ಗುರುವಾರ , ಮೇ 13, 2021
38 °C
ಚೇತರಿಸಿಕೊಂಡ ಬಳಿಕ ಮನೆಗೆ

ಲಾಲು ಪ್ರಸಾದ್ ನಾಳೆ ಜೈಲಿನಿಂದ ಬಿಡುಗಡೆ ಸಾಧ್ಯತೆ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಪಟ್ನಾ: ಬಹುಕೋಟಿ ರೂಪಾಯಿ ಮೇವು ಹಗರಣಗಳ ಪ್ರಕರಣಗಳಲ್ಲಿ ಜಾಮೀನು ಪಡೆದಿರುವ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಅವರು ಸೋಮವಾರ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ.

ಲಾಲು ಬಿಡುಗಡೆಯ ಸುದ್ದಿ ತಿಳಿದ ಆರ್‌ಜೆಡಿಯ ಬೆಂಬಲಿಗರು ಅವರನ್ನು ಸ್ವಾಗತಿಸಲು ಸಿದ್ಧತೆಯಲ್ಲಿ ತೊಡಗಿದ್ದರು. ಆದರೆ, ನವದೆಹಲಿಯ ಏಮ್ಸ್‌ನಲ್ಲಿ ಹಲವು ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿರುವ ಲಾಲು ಅವರು, ಚೇತರಿಸಿಕೊಂಡ ಬಳಿಕವಷ್ಟೇ ಮನೆಗೆ ಹಿಂತಿರುಗಲಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

‘ಏಮ್ಸ್‌ನಲ್ಲಿ ಲಾಲು ಅವರಿಗೆ ಚಿಕಿತ್ಸೆ ಮುಂದುವರಿಯಲಿದೆ. ನಮ್ಮ ತಂದೆ ಮಧುಮೇಹದ ಸಮಸ್ಯೆ ಇದ್ದು, ಹೃದಯದ ಕಾಯಿಲೆ, ಮೂತ್ರಪಿಂಡದ ಸೋಂಕು ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ’ ಎಂದು ಅವರ ಮಗ ತೇಜಸ್ವಿ ಯಾದವ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಡುಮ್ಕಾ ಖಜಾನೆ ಪ್ರಕರಣದಲ್ಲಿ ಜಾರ್ಖಂಡ್ ಹೈಕೋರ್ಟ್ ಲಾಲು ಅವರಿಗೆ ಶನಿವಾರ ಜಾಮೀನು ನೀಡಿದೆ. ಲಾಲು ಅವರು ಈಗಾಗಲೇ ತಮ್ಮ ಶಿಕ್ಷೆಯ ಅರ್ಧದಷ್ಟು ಅವಧಿಯನ್ನು ಪೂರೈಸಿದ್ದಾರೆ. ಒಟ್ಟು 39 ತಿಂಗಳು 25 ದಿನಗಳ ಕಾಲ ಲಾಲು ಜೈಲಿನಲ್ಲಿದ್ದರು.

‘ಜಾಮೀನು ಅವಧಿಯಲ್ಲಿ ಅನುಮತಿ ಇಲ್ಲದೆ ದೇಶವನ್ನು ತೊರೆದು ಹೋಗುವಂತಿಲ್ಲ. ವಿಳಾಸ ಮತ್ತು ಮೊಬೈಲ್ ಸಂಖ್ಯೆ ಬದಲಾಯಿಸಬಾರದು. ಪಾಸ್‌ಪೋರ್ಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು’ ಎಂದು ಜಾಮೀನು ವೇಳೆ ಹೈಕೋರ್ಟ್‌ ಲಾಲು ಅವರಿಗೆ ಸೂಚನೆ ನೀಡಿ‌ದೆ.

‘ಲಾಲು ಅವರ ಬಿಡುಗಡೆಗಾಗಿ ಸೋಮವಾರ ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ತೆರಳಲಾಗುವುದು. ಬಿಡುಗಡೆ ಸಂಬಂಧ ಲಾಲು ಅವರ ಸಹಿಗಾಗಿ ಅರ್ಜಿಯನ್ನು ಕಳುಹಿಸಲಾಗಿದೆ. ನಂತರ ಹೈಕೋರ್ಟ್ ಆದೇಶದ ಪ್ರತಿಯೊಂದಿಗೆ ಅದನ್ನು ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು’ ಎಂದು ಲಾಲು ಪರ ವಕೀಲರಾದ ದೇವರ್ಶಿ ಮಂಡಲ್ ತಿಳಿಸಿದ್ದಾರೆ.

‘ಸಿಬಿಐ ನ್ಯಾಯಾಲಯಕ್ಕೆ ಲಾಲು ಅವರು ಖುದ್ದಾಗಿ ಹಾಜರಾಗಬೇಕಾಗಿಲ್ಲ. ಸೋಮವಾರ ಲಾಲು ಅವರು ಬಿಡುಗಡೆಯಾಗುವ ಸಾಧ್ಯತೆ ಇದೆ’ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು