ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜೋಡೊ’ ಸಮಾರೋಪಕ್ಕೆ ಕೊನೆಗೂ ಜೆಡಿಎಸ್‌ಗೆ ಆಹ್ವಾನ

ಎಎಪಿ, ಬಿಆರ್‌ಎಸ್‌ಗೆ ಇನ್ನೂ ದೊರೆಯದ ಆಹ್ವಾನ
Last Updated 14 ಜನವರಿ 2023, 10:39 IST
ಅಕ್ಷರ ಗಾತ್ರ

ನವದೆಹಲಿ: ಜಮ್ಮು–ಕಾಶ್ಮೀರದ ಶ್ರೀನಗರದಲ್ಲಿ ಜ. 30ರಂದು ನಡೆಯಲಿರುವ ‘ಭಾರತ್ ಜೋಡೊ’ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ನೇತೃತ್ವದ ಜೆಡಿಎಸ್‌ಗೆ ಕಾಂಗ್ರೆಸ್‌ ಆಹ್ವಾನ ನೀಡಿದೆ. ಆದರೆ, ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಹಾಗೂ ಕೆ. ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್‌ಎಸ್‌ ಪಕ್ಷಗಳಿಗೆ ಇನ್ನೂ ಆಹ್ವಾನ ನೀಡಿಲ್ಲ.

ಜೆಡಿಎಸ್‌ಗೆ ನೀಡಿದ ಆಹ್ವಾನದಿಂದಾಗಿ ‘ಭಾರತ್ ಜೋಡೊ’ದ ಸಮಾರೋಪದಲ್ಲಿ ಒಟ್ಟು 23 ಸಮಾನ ಮನಸ್ಕ ಪಕ್ಷಗಳ ನಾಯಕರಿಗೆ ಆಹ್ವಾನ ದೊರೆತಂತಾಗಿದೆ.

ಕಾಂಗ್ರೆಸ್ ಈ ಹಿಂದೆ ಪ್ರಕಟಿಸಿದ್ದ 21 ಆಹ್ವಾನಿತ ಸಮಾನಮನಸ್ಕ ಪಕ್ಷಗಳ ಪಟ್ಟಿಯಲ್ಲಿ ಕರ್ನಾಟಕದ ಜೆಡಿಎಸ್‌ಗೆ ಆಹ್ವಾನವಿರಲಿಲ್ಲ. ಕರ್ನಾಟಕದಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್‌ನ ಮಿತ್ರಪಕ್ಷವಾಗಿತ್ತು. ಈ ಹಿಂದೆ ಕಾಂಗ್ರೆಸ್ ಜೆಡಿಎಸ್ ಅನ್ನು ಬಿಜೆಪಿಯ ‘ಬಿ’ ಟೀಂ ಎಂದೂ ಕರೆದಿತ್ತು. ಆದರೆ, ಇತ್ತೀಚಿನ ಬೆಳವಣಿಗೆಗಳಲ್ಲಿ ಬಿಜೆಪಿಯ ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಜತೆಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್‌ಗೆ ಕಾಂಗ್ರೆಸ್ ಆಹ್ವಾನ ನೀಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ತೃಣಮೂಲ ಕಾಂಗ್ರೆಸ್, ಸಮಾಜವಾದಿ, ಡಿಎಂಕೆ, ಸಿಪಿಎಂ, ಸಿಪಿಐ, ಶಿವಸೇನಾ, ಜೆಡಿಯು, ಎನ್‌ಸಿಪಿ ಹಾಗೂ ಬಿಎಸ್‌ಪಿ ಸೇರಿದಂತೆ ಒಟ್ಟು 23 ಸಮಾನಮನಸ್ಕ ಪಕ್ಷಗಳ ನಾಯಕರನ್ನು ಕಾಂಗ್ರೆಸ್ ಆಹ್ವಾನಿಸಿದೆ. ಆದರೆ, ಬಿಆರ್‌ಎಸ್, ಎಎಪಿ ಜೊತೆಗೆ ವೈಎಸ್‌ಆರ್ ಕಾಂಗ್ರೆಸ್, ಬಿಜೆಡಿ, ಅಕಾಲಿದಳ ಮತ್ತು ಎಐಯುಡಿಎಫ್‌ ಅನ್ನೂ ಕಾಂಗ್ರೆಸ್ ಯಾತ್ರೆಯ ಸಮಾರೋಪಕ್ಕೆ ಇನ್ನೂ ಆಹ್ವಾನ ನೀಡಿಲ್ಲ.

ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್ ಮತ್ತು ಮಾಯಾವತಿ ಅವರಂಥ ನಾಯಕರು ರಾಹುಲ್ ಗಾಂಧಿ ಕೇಂದ್ರೀತವಾಗಿರುವ ಯಾತ್ರೆಯ ಸಮಾರೋಪದಲ್ಲಿ ಪಾಲ್ಗೊಳ್ಳುವರೇ ಎಂಬ ಪ್ರಶ್ನೆ ಎದುರಾಗಿದೆ. ಏಕೆಂದರೆ ಈ ಹಿಂದೆ ‘ಜೋಡೊ’ ಯಾತ್ರೆಯಲ್ಲಿ ಈ ನಾಯಕರು ಪಾಲ್ಗೊಂಡಿರಲಿಲ್ಲ.

ಭಾರತ ದ್ವೇಷವನ್ನು ತಿರಸ್ಕರಿಸುತ್ತದೆ: ರಾಹುಲ್ ಪತ್ರ

‘ವಿಭಜಕ ಶಕ್ತಿಗಳು ವೈವಿಧ್ಯತೆಯನ್ನು ನಮ್ಮ ವಿರುದ್ಧ ತಿರುಗಿಸಲು ಯತ್ನಿಸುತ್ತಿವೆ. ಆದರೆ, ಭಾರತವು ದ್ವೇಷವನ್ನು ತಿರಸ್ಕರಿಸುತ್ತದೆ. ಇನ್ನು ಮುಂದೆ ಕೆಟ್ಟ ಅಜೆಂಡಾ ಮುಂದುವರಿಯಲು ಸಾಧ್ಯವಿಲ್ಲ’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.

‘ಭಾರತ್ ಜೋಡೊ’ ಯಾತ್ರೆಯ ಮುಂದುವರಿದ ಭಾಗವಾಗಿರುವ ಪಕ್ಷದ ಮುಂಬರುವ ‘ಹಾಥ್ ಸೆ ಹಾಥ್ ಜೋಡೊ’ ಅಭಿಯಾನದ ಅಂಗವಾಗಿ ಜನರನ್ನು ಉದ್ದೇಶಿಸಿ ಪತ್ರ ಬರೆದಿರುವ ರಾಹುಲ್, ‘ಇಂದು ನಮ್ಮ ಬಹುತ್ವಕ್ಕೂ ಅಪಾಯವಿದೆ. ವಿಭಜಕ ಶಕ್ತಿಗಳು ನಮ್ಮ ವೈವಿಧ್ಯತೆಯನ್ನು ನಮ್ಮ ವಿರುದ್ಧ ತಿರುಗಿಸಲು ಪ್ರಯತ್ನಿಸುತ್ತಿವೆ. ಕೇವಲ ಬೆರಳೆಣಿಕೆಯಷ್ಟು ಸಂಖ್ಯೆಯ ಈ ವಿಭಜಕ ಶಕ್ತಿಗಳಿಗೆ ಯಾವಾಗ ಜನರು ಅಸುರಕ್ಷಿತತೆ ಮತ್ತು ಭಯಭೀತರಾಗುತ್ತಾರೆ ಎಂಬುದು ತಿಳಿದಿದೆ. ಆದರೆ ಈ ಯಾತ್ರೆಯ ನಂತರ, ಈ ಕೆಟ್ಟ ಅಜೆಂಡಾವು ತನ್ನ ಮಿತಿಗಳನ್ನು ಹೊಂದಿದೆ ಎಂಬುದು ನನಗೆ ಮನವರಿಕೆಯಾಗಿದೆ. ಇದು ಇನ್ನು ಮುಂದೆ ಮುಂದುವರಿಯಲು ಸಾಧ್ಯವಿಲ್ಲ’ ಎಂದಿದ್ದಾರೆ.

ಪಕ್ಷದ ಹೊಸ ಅಭಿಯಾನದ ಬಗ್ಗೆ ಎಐಸಿಸಿ ಕೇಂದ್ರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ‘ರಾಹುಲ್ ಬರೆದಿರುವ ‍ಪತ್ರದ ಜೊತೆಗೆ, ಪಕ್ಷದ ಕಾರ್ಯಕರ್ತರು ಜನರಿಗೆ, ಜನವರಿ 26ರಿಂದ ಮಾರ್ಚ್ 26ರವರೆಗೆ ಬ್ಲಾಕ್, ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ನಡೆಯಲಿರುವ ‘ಹಾಥ್ ಸೆ ಹಾಥ್ ಜೋಡೊ’ ಅಭಿಯಾನ‌ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧದ ಚಾರ್ಜ್‌ಶೀಟ್ ಅನ್ನೂ ವಿತರಿಸಲಿದ್ದಾರೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT