ಮಂಗಳವಾರ, ಜೂನ್ 28, 2022
28 °C
ಜಮ್ಮು–ಕಾಶ್ಮೀರದ ಗ್ರಾಮ ವೇಯಾನ್‌ ಸಾಧನೆ

ಅರ್ಹ ಎಲ್ಲ ನಿವಾಸಿಗಳಿಗೆ ಲಸಿಕೆ ನೀಡಿದ ದೇಶದ ಮೊದಲ ಗ್ರಾಮ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ: ಉತ್ತರ ಕಾಶ್ಮೀರದ ಬಂಡಿಪೊರಾ ಜಿಲ್ಲೆಯ ವೇಯಾನ್‌ ತನ್ನ ಎಲ್ಲ ಅರ್ಹ ನಿವಾಸಿಗಳಿಗೆ ಕೋವಿಡ್‌–19 ಲಸಿಕೆ ನೀಡಿದ ದೇಶದ ಮೊದಲ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಗ್ರಾಮದಲ್ಲಿ 18 ವರ್ಷ ಮೇಲ್ಪಟ್ಟ ವಯಸ್ಸಿನ 362 ಜನರಿದ್ದು, ಎಲ್ಲರಿಗೂ ಕೋವಿಡ್‌ ಲಸಿಕೆ ನೀಡಲಾಗಿದೆ. ಈ ಗ್ರಾಮ ಶ್ರೀನಗರದಿಂದ 86 ಕಿ.ಮೀ. ಹಾಗೂ ಜಿಲ್ಲಾ ಕೇಂದ್ರವಾದ ಬಂಡಿಪೊರಾದಿಂದ 28 ಕಿ.ಮೀ. ದೂರದಲ್ಲಿದೆ.

‘ಲಸಿಕೆಯ ಮೊದಲ ಡೋಸ್‌ ನೀಡಲು ನಮ್ಮ ಸಿಬ್ಬಂದಿ ಗ್ರಾಮಕ್ಕೆ ತೆರಳಿದಾಗ, ಗ್ರಾಮಸ್ಥರು ಭಾರಿ ವಿರೋಧ ವ್ಯಕ್ತಪಡಿಸಿದರು. ಅವರಲ್ಲಿ ಲಸಿಕೆ ಬಗ್ಗೆ ಮನೆ ಮಾಡಿದ್ದ ಭಯವೇ ಇದಕ್ಕೆ ಕಾರಣವಾಗಿತ್ತು. ಬೇರೆ ದಾರಿ ಇಲ್ಲದೇ ಸಿಬ್ಬಂದಿ ವಾಪಸು ಬಂದರು’ ಎಂದು ವೈದ್ಯಾಧಿಕಾರಿ ಡಾ. ಮಸರತ್‌ ಇಕ್ಬಾಲ್‌ ಹೇಳಿದರು.

ಇಲ್ಲಿ ವಾಸಿಸುವವರಲ್ಲಿ ಬಹುತೇಕ ಜನರು ಅಲೆಮಾರಿಗಳು. ಕೋವಿಡ್‌ ಲಸಿಕೆಯನ್ನು ತೆಗೆದುಕೊಳ್ಳಲು ಯಾರೂ ಒಪ್ಪಲಿಲ್ಲ. ಆದರೆ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಲಸಿಕೆಯ ಮಹತ್ವವನ್ನು ವಿವರಿಸಿದ ನಂತರ ಎಲ್ಲರೂ ಕೊರೊನಾ ವೈರಸ್‌ ವಿರುದ್ಧದ ಲಸಿಕೆಯನ್ನು ಪಡೆಯಲು ಮುಂದಾದರು ಎಂದೂ ಅವರು ವಿವರಿಸಿದರು.

ಈ ಗ್ರಾಮಸ್ಥರಿಗೆ ಇಂಟರ್‌ನೆಟ್‌ ಸೌಲಭ್ಯ ಇಲ್ಲ. ಗ್ರಾಮಕ್ಕೆ ರಸ್ತೆ ಸಂಪರ್ಕವೂ ಇಲ್ಲ. ಉಳಿದೆಡೆ ಜನರು ಲಸಿಕೆ ಕೇಂದ್ರಗಳಿಗೆ ತೆರಳಿ, ಲಸಿಕೆ ಪಡೆದರೆ ಇಲ್ಲಿ ಮಾತ್ರ ಜಿಲ್ಲಾ ಆಡಳಿತವೇ ಗ್ರಾಮಕ್ಕೆ ತೆರಳಿ, ಅಲ್ಲಿನ ನಿವಾಸಿಗಳಿಗೆ ಲಸಿಕೆ ನೀಡಿತು. ಇದನ್ನು ‘ಜೆ–ಕೆ ಮಾದರಿ’ ಎಂದೇ ಕರೆಯಲಾಗುತ್ತಿದೆ.

‘ವೇಯಾನ್‌ ತಲುಪುವುದೇ ದುಸ್ತರ. ರಸ್ತೆ ಮೂಲಕ ತಲುಪಬಹುದಾದ ಕೊನೆಯ ಗ್ರಾಮವೆಂದರೆ ಅತ್ವಾಟೂ. ಅಲ್ಲಿಂದ 18 ಕಿ.ಮೀ. ಕಾಲ್ನಡಿಗೆ ಮೂಲಕ ಅಪಾಯಕಾರಿ ಪಯಣದ ನಂತರ ನಮ್ಮ ಸಿಬ್ಬಂದಿ ಆ ಗ್ರಾಮ ತಲುಪಿ, ಅರ್ಹರಿಗೆಲ್ಲ ಲಸಿಕೆ ನೀಡಿದರು’ ಎಂದು ಬಂಡಿಪೊರಾ ಜಿಲ್ಲಾ ಮುಖ್ಯ ವೈದ್ಯಾಧಿಕಾರಿ ಡಾ.ಬಶೀರ್‌ ಅಹ್ಮದ್‌ ಖಾನ್‌ ತಿಳಿಸಿದರು.

‘ಕೋವಿಡ್‌ ಲಸಿಕೆ ಆಂದೋಲನದಲ್ಲಿ ಜಮ್ಮು–ಕಾಶ್ಮೀರದ ಈ ಗ್ರಾಮ ಗಮನಾರ್ಹ ಸಾಧನೆ ದಾಖಲಿಸಿದೆ’ ಎಂದು ಜಮ್ಮು–ಕಾಶ್ಮೀರ ಸರ್ಕಾರದ ಮಾಧ್ಯಮ ಸಲಹೆಗಾರ ಯತೀಶ್‌ ಯಾದವ್‌ ಪ್ರತಿಕ್ರಿಯಿಸಿದರು.

ಇದನ್ನೂ ಓದಿ: ​

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು