ಭಾನುವಾರ, ಏಪ್ರಿಲ್ 2, 2023
33 °C
ಐದು ದಿನಗಳ ಜೈಪುರ ಸಾಹಿತ್ಯೋತ್ಸವ ಇಂದು ಆರಂಭ

ಜೈಪುರ ಸಾಹಿತ್ಯೋತ್ಸವ | ಸಮಕಾಲೀನ ಸಾಹಿತ್ಯ ಮಂಥನದ ಕಬ್ಬ

ವಿಶಾಖ ಎನ್. Updated:

ಅಕ್ಷರ ಗಾತ್ರ : | |

ಜೈಪುರ: ಭಾರತೀಯ ಭಾಷೆಗಳ 21 ಹಾಗೂ ಅಂತರರಾಷ್ಟ್ರೀಯ ಭಾಷೆಗಳಿಗೆ ಸಂಬಂಧಿಸಿದ 14 ಗೋಷ್ಠಿಗಳು ಜೈಪುರ ಸಾಹಿತ್ಯೋತ್ಸವದ ಈ ಆವೃತ್ತಿಯ ವಿಶೇಷ. ಕೋವಿಡ್ ಕಾರಣದಿಂದಾಗಿ‌ ಕಳೆದ ವರ್ಷ ಅನ್‌ಲೈನ್‌ನಲ್ಲಿ ಸಾಹಿತ್ಯೋತ್ಸವ ನಡೆದಿತ್ತು. ಈ ಸಲ ಸುಮಾರು ನಾಲ್ಕೂವರೆ ಲಕ್ಷ ಜನರು ಭೌತಿಕವಾಗಿ ಸಾಕ್ಷಿಯಾಗುವ ನಿರೀಕ್ಷೆ‌ ಇದೆ.

ಹೋಟೆಲ್ ಕ್ಲಾರ್ಕ್ಸ್‌ ಆಮೆರ್ ಜನವರಿ 19ರಿಂದ 23ರ ವರೆಗೆ ಐದು ದಿನ ಸಾಹಿತ್ಯ, ಸಂಸ್ಕೃತಿ, ಸಂಗೀತಾಸಕ್ತರಿಗೆ ತುಂಬಿಕೊಳ್ಳುವಂತಹ ಹಲವು ವಿಷಯಗಳು ದಕ್ಕಲಿವೆ.

'ಠೋಕರಿ ಮೈ ದಿಗಂತ್' ಹಿಂದಿ ಕವನ ಸಂಕಲನಕ್ಕಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದ ಅನಾಮಿಕ ಅವರೊಟ್ಟಿಗೆ ಕಾದಂಬರಿಕಾರ್ತಿ ಅಲ್ಕಾ ಸರಾವಗಿ ಹಾಗೂ ಪತ್ರಕರ್ತೆ ನಿಶಾಂತಾ ಗೌತಮ್ ನಡೆಸಿಕೊಡುವ ಚರ್ಚೆ, ದೆಹಲಿಯ ಸಂಸ್ಕೃತ ವಿದ್ವಾಂಸ ಆಸ್ಕರ್ ಪ್ರಜೋಲ್ ಅವರೊಂದಿಗೆ 'ಗ್ಲೋಬಲ್ ಹಿಂದಿ' ಗೋಷ್ಠಿಯ ಮೂಲಕ ಭಾರತದಲ್ಲಿನ ಫಿನ್ಲೆಂಡ್‌ ರಾಯಭಾರಿ ಆ್ಯಡಂ ಬುರಾಕೆವ್‌ಸ್ಕಿ ನಡೆಸಿಕೊಡುವ ಸಂವಾದ ಅನೇಕರಿಗೆ ಇಲ್ಲಿ ಆಸಕ್ತಿದಾಯಕ ಗೋಷ್ಠಿಗಳಾಗಿವೆ.

ಜೈಪುರ ಸಾಹಿತ್ಯೋತ್ಸವದ 16ನೇ ಆವೃತ್ತಿಯಲ್ಲಿ ಮಹಿಳಾ ಸಾಹಿತಿಗಳು ಹಾಗೂ ಕಲಾವಿದರ ದನಿಯ ಬಗೆಗಿನ ಗೋಷ್ಠಿಗಳಿವೆ. ಜಾಗತಿಕ ಕೃಷಿ ಬಿಕ್ಕಟ್ಟುಗಳು, ಕೃತಕ ಬುದ್ಧಿಮತ್ತೆ, ಹೊಸಕಾಲದ ಪ್ರಮುಖ ವೈಜ್ಞಾನಿಕ ಆವಿಷ್ಕಾರಗಳು, 75ನೇ ವರ್ಷದಲ್ಲಿ ಭಾರತ, ರಷ್ಯಾ-ಉಕ್ರೇನ್ ತಿಕ್ಕಾಟ, ತಂತ್ರಜ್ಞಾನ ನೈತಿಕತೆ... ‌ಈ ವಿಷಯಗಳನ್ನು ಆಧರಿಸಿದ ಗೋಷ್ಠಿಗಳು ನಡೆಯಲಿವೆ. ಅಪರಾಧ ಜಗತ್ತಿನ ಕಾಲ್ಪನಿಕತೆ, ಕಾವ್ಯ, ಅನುವಾದ ಹೀಗೆ ಸಾಹಿತ್ಯಿಕ ಅಂಶಗಳ ಕುರಿತ ಗೋಷ್ಠಿಗಳು ನಡೆಯಲಿವೆ. ಐದು ವೇದಿಕೆಗಳಲ್ಲಿ ಗೋಷ್ಠಿಗಳು ನಡೆಯಲಿದ್ದು, ಪ್ರತಿದಿನ ಮುಂಜಾನೆ‌ ಹಾಗೂ ಸಂಜೆ ಸಂಗೀತ ಕಾರ್ಯಕ್ರಮಗಳು ಸಹೃದಯರನ್ನು ರಂಜಿಸಲಿವೆ.

ನೊಬೆಲ್ ಪ್ರಶಸ್ತಿ ಪುರಸ್ಕೃತ ಅಬ್ದುಲ್‌ರಜಾಕ್ ಗುರ್ನಾ, ಚಲನಚಿತ್ರ ಬರಹಗಾರ ಹಾಗೂ ಬಾತ್ಮೀದಾರ ಅಲೆಕ್ಸ್ ವೊವ್ ತುನ್ಜೆ‌ಲ್‌ಮನ್, ಬುಕರ್ ಪ್ರಶಸ್ತಿ ಪುರಸ್ಕೃತರಾದ ಗೀತಾಂಜಲಿ ಶ್ರೀ, ಜನಪ್ರಿಯ ಸಾಹಿತಿ ದೀಪ್ತಿ ಕಪೂರ್, ಸಂಗೀತಗಾರ ಹರಿಪ್ರಸಾದ್ ಚೌರಾಸಿಯಾ, ನಟಿ ದೀಪ್ತಿ‌ ನವಾಲ್, ಚಿತ್ರಸಾಹಿತಿ ಹಾಗೂ ಕವಿ‌ ಗುಲ್ಜಾರ್, ಕಾದಂಬರಿಗಾರ್ತಿ-ಅನುವಾದಕಿ‌ ಮೀನಾ ಕಂದಸ್ವಾಮಿ, ಇನ್ಫೊಸಿಸ್ ಸಹ ಸ್ಥಾಪಕ ನಂದನ್ ನಿಲೇಕಣಿ, ಸುಧಾ ಮೂರ್ತಿ, ಸಂಸದ ಫಿರೋಜ್ ವರುಣ್ ಗಾಂಧಿ... ಈ ಎಲ್ಲರ ವಿಚಾರಧಾರೆ ನೋಡಲು-ಕೇಳಲು ಸಾಹಿತ್ಯೋತ್ಸವ ಅವಕಾಶ ಮಾಡಿಕೊಟ್ಟಿದೆ.

ಗುರುವಾರ ಸುಷ್ಮಾ ಸೋಮ ಅವರ ಕರ್ನಾಟಕ ಶಾಸ್ತ್ರೀಯ ಸಂಗೀತದೊಂದಿಗೆ ಉತ್ಸವ ಪ್ರಾರಂಭ. ಮೊದಲ ದಿನದ ಚಳಿಗಾಲದ ಮುಂಜಾವನ್ನು ಸಾಹಿತ್ಯೋತ್ಸವದ ಸಹ ಸ್ಥಾಪಕರಾದ ನಮಿತಾ ಗೋಖಲೆ ಹಾಗೂ ವಿಲಿಯಂ ಡಾಲ್‌ರಿಂಪಲ್ ಕಳೆಗಟ್ಟಿಸಲಿದ್ದಾರೆ. ಅದೇ ದಿನ‌ ಅಬ್ದುಲ್‌ರಜಾಕ್ ಗುರ್ನಾ ಪ್ರಸ್ತಾವಿಕ ನುಡಿಗಳನ್ನಾಡುವರು. 350ಕ್ಕೂ ಹೆಚ್ಚು ಪರಿಣತರು ಉತ್ಸವದಲ್ಲಿ ತಮ್ಮ ಮಾತಿನ ಮಂಟಪ ಕಟ್ಟುವರು.

ತಂದೆಯಂದಿರ ಕಾವ್ಯ
ಜಾವೆದ್ ಅಖ್ತರ್ ತಂದೆ ನಿಸಾರ್ ಅಖ್ತರ್ ಅವರ ಕೆಲವು 'ನಜ್ಮಾ'ಗಳನ್ನು ಶಬಾನಾ ಆಜ್ಮಿ ಹೆಕ್ಕಿದ್ದಾರೆ. ಶಬಾನಾ ತಂದೆ ಕೈಫಿ ಆಜ್ಮಿ ಅವರು ಬರೆದ ತಮ್ಮಿಷ್ಟದ 'ನಜ್ಮಾ'ಗಳನ್ನು ಜಾವೆದ್ ಆಯ್ಕೆ ಮಾಡಿದ್ದಾರೆ. ಅವುಗಳನ್ನು ಪ್ರಸ್ತುತ ಪಡಿಸಲಿರುವ ಗೋಷ್ಠಿ 'ದಾಯರಾ ಅಂಡ್ ಧನಕ್'. ರಕ್ಷಾಂಧಾ ಜಲೀಲ್ ಜ.20 ರಂದು ನಡೆಸಿಕೊಡುವ ಈ ಗೋಷ್ಠಿಯಲ್ಲಿ ಜಾವೆದ್ ಹಾಗೂ ಶಬಾನಾ ಮುಖಾಮುಖಿಯಾಗಲಿದ್ದಾರೆ.

21ರಂದು ಲತಾ ಮಂಗೇಷ್ಕರ್ ಸಂಗೀತ ಬದುಕಿನ ಪುಟಗಳನ್ನು ತಿರುವಿಹಾಕುವ ಗೋಷ್ಠಿಯಲ್ಲಿ, ಅವರ ಕುರಿತು ಕತೆ ಬರೆದಿರುವ ಯತೀಂದ್ರ ಮಿಶ್ರ ಹಾಗೂ ಚಿತ್ರಸಾಹಿತಿ ಗುಲ್ಜಾರ್ ಪಾಲ್ಗೊಳ್ಳುವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು