರಟ್, ಸಿಪಿಎಂ ನಾಯಕಿ

ಇದು ಸಾಂವಿಧಾನಿಕ ಮೌಲ್ಯಗಳ ನೆಲಸಮ. ಇದು ಬಡವರು ಮತ್ತು ಅಲ್ಪಸಂಖ್ಯಾತರ ಮೇಲೆ ಸರ್ಕಾರ ನಡೆಸಿದ ಹಲ್ಲೆ. ಬಿಜೆಪಿಯವರು ಮೊದಲು ತಮ್ಮ ಹೃದಯದಲ್ಲಿನ ದ್ವೇಷವನ್ನು ನೆಲಸಮ ಮಾಡಿಕೊಳ್ಳಬೇಕು
ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ

ದೇಶದೆಲ್ಲೆಡೆ ದಂಗೆಗಳು ನಡೆಯುತ್ತಿವೆ. ಬಿಜೆಪಿಯೇ ಈ ದಂಗೆಗಳನ್ನು ಮಾಡಿಸುತ್ತಿದೆ. ಬಿಜೆಪಿಯ ಕೇಂದ್ರ ಕಚೇರಿಯನ್ನು ನೆಲಸಮ ಮಾಡಿಬಿಡಿ, ದಂಗೆಗಳು ನಿಂತುಹೋಗುತ್ತವೆ

ಅತಿಶಿ ಮರ್ಲೇನಾ, ಎಎಪಿ ನಾಯಕಿ

ಅಪರಾಧ ಮತ್ತು ಸಂಚಿನ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗಿದೆಯೇ ಹೊರತು ಜಾತಿ ಮತ್ತು ಸಮುದಾಯದ ಆಧಾರದಲ್ಲಿ ಅಲ್ಲ. ತಪ್ಪಿತಸ್ಥರನ್ನು ಅವರು ಮಾಡಿದ ಅಪರಾಧದ ಆಧಾರದಲ್ಲಿ ಬಂಧಿಸಲಾಗಿದೆ.
ಜಾತಿಯ ಆಧಾರದಲ್ಲಿ ಅಲ್ಲ

ಮುಕ್ತಾರ್‌ ಅಬ್ಬಾಸ್‌ ನಖ್ವಿ, ಕೇಂದ್ರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT