ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳಿ ಮಾತೆ ಕುರಿತು ಹೇಳಿಕೆ: ಮಹುವಾ ವಿರುದ್ಧ ಕ್ರಮಕ್ಕೆ ಬಿಜೆಪಿ ಆಗ್ರಹ

ಹೇಳಿಕೆ ಸಮರ್ಥಿಸಿಕೊಂಡ ಟಿಎಂಸಿ ಸಂಸದೆ, ಭೋಪಾಲ್‌ ಮತ್ತು ಕೋಲ್ಕತ್ತದಲ್ಲಿ ಎಫ್‌ಐಆರ್‌
Last Updated 6 ಜುಲೈ 2022, 17:40 IST
ಅಕ್ಷರ ಗಾತ್ರ

ಕೋಲ್ಕತ್ತ: ಕಾಳಿ ಮಾತೆ ಕುರಿತು ಹೇಳಿಕೆ ನೀಡಿದ್ದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಬಿಜೆಪಿ ಪಟ್ಟು ಹಿಡಿದಿದೆ. ರಾಜ್ಯದ ಹಲವೆಡೆ ಮಹುವಾ ವಿರುದ್ಧ ಎಫ್‌ಐಆರ್ ದಾಖಲಾಗಿದೆ.ಮಧ್ಯಪ್ರದೇಶದ ಭೋಪಾಲ್‌ನಲ್ಲೂ ಒಂದು ಎಫ್‌ಐಆರ್ ದಾಖಲಾಗಿದೆ.

‘ಧರ್ಮದ ಬಗ್ಗೆ ಏನನ್ನೂ ಹೇಳಲು ಸಾಧ್ಯವಿಲ್ಲದ ಭಾರತದಲ್ಲಿ ಜೀವಿಸಲು ನಾನು ಬಯಸುವುದಿಲ್ಲ’ ಎಂದು ಮಹುವಾ ಹೇಳಿದ್ದಾರೆ ಎಂದು ಎನ್‌ಡಿ.ಟಿ.ವಿ. ವರದಿ ಮಾಡಿದೆ.

‘ನೂಪುರ್ ಶರ್ಮಾ ವಿರುದ್ಧ ತೆಗೆದುಕೊಂಡಂತಹ ಕ್ರಮವನ್ನೇ, ಮಹುವಾ ವಿರುದ್ಧವೂ ತೆಗೆದುಕೊಳ್ಳಬೇಕು. ಇನ್ನು ಹತ್ತು ದಿನಗಳಲ್ಲಿ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ನ್ಯಾಯಾಲಯದ ಮೆಟ್ಟಿಲೇರುತ್ತೇವೆ’ ಎಂದು ಪಶ್ಚಿಮ ಬಂಗಾಳ ಬಿಜೆಪಿ ಶಾಸಕ ಮತ್ತು ನಾಯಕ ಸುವೇಂಧು ಅಧಿಕಾರಿ ಆಗ್ರಹಿಸಿದ್ದಾರೆ.

ಬಿಜೆಪಿ ಆಗ್ರಹಕ್ಕೆ ಪ್ರತಿಕ್ರಿಯೆ ನೀಡಿರುವ ಮಹುವಾ, ‘ಬಿಜೆಪಿಯೇ, ನಾನು ಕಾಳಿ ಭಕ್ತೆ. ನಿಮ್ಮ ಗೂಂಡಾಗಳು, ನಿಮ್ಮ ಅಜ್ಞಾನ, ನಿಮ್ಮ ಪೊಲೀಸ್, ನಿಮ್ಮ ಟ್ರೋಲ್‌ಗಳಿಗೆ ನಾನು ಹೆದರುವುದಿಲ್ಲ. ಸತ್ಯಕ್ಕೆ ಯಾವುದೇ ಬಲದ ಬೆಂಬಲ ಬೇಕಿಲ್ಲ’ ಎಂದು ಟ್ವೀಟ್ ಮಾಡಿದ್ದಾರೆ. ಜತೆಗೆ,ಮಹುವಾ ಅವರು ಟ್ವಿಟರ್‌ನಲ್ಲಿ ಟಿಎಂಸಿಯ ಅಧಿಕೃತ ಖಾತೆಯನ್ನು ಅನುಸರಿಸುವುದನ್ನು ಕೈಬಿಟ್ಟಿದ್ದಾರೆ.

ಮಣಿಮೇಕಲೈಗೆ ಸಂಕಷ್ಟ

lನಿರ್ದೇಶಕಿ ಲೀನಾ ಮಣಿಮೇಕಲೈ ಮಾಡಿದ್ದ ಪೋಸ್ಟರ್‌ನ ಟ್ವೀಟ್ ಅನ್ನು ಟ್ವಿಟರ್ ಸಂಸ್ಥೆ ತನ್ನ ವೇದಿಕೆಯಿಂದ ತೆಗೆದುಹಾಕಿದೆ

lಲೀನಾ ಅವರಿಗೆ ವಿಡಿಯೊ ಮೂಲಕ ಜೀವಬೆದರಿಕೆ ಹಾಕಿದ ತಮಿಳುನಾಡಿನ ಕೊಯಮತ್ತೂರಿನ ಶಕ್ತಿಸೇನಾ ಹಿಂದೂ ಮಕ್ಕಳ್ ಇಯಕ್ಕಂ ಸಂಘಟನೆಯ ಮುಖ್ಯಸ್ಥೆ ಸರಸ್ವತಿ ಅವರನ್ನು ಬುಧವಾರ ಬಂಧಿಸಲಾಗಿದೆ

lಕಾಳಿ ಮಾತೆ ಕುರಿತ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸದಿರಲುಕೆನಡಾದ ಅಗಾಖಾನ್ ಮ್ಯೂಸಿಯಂ ನಿರ್ಧರಿಸಿದೆ. ಹಿಂದೂ ಸಮುದಾಯದ ಸದಸ್ಯರ ಮನಸ್ಸಿಗೆ ನೋವು ಉಂಟು ಮಾಡಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಹೇಳಿದೆ

lನಿರ್ದೇಶಕಿ ಲೀನಾ ಹಾಗೂ ಇತರರ ವಿರುದ್ಧ ಬಿಹಾರದ ಪ್ರತ್ಯೇಕ ಕೋರ್ಟ್‌ಗಳಲ್ಲಿ ಬುಧವಾರ ಪ್ರಕರಣಗಳು ದಾಖಲಾಗಿವೆ. ಪಟ್ನಾ ಹಾಗೂ ಮುಜಾಫ್ಫರ್‌ಪುರ ಕೋರ್ಟ್‌ಗಳಲ್ಲಿ ವಕೀಲರ ತಂಡಗಳು ದೂರು ನೀಡಿವೆ

l‘ನಿಮ್ಮ ತಲೆಯನ್ನು ನಿಮ್ಮ ದೇಹದಿಂದ ಬೇರ್ಪಡಿಸಬೇಕೇ’ ಎಂದು ಅಯೋಧ್ಯೆಯ ದೇವಾಲಯವೊಂದರ ಅರ್ಚಕ ಮಹಾಂತ ರಾಜು ದಾಸ್ ಅವರು ಬೆದರಿಕೆ ಹಾಕಿದ್ದಾರೆ

lತಮಿಳು ಚಿತ್ರ ನಿರ್ದೇಶಕ ಸುಸಿ ಗಣೇಶನ್ ಅವರ ಮೇಲೆ ‘ಮೀಟೂ’ ಆರೋಪ ಮಾಡಿದ್ದ ಲೀನಾ ಅವರನ್ನು ಮದ್ರಾಸ್ ಹೈಕೋರ್ಟ್ ಬುಧವಾರ ತರಾಟೆಗೆ ತೆಗೆದುಕೊಂಡಿದೆ

***

ಬಿಜೆಪಿ ನಾಯಕರಿಗೆ ಒಂದು ಕಾನೂನು, ಟಿಎಂಸಿ ನಾಯಕರಿಗೆ ಬೇರೆ ಕಾನೂನು ಇದೆಯೇ? ಮಹುವಾ ಅವರನ್ನು ತಕ್ಷಣವೇ ಬಂಧಿಸಬೇಕು.

- ಸುವೇಂಧು ಅಧಿಕಾರಿ, ಪಶ್ಚಿಮ ಬಂಗಾಳ ಬಿಜೆಪಿ ನಾಯಕ

ನಾನು ಹೇಳಿದ ರೀತಿಯಲ್ಲಿ ಕಾಳಿಯನ್ನು ಪೂಜಿಸುವುದಿಲ್ಲ ಎಂಬುದರ ಬಗ್ಗೆ ಬಿಜೆಪಿ ಪ್ರಮಾಣ ಪತ್ರ ಸಲ್ಲಿಸಲಿ. ನಾನು ತಪ್ಪು ಎಂದು ಸಾಬೀತು ಮಾಡಲಿ

- ಮಹುವಾ ಮೊಯಿತ್ರಾ, ಟಿಎಂಸಿ ಸಂಸದೆ

ಮಹುವಾ ಮೇಲಿನ ದಾಳಿಯಿಂದ ದಿಗ್ಭ್ರಮೆಯಾಗಿದೆ. ಧರ್ಮದ ವಿಚಾರವಾಗಿ ಎಲ್ಲರಿಗೂ ಗೊತ್ತಿರುವುದನ್ನು ಬಹಿರಂಗವಾಗಿ ಹೇಳದ ಸ್ಥಿತಿಗೆ ಬಂದಿದ್ದೇವೆ

- ಶಶಿ ತರೂರ್, ಕಾಂಗ್ರೆಸ್ ಸಂಸದ

ನಾನು ಹೇಳಿದ ರೀತಿಯಲ್ಲಿ ಕಾಳಿಯನ್ನು ಪೂಜಿಸುವುದಿಲ್ಲ ಎಂಬುದರ ಬಗ್ಗೆ ಬಿಜೆಪಿ ಪ್ರಮಾಣ ಪತ್ರ ಸಲ್ಲಿಸಲಿ. ನಾನು ತಪ್ಪು ಎಂದು ಸಾಬೀತು ಮಾಡಲಿ

- ಮಹುವಾ ಮೊಯಿತ್ರಾ, ಟಿಎಂಸಿ ಸಂಸದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT