ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ, ಚಿತಾಗಾರದ ದಾಖಲೆಯಲ್ಲಿ ವ್ಯತ್ಯಾಸ: ಸತ್ತವರು 66, ಅಂತ್ಯಸಂಸ್ಕಾರ 462

ಕೋವಿಡ್‌–19: ಸರ್ಕಾರ, ಚಿತಾಗಾರದ ದಾಖಲೆಯಲ್ಲಿ ವ್ಯತ್ಯಾಸ
Last Updated 25 ಏಪ್ರಿಲ್ 2021, 19:06 IST
ಅಕ್ಷರ ಗಾತ್ರ

ಕಾನ್ಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಕಾನ್ಪುರದಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆಗೆ ಸಂಬಂಧಿಸಿದಂತೆ ಸರ್ಕಾರ ನೀಡುತ್ತಿರುವ ಲೆಕ್ಕಕ್ಕೂ, ಚಿತಾಗಾರಗಳು ನೀಡುತ್ತಿರುವ ಲೆಕ್ಕಕ್ಕೂ ಭಾರಿ ವ್ಯತ್ಯಾಸವಿದೆ.

ಏಪ್ರಿಲ್ 19ರಿಂದ ಏಪ್ರಿಲ್ 24ರ ನಡುವೆ ಕಾನ್ಪುರದಲ್ಲಿ 66 ಮಂದಿ ಮಾತ್ರ ಕೋವಿಡ್‌ನಿಂದ ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತವು ತನ್ನ ಪ್ರಕಟಣೆಯಲ್ಲಿ ಹೇಳಿದೆ. ಆದರೆ, ಇದೇ ಅವಧಿಯಲ್ಲಿ ಕಾನ್ಪುರದ ಎರಡು ಚಿತಾಗಾರಗಳಲ್ಲಿ 462 ಶವಸಂಸ್ಕಾರ ನಡೆಸಲಾಗಿದೆ. ಚಿತಾಗಾರಗಳ ಎದುರು ಜನರು, ಶವಗಳನ್ನು ಇರಿಸಿಕೊಂಡು ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ ಇದೆ.

‘ಪ್ರತಿದಿನ ದಹನ ಮಾಡುತ್ತಿರುವ ಶವಗಳ ಸಂಖ್ಯೆಯಲ್ಲಿ ಹಲವು ಪಟ್ಟು ಏರಿಕೆಯಾಗಿದೆ. ಈ ಹಿಂದೆ ಪ್ರತಿದಿನ 10 ಶವಗಳನ್ನು ಸುಡುತ್ತಿದ್ದೆವು. ಆದರೆ, ಈಗ ಪ್ರತಿದಿನ 50ಕ್ಕೂ ಹೆಚ್ಚು ಶವಗಳನ್ನು ಸುಡುತ್ತಿದ್ದೇವೆ. ಏಪ್ರಿಲ್ 21ರಂದು ಒಂದೇ ದಿನ 91 ಶವವನ್ನು ಸುಟ್ಟಿದ್ದೇವೆ’ ಎಂದು ಭೈರೋಘಾಟ್ ಚಿತಾಗಾರದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಈ ಅವಧಿಯಲ್ಲಿ, ಇಲ್ಲಿ 406 ಶವಗಳನ್ನು ದಹನ ಮಾಡಲಾಗಿದೆ.

ಭಗವತ್‌ಘಾಟ್‌ನಲ್ಲಿ 56 ಶವಗಳನ್ನು ದಹನ ಮಾಡಲಾಗಿದೆ. ಇದರ ಜತೆಯಲ್ಲೇ ಮುಸ್ಲಿಮರ ಖಬರಸ್ತಾನದಲ್ಲಿ ನೂರಾರು ಶವಗಳ ಅಂತ್ಯಸಂಸ್ಕಾರ ಮಾಡಲಾಗಿದೆ. ಇವುಗಳ ಮಾಹಿತಿ ಲಭ್ಯವಿಲ್ಲ. ಹೀಗಾಗಿ ಸರ್ಕಾರ ನೀಡುತ್ತಿರುವ ಲೆಕ್ಕಕ್ಕೂ, ವಾಸ್ತವದಲ್ಲಿ ಕೋವಿಡ್‌ನಿಂದ ಮೃತಪಡುತ್ತಿರುವವರ ಸಂಖ್ಯೆಗೂ ಭಾರಿ ವ್ಯತ್ಯಾಸವಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

ಈ ಆರೋಪವನ್ನು ಜಿಲ್ಲಾಡಳಿತ ನಿರಾಕರಿಸಿದೆ. ಕೋವಿಡ್‌ನಿಂದ ದಾಖಲಾಗುತ್ತಿರುವವರ ಮತ್ತು ಮೃತಪಡುತ್ತಿರುವವರ ವಿವರವನ್ನು ಪೋರ್ಟಲ್‌ನಲ್ಲಿ ನಮೂದಿಸುತ್ತಿದ್ದೇವೆ. ಹೀಗಾಗಿಮೃತರ ಸಂಖ್ಯೆಯನ್ನು ಮುಚ್ಚಿಡಲು ಸಾಧ್ಯವೇ ಇಲ್ಲ ಎಂದು ಜಿಲ್ಲಾಡಳಿತವು ಹೇಳಿದೆ.

ಕಾನ್ಪುರದಲ್ಲಿ ಕೋವಿಡ್‌ನಿಂದ ಈವರೆಗೆ 1,060 ಮಂದಿ ಮೃತಪಟ್ಟಿದ್ದಾರೆ ಎಂದು ಸರ್ಕಾರದ ದಾಖಲೆಗಳು ಹೇಳುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT