ತುತ್ತು ನೀಡುವ ಕೈಗಳನ್ನೇ ಕಚ್ಚುತ್ತಿರುವರು; ಬಾಲಿವುಡ್ ನಿಂದಕರಿಗೆ ಜಯಾ ಚಾಟಿ

ನವದೆಹಲಿ: ಮನರಂಜನಾ ವಲಯದಲ್ಲಿಯೇ ಇದ್ದು, ಸಿನಿಮಾ ಕ್ಷೇತ್ರವನ್ನು ಅಪಖ್ಯಾತಿಗೊಳಿಸುತ್ತಿರುವವರ ವಿರುದ್ಧ ರಾಜ್ಯ ಸಭಾ ಸದಸ್ಯೆ, ನಟಿ ಜಯಾ ಬಚ್ಚನ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯ ಲೋಕಸಭಾ ಸಂಸದ ಮತ್ತು ಭೋಜ್‌ಪುರಿ ನಟ ರವಿ ಕಿಶನ್ ಸೋಮವಾರ, 'ಸಿನಿಮಾ ಕ್ಷೇತ್ರದಲ್ಲಿ ಡ್ರಗ್ಸ್ ಚಟದ ಸಮಸ್ಯೆ ಇದೆ' ಎಂದಿದ್ದರು. ನಟಿ ಕಂಗನಾ ರನೌತ್ ಸಹ ಇತ್ತೀಚೆಗೆ ಬಾಲಿವುಡ್‌ನ್ನು 'ಚರಂಡಿ' ಎಂದು ಕರೆದಿದ್ದರು. ಆದರೆ, ಯಾರ ಹೆಸರನ್ನೂ ಪ್ರಸ್ತಾಪಿಸದೆಯೇ 'ಅವರಿಗೆ ತುತ್ತು ನೀಡುತ್ತಿರುವ ಕೈಗಳನ್ನೇ ಅವರು ಕಚ್ಚುತ್ತಿದ್ದಾರೆ' ಎಂದು ಜಯಾ ಬಚ್ಚನ್ ಹೇಳಿದ್ದಾರೆ.
ರಾಜ್ಯ ಸಭೆಯ ಶೂನ್ಯ ವೇಳೆಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಮಾಧ್ಯಮಗಳಿಂದ ಮನರಂಜನಾ ಉದ್ಯಮವೇ ಶಿಕ್ಷೆಗೆ ಗುರಿಯಾಗಿದೆ, ಸರ್ಕಾರ ಅದನ್ನು ರಕ್ಷಿಸಬೇಕಿದೆ ಹಾಗೂ ಬೆಂಬಲಿಸಬೇಕಿದೆ ಎಂದಿದ್ದಾರೆ.
ಇನ್ನೂ ಸಿನಿಮಾ ಕ್ಷೇತ್ರವನ್ನು ಚರಂಡಿಗೆ ಹೋಲಿಸಿರುವುದಕ್ಕೆ ಆಕ್ಷೇಪ ಸೂಚಿಸಿದ್ದು, 'ಅದೇ ಕ್ಷೇತ್ರದಲ್ಲಿ ಹೆಸರು ಮಾಡಿದವರು ಈಗ ಅದನ್ನೇ ಚರಂಡಿ ಎಂದು ಕರೆಯುತ್ತಿದ್ದಾರೆ. ಅದಕ್ಕೆ ನಾನು ಸಂಪೂರ್ಣ ಅಸಮ್ಮತಿ ಸೂಚಿಸುತ್ತೇನೆ...' ಎಂದು ಹೇಳಿದ್ದಾರೆ.
People in the entertainment industry are being flogged by social media. People who made their names in the industry have called it a gutter. I completely disagree. I hope that govt tells such people not to use this kind of language: MP Jaya Bachchan in Rajya Sabha pic.twitter.com/3OkeUrXnqP
— ANI (@ANI) September 15, 2020
ಸಂಸದ ಕಿಶನ್ ಮಾಡಿರುವ ಬಾಲಿವುಡ್ ಡ್ರಗ್ ನಿಯಂತ್ರಣದ ಆರೋಪಗಳಿಗೆ, 'ಅವಮಾನಕಾರಿ ಮತ್ತು ಮುಜುಗರ ತಂದಿದೆ' ಎಂದಿದ್ದಾರೆ. 'ಜಿಸ್ ಥಾಲಿ ಮೇ ಖಾತೆ ಹೈ ಉಸ್ಮೆ ಛೇಡ್ ಕರ್ತೆ ಹೈ. ಗಲತ್ ಬಾತ್ ಹೈ' ಹಿಂದಿಯ ನುಡಿಗಟ್ಟು ಪ್ರಸ್ತಾಪಿಸಿ, ನಿಮಗೆ ತುತ್ತು ನೀಡುತ್ತಿರುವ ಕೈಗಳನ್ನೇ ಕಚ್ಚುತ್ತಿರುವಿರೆಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಮನರಂಜನಾ ಕ್ಷೇತ್ರವು ನೇರವಾಗಿ 5 ಲಕ್ಷ ಜನರಿಗೆ ಉದ್ಯೋಗ ನೀಡಿದೆ ಹಾಗೂ ಪರೋಕ್ಷವಾಗಿ 50 ಲಕ್ಷ ಜನರಿಗೆ ಕೆಲಸ ನೀಡುತ್ತಿದೆ. ಯಾವುದೇ ಉತ್ತಮ ಕಾರ್ಯಗಳಲ್ಲಿಯೂ ಇದೇ ಕ್ಷೇತ್ರ ಸರ್ಕಾರದೊಂದಿಗೆ ನಿಲ್ಲುತ್ತದೆ. ರಾಷ್ಟ್ರೀಯ ವಿಪತ್ತು ಎದುರಾದರೂ ಅವರಲ್ಲಿರುವ ಹಣವನ್ನು ನೀಡುತ್ತಾರೆ ಹಾಗೂ ಸೇವೆ ಸಲ್ಲಿಸುತ್ತಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ನಮ್ಮ ಮೇಲೆ ಆಕ್ರಮಣ ನಡೆಸಲಾಗುತ್ತಿದೆ. ಸರ್ಕಾರದಿಂದ ನಮಗೆ ಯಾವುದೇ ಸಹಕಾರ ದೊರೆಯುತ್ತಿಲ್ಲ, ಸರ್ಕಾರ ಮುಂದೆ ಬಂದು ಮನರಂಜನಾ ಉದ್ಯಮಕ್ಕೆ ಬೆಂಬಲ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.